×
Ad

ಉಳ್ಳಾಲ ದರ್ಗಾ ಉರೂಸ್ ಯಶಸ್ವಿಯಾಗಿ ನಿರ್ವಹಣೆಯಾಗಿದೆ : ಹಾಜಿ ಅಬ್ದುಲ್ ರಶೀದ್

Update: 2022-03-08 16:18 IST

ಉಳ್ಳಾಲ: 25 ದಿನಗಳ ಕಾಲ ನಡೆದ ಉಳ್ಳಾಲ ದರ್ಗಾ ಉರೂಸ್ ಯಶಸ್ವಿಯಾಗಿ ನಿರ್ವಹಣೆಯಾಗಿದೆ. ನಿರೀಕ್ಷೆಗೂ ಮೀರಿದ ರೀತಿಯಲ್ಲಿ, ಯಾವುದೇ ತೊಂದರೆಯಾಗದಂತೆ ನಡೆದಿದೆ. ಇದಕ್ಕೆ ಊರು ಜನರ, ಆಡಳಿತ ಮಂಡಳಿ ಸದಸ್ಯರ , ಸಿಬ್ಬಂದಿ ವರ್ಗ ಹಾಗೂ ಸ್ವಯಂ ಸೇವಕರ ಕಾರ್ಯ ವೈಖರಿ ಕಾರಣ. ಅವರಿಗಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಅವರು ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉರೂಸ್ ನಡೆಸಲು ಕೊರೊನ ಅಡ್ಡಿಯಾಗಿತ್ತು. ಎರಡು ಬಾರಿ ಮುಂದೂಡುವ ಪರಿಸ್ಥಿತಿ ಬಂತು. ಡಿಸೆಂಬರ್ ನಲ್ಲಿ ನಡೆಸಲು ಜಿಲ್ಲಾಡಳಿತ ಸಮ್ಮತ್ತಿಸಲಿಲ್ಲ. ತದನಂತರ ಫೆಬ್ರವರಿ ತಿಂಗಳಲ್ಲಿ ನಡೆಸಲು ನಿರ್ಧರಿಸಿ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತದ ಮೌನ ಸಮ್ಮತಿ ಅನುಮತಿ ಎಂದು ಭಾವಿಸಿ ನಾವು ಉರೂಸು ಕಾರ್ಯಕ್ರಮ ಆರಂಭಿಸಿದೆವು. ಈ ವೇಳೆ ಜಿಲ್ಲಾಡಳಿತ ಉಳ್ಳಾಲ ಉರೂಸ್ ನಡೆಯುತ್ತಿದೆ ಬೀಚ್ ಗೆ ಯಾರು ಹೋಗಬಾರದು ಎಂದು ಸೂಚನೆ ನೀಡಿತ್ತು. ನಾವು ಆದೇಶವಾಗಿ ಪಾಲಿಸಿದೆವು. ಮುಂದೆ ಉರೂಸಿನ ಸಮಾರೋಪದ  ತನಕ ಎಲ್ಲಾ ರೀತಿಯಲ್ಲಿ ಜಿಲ್ಲಾಡಳಿತ ಸಹಕಾರ  ನೀಡಿದೆ. ಕಾರ್ಯಕ್ರಮ ಜಿಲ್ಲಾಡಳಿತಕ್ಕೂ ಖುಷಿ ತಂದಿದೆ. ಅದೇ ರೀತಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಸಹಕಾರ ಬಹಳಷ್ಟು ಸಿಕ್ಕಿದೆ. ಶಾಸಕ ಖಾದರ್ ವತಿಯಿಂದ ಹಾಗೂ ಉಳ್ಳಾಲ ನಗರ ಸಭೆ ವತಿಯಿಂದ ಬಹಳಷ್ಟು ಸೇವೆ ಆಗಿದೆ. ಬೆಂಗಳೂರಿನ ಕುಮಾರ್ ಎಂಬವರ ಮೂಲಕ ಪೈಂಟಿಂಗ್ ಇನ್ನಿತರ ಕಾರ್ಯಗಳು ಆಗಿವೆ.

ಉರೂಸಿಗೆ ಅನುಕೂಲ ಆಗುವ ದೃಷ್ಟಿಯಿಂದ ‌ದೈವಸ್ಥಾನದ ಕೋಲ ಕಾರ್ಯಕ್ರಮ ಕೂಡ ಮುಂದೂಡಿ ದೈವಸ್ಥಾನದ ಆಡಳಿತ ಮಂಡಳಿ ಸೌಹಾರ್ದತೆ ಮೆರೆದಿದೆ. ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

25 ದಿನಗಳ ಕಾರ್ಯಕ್ರಮದಲ್ಲಿ  ವಿವಿಧ ಸೌಹಾರ್ದ ಕಾರ್ಯಕ್ರಮ ನಡೆದಿವೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು  ಭಕ್ತಾದಿಗಳು ಆಗಮಿಸಿದ್ದರು. 27 ಟನ್ ಅಕ್ಕಿ, 15 ಟನ್ ಮಾಂಸದ ಅನ್ನದಾನಕ್ಕೆ ಉಪಯೋಗಿಸಿ 24 ಗಂಟೆ ಗಳ ಕಾಲ ಅನ್ನದಾನ ವಿತರಣೆ ಮಾಡಲಾಗಿದೆ. ಸುಮಾರು ಮೂರು ಸಾವಿರ ಸ್ವಯಂ ಸೇವಕರು ಕಾರ್ಯ ಪ್ರವೃತ್ತರಾಗಿದ್ದ ಕಾರಣ ಪೊಲೀಸರಿಗೆ ದೊಡ್ಡ ಹೊರೆ ಬೀಳಲಿಲ್ಲ.

ಉರೂಸ್ ಸಂದರ್ಭದಲ್ಲಿ ಕಾರ್ಯ ನಿರತರಾದ  ಬಹಳಷ್ಟು ಇಲಾಖೆ ಗಳ ಕಾರ್ಯ ವೈಖರಿ ಮೆಚ್ಚತಕ್ಕದ್ದು . ಅದೇ ರೀತಿ ಲೈಟಿಂಗ್ ಹಾಗೂ ಧ್ವನಿ ವರ್ಧಕ ಬಹಳಷ್ಟು ಉತ್ತಮವಾಗಿತ್ತು. ಅವರ ಸೇವೆ ಗಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಒಗ್ಗಟ್ಟು ನಮ್ಮಲ್ಲಿ ಇರಬೇಕು ಎಂದು ಬಯಸುತ್ತೇವೆ. ನಮಗೆ ಸೌಹಾರ್ದತೆ ಮುಖ್ಯ. ದರ್ಗಾ ಅಧೀನದಲ್ಲಿರುವ ಎಲ್ಲಾ ಶಾಲೆಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ  ಶುಲ್ಕದಲ್ಲಿ ವಿಶೇಷ ರಿಯಾಯಿತಿ ಅಥವಾ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದೆ. ಎಲ್ಲರೂ  ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸುದ್ದಿ ಗೋಷ್ಠಿಯಲ್ಲಿ ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಬಾವಾ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ  ತ್ವಾಹಾ ಹಾಜಿ, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಲೆಕ್ಕ ಪರಿಶೋಧಕ ಯುಟಿ ಇಲ್ಯಾಸ್, ಕಾರ್ಯದರ್ಶಿ ನೌಶಾದ್ ಅಲಿ,  ಆಝಾದ್ ಇಸ್ಮಾಯಿಲ್, ಎ.ಕೆ.ಮೊಯ್ದಿನ್, ಅಲಿ ಮೋನು, ಹಮೀದ್ ಕೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News