×
Ad

ಮಹಿಳೆಯರಿಲ್ಲದ ಫೋಟೊ ಪ್ರಕಟಿಸಿ ಮಹಿಳಾ ದಿನಾಚರಣೆಗೆ ಶುಭಕೋರಿ ನಗೆಪಾಟಲಿಗೀಡಾದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Update: 2022-03-08 23:27 IST

ಚೆನ್ನೈ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಮಾಡಿರುವ ಟ್ವೀಟ್‌ ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ. 

“ನಮ್ಮ ನಾರಿಶಕ್ತಿ ಹೊಂದಿರುವ ಬಲ, ಅವರು ನೀಡುವ ಕಾಳಜಿ, ಪ್ರತಿಯೊಂದು ಅಂಶದಲ್ಲೂ ಅವರು ಹೊಂದಿರುವ ಬಹು ಆಯಾಮದ ವಿಧಾನವು ನಮ್ಮ ಮಹಿಳೆಯರನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಿದ್ದಕ್ಕಾಗಿ ನಮ್ಮ ಎಲ್ಲಾ ತಾಯಿ ಮತ್ತು ಸಹೋದರಿಯರಿಗೆ ಧನ್ಯವಾದಗಳು! ಮಹಿಳಾ ದಿನಾಚರಣೆಯ ಶುಭಾಶಯಗಳು!” ಎಂದು ಬರೆದು ಅಣ್ಣಾಮಲೈ ಟ್ವೀಟ್‌ ಮಾಡಿದ್ದಾರೆ. ಆದರೆ, ಫೋಟೋದಲ್ಲಿ ಯಾವುದೇ ಮಹಿಳೆಯರು ಇಲ್ಲದಿರುವುದು ಟ್ರಾಲ್‌ಗಳಿಗೆ ಆಹಾರವಾಗಿದೆ. 

ಅಣ್ಣಾಮಲೈ ಮಾಡಿರುವ ಟ್ವೀಟ್‌ನಲ್ಲಿ ನರೇಂದ್ರ ಮೋದಿ, ಜೆಪಿ ನಡ್ಡಾ ಹಾಗೂ ಅಣ್ಣಾಮಲೈ ಅವರ ಚಿತ್ರಗಳು ಮಾತ್ರ ಇವೆ. ಮಹಿಳಾ ದಿನಾಚರಣೆಗೆ ಯಾವುದೇ ಮಹಿಳೆಯರ ಫೋಟೊಗಳನ್ನು ಅಳವಡಿಸದೇ ಶುಭಾಶಯ ಸಲ್ಲಿಸಿರುವುದು ಸದ್ಯ ತಮಿಳುನಾಡಿನಾದ್ಯಂತ ನಗೆಪಾಟಲಿಗೀಡಾಗಿದೆ. 

“ಅದ್ಭುತ. ಮಹಿಳಾ ದಿನದ ಪೋಸ್ಟ್‌ನಲ್ಲಿ ಒಬ್ಬ ಮಹಿಳೆಯೂ ಇಲ್ಲ.” ಎಂದು ಸುದರ್ಶನ್‌ ಎಂಬವರು ಕಾಲೆಳೆದಿದ್ದಾರೆ. 

ಇನ್ನು ಬಿಜೆಪಿ ವಿರುದ್ಧ ನೇರ ದಾಳಿಗೂ ಈ ಪೋಸ್ಟ್‌ ಬಳಕೆಯಾಗಿದ್ದು, “ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ನಿಮ್ಮ ಪಕ್ಷ ಮೊದಲ ಸ್ಥಾನದಲ್ಲಿದೆ. ಮೊದಲು ಮಹಿಳೆಯರನ್ನು ಕೇವಲ ವಸ್ತು ಎಂದು ಪರಿಗಣಿಸುವ ಮನಸ್ಥಿತಿಯಿಂದ ಹೊರಬನ್ನಿ. ಅಷ್ಟು ಸಾಕು.!” ಎಂದು ಮಧು ಎಂಬವರು ತಮಿಳಿನಲ್ಲಿ ಟ್ವೀಟ್‌ ಮಾಡಿದ್ದಾರೆ. "ಮಹಿಳೆಯರಿಲ್ಲದ ಫೋಟೊವನ್ನು ಪ್ರಕಟಿಸುವ ಮೂಲಕ ಅಣ್ಣಾಮಲೈ ಮಹಿಳೆಯರಿಗೆ ಭಾರೀ ಗೌರವ ಸಲ್ಲಿಸಿದ್ದಾರೆ" ಎಂದು ಬಳಕೆದಾರರೊಬ್ಬರು ಕುಹಕವಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News