×
Ad

ಜಿಎಸ್‌ಟಿಯಿಂದ ನಾಶಗೊಳ್ಳುತ್ತಿರುವ ಸಣ್ಣ ಉದ್ಯಮಗಳು

Update: 2022-03-09 12:07 IST

ವಿವಿಧ ತೆರಿಗೆ ದರಗಳು ಮತ್ತು ಯಾವತ್ತೂ ಮುಗಿಯದ ‘ಫೈಲಿಂಗ್’ ಮತ್ತು ‘ರಿಪೋರ್ಟಿಂಗ್’ಗಳಿಂದಾಗಿ ಜಿಎಸ್‌ಟಿ ವ್ಯವಸ್ಥೆಯು ಸಣ್ಣ ಉದ್ದಿಮೆಗಳು ಮತ್ತು ಹೊಸ ಉದ್ಯಮಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಹಾಗಾಗಿ, 6.3 ಕೋಟಿ ಉದ್ಯಮಗಳ (ಎನ್‌ಎಸ್‌ಎಸ್‌ಒ 2015-16ರಿಂದ ಪಡೆದ ಅಂಕಿ-ಅಂಶಗಳು) ಪೈಕಿ 1.34 ಕೋಟಿ ಉದ್ಯಮಗಳು ಮಾತ್ರ ಜಿಎಸ್‌ಟಿ ಜಾಲಕ್ಕೆ ಸೇರ್ಪಡೆಗೊಂಡಿರುವುದರಲ್ಲಿ ಅಚ್ಚರಿಯಿಲ್ಲ. ರಿತೇಶ್ ಕುಮಾರ್ ಸಿಂಗ್

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯು 140 ಕೋಟಿ ಜನರ ಏಕೀಕೃತ ಮಾರುಕಟ್ಟೆಯೊಂದನ್ನು ನಿರ್ಮಿಸಬೇಕಾಗಿತ್ತು ಹಾಗೂ ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕಾಗಿತ್ತು. ಭಾರತೀಯ ಆರ್ಥಿಕತೆಯ ಅನೌಪಚಾರಿಕ ಕ್ಷೇತ್ರಕ್ಕೆ ಹೆಚ್ಚೆಚ್ಚು ಕಂಪೆನಿಗಳನ್ನು ತರುವುದು ಅದರ ಇನ್ನೊಂದು ಉದ್ದೇಶವಾಗಿತ್ತು. ದೇಶದ ತೆರಿಗೆ-ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಅನುಪಾತವನ್ನು ಹೆಚ್ಚಿಸಲು ಅಗತ್ಯವಾದ ತೆರಿಗೆ ನೆಲೆಯನ್ನು ವಿಸ್ತರಿಸಲು ಈ ಕ್ರಮಗಳು ಸಹಾಯ ಮಾಡುತ್ತವೆ. ಈ ಅನುಪಾತವು ತುಂಬಾ ಸಮಯದಿಂದ 10-11 ಶೇಕಡಾದಲ್ಲೇ ಇದೆ.

