×
Ad

ಫೀಸ್ ಕಟ್ಟಲು ಹಣ ಕಡಿಮೆ ಇದ್ದಾಗ ಕುಂಬ್ರದ ಶಾಫಿ ಸಹಾಯ ಮಾಡಿದರು: ಪುರಂದರ ಶೆಟ್ಟಿ

Update: 2022-03-09 11:23 IST

ಪುತ್ತೂರು : ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಅರಣ್ಯ ಸಂರಕ್ಷಣಾಧಿಕಾರಿ ನೇರ ನೇಮಕಾತಿ ಪರೀಕ್ಷೆಯಲ್ಲಿ (ACF) ರಾಜ್ಯಕ್ಕೆ ಎರಡನೇ ರ‍್ಯಾಂಕ್ ನೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ ಗೊಂಡಿರುವ ಒಳಮೊಗ್ರು ಗ್ರಾಮದ  ಹಸ್ತಾ ಶೆಟ್ಟಿ ಮುಡಲ ಇವರನ್ನು ಕುಂಬ್ರ ವರ್ತಕರ ಸಂಘದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಂಘದ ಸ್ಥಾಪಕ ಅಧ್ಯಕ್ಷ ಶಾಮ್ ಸುಂದರ್ ರೈ ಕೊಪ್ಪಳ  ಮಾತನಾಡಿ, ಬಡತನದಲ್ಲಿ ಇದ್ದು ಮೇಸ್ತ್ರಿ ಕಾರ್ಮಿಕರಾಗಿ ದುಡಿಯುತ್ತಿದ್ದ ಪುರಂದರ ಶೆಟ್ಟಿ ಅವರು ತನ್ನ ಮಗಳಿಗೆ ಶಿಕ್ಷಣ ಕೊಡಿಸಿ ಅವರು ಕಲಿತು ಉನ್ನತ ಹುದ್ದೆಗೆ ಏರಿರುವುದು ನಮ್ಮ ಊರಿಗೆ ತುಂಬಾ ಹೆಮ್ಮೆಯ ವಿಷಯ, ನಿಮ್ಮಿಂದಾಗಿ ಇನ್ನಷ್ಟು ಬಡವರಿಗೆ ಸೇವೆ ಸಿಗಲಿ ಎಂದು  ಹಸ್ತಾ ಶೆಟ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ  ಹಸ್ತಾ ಶೆಟ್ಟಿಯವರು 'ನನಗೆ ವರ್ತಕ ಸಂಘದಿಂದ ಸನ್ಮಾನಗೊಳ್ಳಲು ತುಂಬಾ ಖುಷಿ ಆಗುತ್ತಿದೆ. ಯಾಕೆಂದರೆ ನನಗೆ ಕಾಲೇಜು ಸೇರಲು ಫೀಸ್ ಕಟ್ಟಲು ಹಣದ ಅಡಚಣೆ ಬಂದಾಗ ವರ್ತಕರ ಸಂಘದ ಸದಸ್ಯ ಅಡಿಕೆ ವರ್ತಕರೊಬ್ಬರು ಧನ ಸಹಾಯ ಮಾಡಿದರಿಂದ ನಾನು ಈ ಹುದ್ದೆಗೆ ಸೇರಲು ಸಾಧ್ಯವಾಯಿತು' ಎಂದು ತಮ್ಮ ಕಷ್ಟದ ಬದುಕನ್ನು ನೆನಪಿಸಿಕೊಂಡರು.

ಮುಂದೆ ನನ್ನಿಂದ ಯಾವ ಸಹಕಾರ ಸಂಘಕ್ಕೆ ಅಗತ್ಯವಿದೆಯೋ ಅದನ್ನು ನಾನು ಕೊಡಲು ಸಿದ್ಧನಿದ್ದೇನೆ. ಅದರಂತೆ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ನೀಡಲು ಉತ್ತೇಜಿಸಬೇಕೆಂದು ಕರೆ ನೀಡಿದರು.

ಮಾಧವ ರೈ ಕುಂಬ್ರ ಅಧ್ಯಕ್ಷತೆ ವಹಿಸಿದ್ದರು. ಶಂಸುದ್ದೀನ್ ಎ. ಆರ್ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥನೆ ಮಾಡಿದರು. ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು.

ಪ್ರಧಾನ ಕಾರ್ಯದರ್ಶಿ ಅಝರ್ ಷ ಕುಂಬ್ರ, ನಿಶ್ಮಿತಾ ಕಾಂಪ್ಲೆಕ್ಸ್ ನ ಪುರಂದರ ರೈ ಕೋರಿಕಾರು, ಉದಯ ಆಚಾರ್ಯ, ಗೋಪಾಲ ರೈ,  ರೇಶ್ಮಾ, ಮೇಲ್ವಿನ್, ಶುಭ ಉದಯ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಮೇಲ್ವಿನ್ ಮೊಂತೇರೋ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಗದ್ಗದಿತರಾದ ಪುರಂದರ ಶೆಟ್ಟಿ

ತನ್ನ ಮಗಳು ಸನ್ಮಾನ ಸ್ವೀಕರಿಸಿದಾಗ ಮಾತನಾಡಿದ  ಹಸ್ತ ಅವರ ತಂದೆ ಪುರಂದರ ಶೆಟ್ಟಿಯವರು ನಾನು ತುಂಬಾ ಕಷ್ಟದಲ್ಲಿದ್ದ ಕಾಲ ಮೂವರು ಮಕ್ಕಳನ್ನು ಓದಿಸುತ್ತಿದ್ದೆ. ಈ ಸಮಯದಲ್ಲಿ ಮಗಳನ್ನು ಕಾಲೇಜಿಗೆ ಸೇರಿಸಲು ಹೋದಾಗ ನನ್ನಲ್ಲಿ ತಕ್ಷಣ 22,000 ರೂ. ಕಟ್ಟಲು ಹೇಳಿದರು. ನನ್ನಲ್ಲಿ 10,000 ರೂ. ಮಾತ್ರ ಇತ್ತು. ತಕ್ಷಣ ಕುಂಬ್ರದ ಶಾಫಿ ಅವರಿಗೆ ಫೋನ್ ಮಾಡಿದಾಗ ಆಗಲೇ ಬಾಕಿ ಹಣವನ್ನು ಬ್ಯಾಂಕ್ ಮೂಲಕ ಕಳುಹಿಸಿದರು. ಮರುದಿನವಾದರೆ ನಮಗೆ ಆ ಸೀಟ್ ಸಿಗುತ್ತಿರಲಿಲ್ಲ ಎಂದು ಗದ್ಗದಿತರಾಗಿ  ಮುಂದಕ್ಕೆ ಮಾತು ಬಾರದೆ ಅರ್ಧಕ್ಕೆ ನಿಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News