ಬ್ಯಾರಿ ಅಕಾಡಮಿಯಿಂದ ಮಹಿಳಾ ದಿನಾಚರಣೆ
ಮಂಗಳೂರು, ಮಾ.8: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳವಾರ ಅಕಾಡಮಿಯ ಕಚೇರಿಯಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಸದಸ್ಯೆ ಚಂಚಲಾಕ್ಷಿ ಪುರುಷ ಪ್ರಧಾನ ಸಮಾಜ ಎಂಬ ಕಲ್ಪನೆ ಮಾಯವಾಗಿದ್ದು, ಇಂದು ಪ್ರಪಂಚದಾದ್ಯಂತ ತಾವೇನು ಕಡಿಮೆ ಇಲ್ಲ ಎಂಬಂತೆ ಮಹಿಳೆಯರು ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಲೇಖಕಿ ಹಫ್ಸಾ ಬಾನು ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಆಯಿಶಾ ಪೆರ್ನೆ, ರಹೀನಾ ತೊಕ್ಕೊಟ್ಟು ಅತಿಥಿಗಳಾಗಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬ್ಯಾರಿ ಮಹಿಳಾ ಸಾಧಕರಾದ ಹಫ್ಸಾ ಬಾನು (ಲೇಖಕಿ), ಮರಿಯಮ್ ಇಸ್ಮಾಯಿಲ್ (ಸಾಹಿತಿ), ಡಾ. ಶಾಕೀರಾ ಇರ್ಫಾನ (ಶಿಕ್ಷಣ), ಡಾ. ಶಮ್ನ ಮಿನಾಝ್ (ವೈದ್ಯಕೀಯ), ಹಸೀನಾ ಇಸ್ಮಾಯಿಲ್ (ಸಮಾಜ ಸೇವೆ) ಅವರನ್ನು ಸನ್ಮಾನಿಸಲಾಯಿತು.
ಪ್ರೌಢ ಶಾಲೆ, ಪಿಯುಸಿ, ಪದವಿ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಹರ್ಶಿದಾ ಹಾಗೂ ಸಾರ್ವಜನಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಶೈಮಾ ಮಿನಾಝ್ ಮತ್ತು ದ್ವಿತೀಯ ಸ್ಥಾನಗಳಿಸಿದ ಖದೀಜತುಲ್ ಕುಬ್ರಾ ಅವರಿಗೆ ಬಹುಮಾನ ವಿತರಿಸಲಾಯಿತು.
ಅಕಾಡಮಿಯ ಸದಸ್ಯರಾದ ರೂಪಾಶ್ರೀ ವರ್ಕಾಡಿ ಸ್ವಾಗತಿಸಿದರು. ಸುರೇಖಾ ಉಪಸ್ಥಿತರಿದ್ದರು.