ಆದರೆ, ವಾಸ್ತವ ಬೇರೆಯಾಗಿದೆ. ವಿವಿಧ ತೆರಿಗೆ ದರಗಳು ಮತ್ತು ಯಾವತ್ತೂ ಮುಗಿಯದ ‘ಫೈಲಿಂಗ್’ ಮತ್ತು ‘ರಿಪೋರ್ಟಿಂಗ್’ಗಳಿಂದಾಗಿ ಜಿಎಸ್‌ಟಿ ವ್ಯವಸ್ಥೆಯು ಸಣ್ಣ ಉದ್ದಿಮೆಗಳು ಮತ್ತು ಹೊಸ ಉದ್ಯಮಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಹಾಗಾಗಿ, 6.3 ಕೋಟಿ ಉದ್ಯಮಗಳ (ಎನ್‌ಎಸ್‌ಎಸ್‌ಒ 2015-16ರಿಂದ ಪಡೆದ ಅಂಕಿ-ಅಂಶಗಳು) ಪೈಕಿ 1.34 ಕೋಟಿ ಉದ್ಯಮಗಳು ಮಾತ್ರ ಜಿಎಸ್‌ಟಿ ಜಾಲಕ್ಕೆ ಸೇರ್ಪಡೆಗೊಂಡಿರುವುದರಲ್ಲಿ ಅಚ್ಚರಿಯಿಲ್ಲ. ತಮ್ಮ ಜಿಎಸ್‌ಟಿ ನೋಂದಣಿಗಳನ್ನು ಎಷ್ಟು ಕಂಪೆನಿಗಳು ರದ್ದುಗೊಳಿಸಿವೆ ಎನ್ನುವುದಕ್ಕೆ ಸಂಬಂಧಿಸಿದ ಅಧಿಕೃತ ಅಂಕಿ-ಅಂಶಗಳು ಲಭ್ಯವಿಲ್ಲ. ಆದರೆ ಅನಧಿಕೃತ ಮಾಹಿತಿಗಳ ಪ್ರಕಾರ, ಹೆಚ್ಚೆಚ್ಚು ಸಂಖ್ಯೆಯ ಸಣ್ಣ ಉದ್ಯಮಗಳು ಒಂದೋ ತಮ್ಮ ಜಿಎಸ್‌ಟಿ ನೋಂದಣಿಗಳನ್ನು ರದ್ದುಗೊಳಿಸುತ್ತಿವೆ ಅಥವಾ ತಮ್ಮ ವಹಿವಾಟು ನಿಗದಿತ ಮಿತಿಗಿಂತ ಹೆಚ್ಚಾಗದಂತೆ ನೋಡಿಕೊಂಡು ಸಣ್ಣ ಉದ್ಯಮಗಳಾಗಿಯೇ ಉಳಿದಿವೆ. ಸೇವೆಯನ್ನು ಒದಗಿಸುವ ಕಂಪೆನಿಗಳ ವಹಿವಾಟು 20 ಲಕ್ಷ ರೂ. ಮೀರಿದರೆ ಮತ್ತು ಉತ್ಪಾದನಾ ಕಂಪೆನಿಗಳ ವಹಿವಾಟು 40 ಲಕ್ಷ ರೂ. ಮೀರಿದರೆ ಅವುಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.

ಜಿಎಸ್‌ಟಿಯ ಈಗಿನ ಪ್ರವೃತ್ತಿ ಎಂದರೆ, ಹೆಚ್ಚಿನ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ಸ್ (ಐಟಿಸಿ) ಪಡೆದುಕೊಳ್ಳುವುದಕ್ಕಾಗಿ ಅಪ್ರಾಮಾಣಿಕ ವ್ಯಕ್ತಿಗಳು ನಕಲಿ ಇನ್‌ವಾಯಿಸ್‌ಗಳನ್ನು ಬಳಸಿಕೊಳ್ಳುತ್ತಿರುವುದು. ಆದರೆ, ಇದರ ಹಿಂದಿನ ಪ್ರಮುಖ ಕಾರಣವೆಂದರೆ, ಜಿಎಸ್‌ಟಿ ವ್ಯವಸ್ಥೆಯಲ್ಲಿ ಹಲವು ತೆರಿಗೆ ದರಗಳಿರುವುದು ಮತ್ತು ಈ ದರಗಳ ನಡುವೆ ಅಗಾಧ ಅಂತರವಿರುವುದು (ಶೇ.0-28). ಹೆಚ್ಚು ಐಟಿಸಿ ಪಡೆದುಕೊಳ್ಳಲು ಇದು ಸಹಾಯಕವಾಗಿದೆ.

