×
Ad

ಮಂಗಳೂರಿನಲ್ಲಿ ಕುದುರೆ ಸವಾರಿ ಮಾಡಿ ಗಮನ ಸೆಳೆದ ಯುವತಿಯರು

Update: 2022-03-08 20:35 IST

ಮಂಗಳೂರು, ಮಾ.8:ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳೂರು ಹಾರ್ಸ್ ರೈಡಿಂಗ್ ಅಕಾಡಮಿಯು ಮಂಗಳವಾರ ನಗರದಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಮುದ ನೀಡಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಸಂಜೆಯ ವೇಳೆ ಮಹಿಳಾ ಜಾಕಿಗಳು ಕುದುರೆಗಳ ಮೇಲೆ ಕುಳಿತು ನಗರ ಪ್ರದಕ್ಷಿಣೆ ಮಾಡಿದರು. ಸುಮಾರು 7 ಕುದುರೆ, 1 ಕುದುರೆ ಗಾಡಿ, ಒಂದು ವಿಕ್ಟೋರಿಯಾ ರಥದ ಜೊತೆಗೆ ಬಾಲಕಿಯರ ಸಹಿತ 9 ಮಂದಿ ಯುವತಿಯರು ಸವಾರಿ ಮಾಡಿದರು.

‘ನಾಳೆಗಾಗಿ ಮಹಿಳೆಯರು’ ಎನ್ನುವ ಘೋಷಣೆಯೊಂದಿಗೆ ನಡೆದ ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಹಾರ್ಸ್ ರೈಡ್ ತಂಡವು ನಗರದ ಕ್ಲಾಕ್‌ಟವರ್, ಹಂಪನಕಟ್ಟೆ, ಕೆಎಸ್ ರಾವ್ ರಸ್ತೆ, ಕೊಡಿಯಾಲ್‌ಬೈಲ್, ಪಿವಿಎಸ್, ಎಂಜಿ ರಸ್ತೆ, ಬಿಜೈ, ಸರ್ಕ್ಯೂಟ್ ಹೌಸ್ ರಸ್ತೆಯುದ್ದಕ್ಕೂ ಸವಾರಿ ಮಾಡಿತು.

ಈ ಸಂದರ್ಭ ಸಾರ್ವಜನಿಕರು ರಸ್ತೆಯ ನಾನಾ ಕಡೆಯಲ್ಲಿ ಮಹಿಳಾ ಜಾಕಿಗಳಿಗೆ ಹೂಗುಚ್ಚ ನೀಡಿ ಮಹಿಳಾ ದಿನಕ್ಕೆ ಶುಭ ಕೋರಿದರು. 

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕುದುರೆ ಸವಾರಿಗೆ ಚಾಲನೆ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಂಗಳೂರು ಹೋರ್ಸ್ ರೈಡಿಂಗ್ ಅಕಾಡಮಿಯು ವಿಶಿಷ್ಟ ಕಾರ್ಯಕ್ರಮದ ಮೂಲಕ ವಿಶ್ವ ಮಹಿಳಾ ದಿನ ಆಚರಿಸುತ್ತಿರುವುದು ಶ್ಲಾಘನೀಯ. ಧೈರ್ಯ ಮತ್ತು ಸಾಹಸಕ್ಕೆ ಪ್ರತೀಕವಾಗಿರುವ ಮಹಿಳೆಯು ಅಬಲೆ ಅಲ್ಲ, ಸಬಲೆ ಎಂಬುದಕ್ಕೆ ಈ ಕುದುರೆ ಸವಾರಿಯು ಸಾಕ್ಷಿಯಾಗಿದೆ ಎಂದರು.

ಅಲ್ಲದೆ ಕುದುರೆ ಸವಾರಿಗೆ ಸಜ್ಜಾಗಿ ನಿಂತಿದ್ದ ಮಹಿಳೆಯರಿಗೆ ಜಿಲ್ಲಾಧಿಕಾರಿ ಹೂ ನೀಡಿ ಗೌರವಿಸಿದರು.

ಮಂಗಳೂರು ಹಾರ್ಸ್ ರೈಡಿಂಗ್ ಅಕಾಡಮಿಯ ಸಂಸ್ಥಾಪಕ ಅವಿನಂದನ್ ಅಚ್ಚೇನಹಳ್ಳಿ ಮಾತನಾಡಿ, ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಈ ವಿಶೇಷ ಕಾರ್ಯಕ್ರಮದಲ್ಲಿ ಮಹಿಳೆಯರೇ ಕುದುರೆ ಸವಾರಿ ಮಾಡುತ್ತಿದ್ದಾರೆ. ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕುದುರೆ ಸವಾರಿಯ ಕುರಿತು ಜನರಲ್ಲಿ ಜಾಗೃತಿ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News