ಉದಾಹರಣೆಗೆ; ಸಿಮೆಂಟ್‌ನ ಜಿಎಸ್‌ಟಿ ದರ ಶೇ. 28 ಮತ್ತು ಉಕ್ಕಿನ ಕಂಬಿಗಳ ಮೇಲಿನ ದರ ಶೇ. 18. ಸಹಜವಾಗಿಯೇ, ರಿಯಲ್ ಎಸ್ಟೇಟ್ ಕಂಪೆನಿಗಳು ಪಡೆದುಕೊಳ್ಳಬೇಕಾಗಿರುವುದಕ್ಕಿಂತ ಹೆಚ್ಚಿನ ಐಟಿಸಿ ಪಡೆದುಕೊಳ್ಳುವುದಕ್ಕಾಗಿ ಉಕ್ಕಿಗಿಂತ ಹೆಚ್ಚು ಸಿಮೆಂಟನ್ನು ಬಳಸುತ್ತವೆ (ದಾಖಲೆಯಲ್ಲಿ ಮಾತ್ರ). ಇದಕ್ಕೆ ಪರಿಹಾರವೆಂದರೆ, ತೆರಿಗೆ ದರಗಳ ಹಂತಗಳನ್ನು ಕಡಿಮೆಗೊಳಿಸುವುದು ಮತ್ತು ದರ ವ್ಯತ್ಯಾಸವನ್ನು ತಗ್ಗಿಸುವುದು. ಆದರೆ ಸರಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸಿದೆಯೆಂದರೆ, ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಐಟಿಸಿ ನೀಡುವುದನ್ನೇ ರದ್ದುಪಡಿಸಿದೆ. ಆದರೆ, ತೆರಿಗೆಯ ಮೇಲೆ ತೆರಿಗೆಗಳನ್ನು ವಿಧಿಸುವ ಸರಣಿ ಪರಿಣಾಮಗಳನ್ನು ತಡೆಯುವ ಉದ್ದೇಶವನ್ನೇ ಇದು ನಿಷ್ಕ್ರಿಯಗೊಳಿಸುತ್ತದೆ.

ಆದರೆ, ಇಲ್ಲಿ ಹೆಚ್ಚಿನವರ ಗಮನಕ್ಕೆ ಬಾರದ ವಿಷಯವೊಂದಿದೆ. ಉಸಿರುಗಟ್ಟಿಸುವ ರೀತಿಯಲ್ಲಿ ನಿಯಮಗಳ ಪಾಲನೆಯ ಅನಿವಾರ್ಯತೆ ಮತ್ತು ಅನಿಯಂತ್ರಿತ ತಪಾಸಣಾ ವ್ಯವಸ್ಥೆಯು ಜಿಎಸ್‌ಟಿ ಜಾಲವನ್ನು ಸೇರುವುದರಿಂದ ಸಣ್ಣ ಉದ್ಯಮಗಳು ಮತ್ತು ಹೊಸ ಉದ್ಯಮಿಗಳನ್ನು ನಿರುತ್ತೇಜಿಸುತ್ತಿವೆ.

ಸಣ್ಣ ಕಂಪೆನಿಗಳು ಹೇಗೆ ಬಳಲುತ್ತವೆ?

ಕೆಲವು ಸಾಮಾನ್ಯ ತೊಂದರೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

ಔಪಚಾರಿಕ ತೆರಿಗೆ ವ್ಯವಸ್ಥೆಯು ಸರಕಾರಕ್ಕೆ ತೆರಿಗೆ ನೆಲೆಯನ್ನು ವಿಸ್ತರಿಸುವುದರ ಜೊತೆಗೆ, ಸಣ್ಣ ಉದ್ಯಮಗಳಿಗೆ ಬ್ಯಾಂಕ್‌ಗಳಿಂದ ಅಗ್ಗದ ಸಾಲ ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ, ಔಪಚಾರಿಕ ವ್ಯವಸ್ಥೆಗೆ ಉತ್ತೇಜನ ನೀಡುವುದಕ್ಕಾಗಿ ಆರ್‌ಒಸಿ (ರಿಜಿಸ್ಟ್ರಾರ್ ಆಫ್ ಕಂಪೆನೀಸ್) ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಹಾಗೂ ವಸತಿ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ನೋಂದಾಯಿತ ವಿಳಾಸವನ್ನು ಹೊಂದಿರುವ (ಕಚೇರಿಗೆ ಕೊಡುವ ಬಾಡಿಗೆಯನ್ನು ಉಳಿಸಲು ಹೀಗೆ ಮಾಡಲಾಗುತ್ತದೆ) ಉದ್ಯಮಗಳ ನೋಂದಣಿಗೆ ಅವಕಾಶ ನೀಡಿದ್ದಾರೆ. ಈ ವ್ಯವಸ್ಥೆಯು ಸಲಹೆ ನೀಡುವುದು, ಆನ್‌ಲೈನ್ ಕೋಚಿಂಗ್, ಯೋಗ ಮತ್ತು ದೈಹಿಕ ಕ್ಷಮತೆ ತರಬೇತಿ, ಸಂಶೋಧನೆ ಮತ್ತು ಮಾರ್ಗದರ್ಶನ ಹಾಗೂ ಇತರ ಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಪರಿಣತರು ತಮ್ಮದೇ ಆದ ಔಪಚಾರಿಕ ವ್ಯವಸ್ಥೆಯನ್ನು ಹೊಂದಲು ಉತ್ತೇಜಿಸುತ್ತದೆ. ಇಂಥ ಸೇವೆಗಳಿಗೆ ಪ್ರತ್ಯೇಕ ಕಚೇರಿಯ ಅಗತ್ಯವಿರುವುದಿಲ್ಲ. ಅವರಿಗೆ ಬೇಕಾಗಿರುವುದು ಲ್ಯಾಪ್‌ಟಾಪ್ ಮತ್ತು ಇಂಟರ್‌ನೆಟ್ ಸಂಪರ್ಕ ಮಾತ್ರ. ಪ್ರತ್ಯೇಕ ಕಚೇರಿ ಮತ್ತು ಹೆಚ್ಚಿನ ಉದ್ಯೋಗಿಗಳನ್ನು ಹೊಂದುವಷ್ಟು ದೊಡ್ಡ ಮಟ್ಟಕ್ಕೆ ಉದ್ಯಮ ಬೆಳೆಯುವವರೆಗೆ ಹೆಚ್ಚಿನ ಉದ್ಯೋಗಿಗಳು ತಮ್ಮ ಮನೆಗಳಿಂದಲೇ ಕೆಲಸ ಮಾಡಬಹುದಾಗಿದೆ.

ಆದರೆ, ಜಿಎಸ್‌ಟಿ ತಪಾಸಕರು (ಇವರಲ್ಲಿ ಹೆಚ್ಚಿನವರು ಹಿಂದಿನ ಮಾರಾಟ ತೆರಿಗೆ ಮತ್ತು ವ್ಯಾಟ್‌ಗಳ ದಿನಗಳನ್ನು ನೋಡಿದವರು. ಹಾಗಾಗಿ, ಲಂಚ ವಸೂಲು ಮಾಡುವ ತಮ್ಮ ಅಧಿಕಾರವನ್ನು ಬಿಟ್ಟುಕೊಡಲು ಅವರು ತಯಾರಿಲ್ಲ) ಕ್ಷುಲ್ಲಕ ಕಾರಣಗಳಿಗಾಗಿ ಇಂಥ ಕಂಪೆನಿಗಳಿಗೆ ಕಿರುಕುಳ ನೀಡುತ್ತಾರೆ. ಅವರು ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ, ‘ಕಂಪೆನಿಯ ಹೆಸರಿನ ಫಲಕವನ್ನು ಯಾಕೆ ಸ್ಪಷ್ಟವಾಗಿ ಕಾಣುವಂತೆ ಹಾಕುವುದಿಲ್ಲ?’ ಎನ್ನುವುದು. ವಸತಿ ಸ್ಥಳಗಳಲ್ಲಿ ಇಂಥ ಹೆಸರಿನ ಫಲಕವನ್ನು ಪ್ರದರ್ಶಿಸುವುದು ಆಭಾಸವಾಗುತ್ತದೆ. ಮನೆ ಮತ್ತು ಕಚೇರಿ ನಡುವಿನ ವ್ಯತ್ಯಾಸವು ಮಾಸುತ್ತಾ ಬರುತ್ತಿರುವ ದಿನಗಳಲ್ಲಿ ಇಂಥ ಪ್ರಶ್ನೆ ಕೇಳುವುದು ಮೂರ್ಖತನ. ಅದೂ ಅಲ್ಲದೆ, ಆರ್‌ಒಸಿಯ ಉದ್ದೇಶಕ್ಕೆ ಇದು ವಿರುದ್ಧವಾಗಿದೆ ಹಾಗೂ ಉದ್ಯಮಶೀಲತೆ ಮತ್ತು ಜ್ಞಾನ ಆಧಾರಿತ ಉತ್ತಮ ವೇತನದ ಉದ್ಯೋಗ ನಿರ್ಮಾಣವನ್ನು ನಿರುತ್ತೇಜಿಸುತ್ತದೆ.

ಇತ್ತೀಚೆಗೆ, ಸಣ್ಣ ಉದ್ಯಮಗಳಿಗೆ ಅವುಗಳ ಬ್ಯಾಂಕ್ ವ್ಯವಹಾರಗಳ ಆಧಾರದಲ್ಲಿ ಸ್ವಯಂಚಾಲಿತ ಜಿಎಸ್‌ಟಿ ನೋಟಿಸ್‌ಗಳನ್ನು ನೀಡಲಾಗುತ್ತದೆ ಹಾಗೂ ಸರಕಾರದ ಬಳಿ ಸುಲಭವಾಗಿ ಲಭ್ಯವಿರುವ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗುತ್ತದೆ. ಉದಾಹರಣೆಗೆ; ತೆರಿಗೆ ವಿವರ ಸಲ್ಲಿಕೆಗಳು ಅಥವಾ ಪರಿಶೋಧನೆಗೆ ಒಳಗಾದ ಬ್ಯಾಲನ್ಸ್‌ಶೀಟ್‌ಗಳು.

ನಾನು ವ್ಯವಹರಿಸುವ ಕಂಪೆನಿಯೊಂದರ ನೋಂದಾಯಿತ ಕಚೇರಿ ನೋಯ್ಡದಲ್ಲಿದೆ. ಆದರೆ ಅದರ ಬ್ಯಾಂಕ್ ಶಾಖೆಯು ಅದರ ನಿರ್ದೇಶಕರು ವಾಸಿಸುವ ಡೆಹ್ರಾಡೂನ್‌ನಲ್ಲಿದೆ. ಎಲ್ಲ ತೆರಿಗೆ ವಿವರಗಳನ್ನು ಸರಿಯಾಗಿ ಸಲ್ಲಿಸಲಾಗುತ್ತಿದೆ. ಕಂಪೆನಿಯ ಉತ್ಪನ್ನಗಳು ನೂರು ಶೇಕಡ ರಫ್ತಾಗುವುದರಿಂದ ಜಿಎಸ್‌ಟಿ ಪಾವತಿಸಬೇಕೆಂಬ ಬದ್ಧತೆಯಿಲ್ಲ. ಆದರೂ ಅದಕ್ಕೆ ಜಿಎಸ್‌ಟಿ ಡೆಹ್ರಾಡೂನ್ ಕಚೇರಿಯಿಂದ ನೋಟಿಸ್ ಬಂತು. ಅದಕ್ಕೆ ಕಾರಣ ಸರಳ. ಕಂಪೆನಿಯ ಬ್ಯಾಂಕ್ ಶಾಖೆ ಡೆಹ್ರಾಡೂನ್‌ನಲ್ಲಿದೆ. ಬೃಹತ್ ಕಾರ್ಪೊರೇಟ್ ಕಂಪೆನಿಗಳನ್ನು ಹೊರತುಪಡಿಸಿ, ಸಣ್ಣ ಉದ್ಯಮಗಳು ತೆರಿಗೆ ಅಧಿಕಾರಶಾಹಿಯೊಂದಿಗೆ ವ್ಯವಹರಿಸುವುದಕ್ಕಾಗಿ ಪೂರ್ಣಪ್ರಮಾಣದ ತಂಡಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ.

ಬಿಗಿಯಾದ ಜಿಎಸ್‌ಟಿ ಕುಣಿಕೆ

ಇನ್‌ವಾಯಿಸ್ ಸೃಷ್ಟಿಸುವ ಮತ್ತು ಜಿಎಸ್‌ಟಿ ಪಾವತಿಸುವ ವ್ಯವಸ್ಥೆಯು ದೊಡ್ಡ ತಲೆನೋವು. ಉದಾಹರಣೆಗೆ; ‘ಎ’ ಎಂಬ ಕಂಪೆನಿಯು ತನ್ನ ಕಕ್ಷಿದಾರ ಕಂಪೆನಿ ‘ಬಿ’ಗೆ ಸಂಬಂಧಿಸಿ 2021 ನವೆಂಬರ್‌ನಲ್ಲಿ ಶೇ. 18 ಜಿಎಸ್‌ಟಿ ಅನ್ವಯವಾಗುವ ಸರಕುಗಳು ಅಥವಾ ಸೇವೆಯ ಪೂರೈಕೆಗಾಗಿ ಜಿಎಸ್‌ಟಿ ಇನ್‌ವಾಯ್ಸಿ ಸೃಷ್ಟಿಸಿದರೆ, ‘ಎ’ಯು ‘ಬಿ’ಯ ಪರವಾಗಿ ಇನ್‌ವಾಯ್ಸಿ ವೌಲ್ಯದ 18 ಶೇಕಡಕ್ಕೆ ಸಮವಾದ ಮೊತ್ತವನ್ನು ಜಿಎಸ್‌ಟಿ ರೂಪದಲ್ಲಿ ಸರಕಾರಕ್ಕೆ ಪಾವತಿಸುವ ಬಾಧ್ಯತೆಯನ್ನು ಹೊಂದಿದೆ. ಈ ಮೊತ್ತವನ್ನು ‘ಎ’ಯು ’ಬಿ’ಯಿಂದ ಪಡೆದಿದೆಯೇ ಇಲ್ಲವೇ ಎಂಬುದನ್ನು ಪರಿಗಣಿಸದೆ ‘ಎ’ಯು ಸರಕಾರಕ್ಕೆ 2021 ಡಿಸೆಂಬರ್ 20ರ ಮೊದಲು ಪಾವತಿಸಬೇಕು. ‘ಬಿ’ಯಿಂದ ಬರುವ ಪಾವತಿಯು ವಿಳಂಬವಾಗಬಹುದು ಅಥವಾ ಬರದೇ ಇರಬಹುದು ಎನ್ನುವ ಕಾರಣಕ್ಕಾಗಿ ‘ಎ’ಯು ಇನ್‌ವಾಯ್ಸನ್ನು ರದ್ದುಪಡಿಸುವಂತಿಲ್ಲ. ಯಾಕೆಂದರೆ, ಸೃಷ್ಟಿಯಾದ ಜಿಎಸ್‌ಟಿ ಇನ್‌ವಾಯ್ಸಿಗೆ ಸಂಬಂಧಿಸಿದ ಸರಕುಗಳು ಅಥವಾ ಸೇವೆಗಳನ್ನು ಅದು ಈಗಾಗಲೇ ಪೂರೈಸಿದೆ. ಹಾಗಾಗಿ, ಮಾರಾಟಗಾರ ಕಂಪೆನಿ ‘ಎ’ಯು ತನ್ನ ಗ್ರಾಹಕ ಕಂಪೆನಿ ‘ಬಿ’ ಪರವಾಗಿ 2021 ಡಿಸೆಂಬರ್ 20ರ ಒಳಗೆ ಜಿಎಸ್‌ಟಿ ಪಾವತಿಸಲೇಬೇಕಾಗಿದೆ.

ಒಂದು ವೇಳೆ, ‘ಎ’ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಹಣವಿಲ್ಲದಿದ್ದರೆ ಅಥವಾ ಖರೀದಿದಾರ ಕಂಪೆನಿ ‘ಬಿ’ ಹಣ ಪಾವತಿಸಲು ವಿಳಂಬಿಸಿದೆ ಅಥವಾ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ಜಿಎಸ್‌ಟಿ ಮೊತ್ತವನ್ನು ನಿರ್ದಿಷ್ಟ ದಿನಾಂಕದೊಳಗೆ ಸರಕಾರದ ಖಾತೆಯಲ್ಲಿ ಠೇವಣಿ ಇಡಲು ವಿಫಲವಾದರೆ, ಸಾಮಾನ್ಯವಾಗಿ ಒಂದು ಅಥವಾ ಎರಡು ತಿಂಗಳ ಬಳಿಕ ಜಿಎಸ್‌ಟಿ ಅಧಿಕಾರಿಗಳು ‘ಎ’ಯ ಜಿಎಸ್‌ಟಿ ನೋಂದಣಿಯನ್ನು ರದ್ದುಪಡಿಸುತ್ತಾರೆ. ಸಮಸ್ಯೆ ಖರೀದಿದಾರನಲ್ಲಿರುವಾಗ ಮಾರಾಟಗಾರನ ಜಿಎಸ್‌ಟಿ ನೋಂದಣಿಯನ್ನು ಯಾಕೆ ರದ್ದುಮಾಡಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ.

ಒಂದು ವೇಳೆ, ಖರೀದಿದಾರ ‘ಬಿ’ಯಲ್ಲಿ ಈಗ ಹಣವಿದೆ ಹಾಗೂ ಅದು ಪೂರೈಕೆದಾರ ‘ಎ’ಗೆ ಈಗ ಹಣ ಪಾವತಿಸಲು ಬಯಸಿದೆ ಎಂಬುದಾಗಿ ಭಾವಿಸೋಣ. ಆಗ ಕಂಪೆನಿ ‘ಬಿ’ಯು ಪೂರೈಕೆದಾರ ಕಂಪೆನಿ ‘ಎ’ಯ ಜಿಎಸ್‌ಟಿ ನೋಂದಣಿ ಸ್ಥಿತಿಯನ್ನು ಪರಿಶೀಲಿಸುತ್ತದೆ. ಆದರೆ ಅದನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅದನ್ನು ಅದಾಗಲೇ ತೆರಿಗೆ ಅಧಿಕಾರಿಗಳು ರದ್ದುಪಡಿಸಿದ್ದಾರೆ. ಆಗ ‘ಬಿ’ಯು ‘ಎ’ಗೆ ಸಹಜವಾಗಿಯೇ ಅಸಲು ಮೊತ್ತವನ್ನು ಮಾತ್ರ ಪಾವತಿಸಲು ಬಯಸುತ್ತದೆ. ಅದಕ್ಕೆ ಅನ್ವಯವಾಗುವ ಶೇ. 18 ಜಿಎಸ್‌ಟಿಯನ್ನು ಅದು ಪಾವತಿಸುವುದಿಲ್ಲ. ಯಾಕೆಂದರೆ, ಅದಕ್ಕೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಾಧ್ಯವಾಗುವುದಿಲ್ಲ.

ಇಷ್ಟೇ ಅಲ್ಲ. ಈಗ ಪೂರೈಕೆದಾರ ಕಂಪೆನಿ ‘ಎ’ಗೆ ಹೊಸ ಕಕ್ಷಿದಾರ ‘ಸಿ’ ಸಿಕ್ಕಿದೆ. ‘ಸಿ’ಯು ‘ಎ’ಯಿಂದ ಸರಕು ಅಥವಾ ಸೇವೆಗಳನ್ನು ಖರೀದಿಸಲು ಬಯಸಿದೆ. ಐಟಿಸಿ ಪಡೆಯಬೇಕಾಗಿರುವುದರಿಂದ ‘ಸಿ’ಯು ‘ಎ’ಯ ಜಿಎಸ್‌ಟಿ ನೋಂದಣಿಯ ಬಗ್ಗೆ ಕೇಳುತ್ತದೆ. ಈಗ ‘ಎ’ಗೆ ಈ ಆಯ್ಕೆಗಳಿವೆ: ತನ್ನ ಮಾಜಿ ಕಕ್ಷಿಗಾರ ‘ಬಿ’ಯ ಜಿಎಸ್‌ಟಿ ಬಾಕಿಯನ್ನು ಬಡ್ಡಿ ಮತ್ತು ದಂಡ (ಇದ್ದರೆ) ಸಹಿತ ಪಾವತಿಸಿ, ತನ್ನ ಜಿಎಸ್‌ಟಿ ನೋಂದಣಿಯನ್ನು ಮರಳಿಸುವಂತೆ ಸಂಬಂಧಿತ ಜಿಎಸ್‌ಟಿ ತಪಾಸಕನಿಗೆ ಲಂಚ ನೀಡುವುದು ಅಥವಾ ದುಂಬಾಲು ಬೀಳುವುದು ಅಥವಾ ‘ಸಿ’ ಯೊಂದಿಗೆ ವ್ಯವಹರಿಸುವ ಆಸೆಯನ್ನು ಬಿಟ್ಟು ಬಿಡುವುದು.

ಅಥವಾ, ಹಿಮ್ಮುಖ ಜಿಎಸ್‌ಟಿ ಪಾವತಿಗಾಗಿ ‘ಎ’ಯು ‘ಸಿ’ಯನ್ನು ವಿನಂತಿಸಬಹುದಾಗಿದೆ. ಅಂದರೆ, ಖರೀದಿದಾರ ‘ಸಿ’ಯು ಪೂರೈಕೆದಾರ ‘ಎ’ ಪರವಾಗಿ ಜಿಎಸ್‌ಟಿ ಪಾವತಿಸಬೇಕು ಹಾಗೂ ಸರಕು ಅಥವಾ ಸೇವೆಯ ಅಸಲು ಮೊತ್ತವನ್ನು ಮಾತ್ರ ‘ಎ’ಗೆ ನೀಡಬೇಕು. ಇದರಲ್ಲಿ, ‘ಸಿ’ಗೆ ಐಟಿಸಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ‘ಎ’ಗೆ ಐಟಿಸಿ ಪಡೆಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅದರ ನೋಂದಣಿಯನ್ನು ರದ್ದುಪಡಿಸಲಾಗಿದೆ.

ಸಾಮಾನ್ಯವಾಗಿ, ದೊಡ್ಡ ಕಂಪೆನಿಗಳು ಸಣ್ಣ ಮಾರಾಟಗಾರರಿಗೆ ಹಣ ನೀಡುವುದನ್ನು ವಿಳಂಬಿಸುತ್ತವೆ. ಹಾಗಾಗಿ, ಈ ಸಣ್ಣ ಮಾರಾಟಗಾರರು ತಮ್ಮ ಕಿಸೆಯಿಂದಲೇ ಜಿಎಸ್‌ಟಿ ಪಾವತಿಸುವ ಅನಿವಾರ್ಯತೆಗೆ ಒಳಗಾಗುತ್ತವೆ. ಇದು ತಾತ್ಕಾಲಿಕವಾಗಿಯಾದರೂ ಸಣ್ಣ ಮಾರಾಟಗಾರ ಕಂಪೆನಿಗಳ ದುಡಿಯುವ ಬಂಡವಾಳವನ್ನು ತಿನ್ನುತ್ತದೆ. ಅದನ್ನು ಸರಿದೂಗಿಸಬೇಕಾದರೆ ಬೇರೆ ಕಡೆಯಿಂದ ಹಣವನ್ನು ಅದಕ್ಕೆ ಸುರಿಯಬೇಕಾಗುತ್ತದೆ ಹಾಗೂ ಈ ಸಣ್ಣ ಮಾರಾಟ ಕಂಪೆನಿಗಳು ಅದಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ.

ಹಣವು 2021 ಡಿಸೆಂಬರ್‌ನಲ್ಲಿ ಸಿಗಬಹುದು ಎಂಬ ನಿರೀಕ್ಷೆ ಮಾರಾಟಗಾರ ಕಂಪೆನಿ ‘ಎ’ಗಿದ್ದರೆ, ಅದೇ ತಿಂಗಳಿನ ಇನ್‌ವಾಯ್ಸನ್ನು ಸೃಷ್ಟಿಸುವ ಬಗ್ಗೆ ‘ಎ’ ಯೋಚಿಸಬಹುದು. ಇದು ಸೇವೆಗಳ ಪೂರೈಕೆಯಲ್ಲಿ ಸಾಧ್ಯವಾಗುತ್ತದೆ; ಸರಕು ಪೂರೈಕೆಗೆ ಇದು ಅನ್ವಯಿಸುವುದಿಲ್ಲ. ಯಾಕೆಂದರೆ, ಮಾರಾಟದ ವೇಳೆ ಸರಕುಗಳ ಸಾಗಣೆಗಾಗಿ ಅದು ಇ-ವೇ ಬಿಲ್‌ಗಳನ್ನು ಸೃಷ್ಟಿಸಬೇಕಾಗುತ್ತದೆ. ಎರಡೂ ಸಂದರ್ಭಗಳಲ್ಲಿ, ಖರೀದಿದಾರ ಮಾಡುವ ವಿಳಂಬಿತ ಪಾವತಿಯ ವೆಚ್ಚಗಳನ್ನು ಪೂರೈಕೆದಾರನೇ ಭರಿಸಬೇಕಾಗುತ್ತದೆ. ಇಲ್ಲಿ ಸೇವೆಗಳ ಪೂರೈಕೆದಾರನಿಗೆ ಮಾತ್ರ ಕೊಂಚ ನೆಮ್ಮದಿಯಿದೆ. ಜಿಎಸ್‌ಟಿ ತಡವಾಗಿ ಪಾವತಿಸಿದರೂ ಜಿಎಸ್‌ಟಿ ನೋಂದಣಿ ಜೀವಂತವಾಗಿಯೇ ಇರುತ್ತದೆ.

ಆದರೆ, ತೆರಿಗೆ ತಪಾಸಕರು (ಇನ್ಸ್‌ಪೆಕ್ಟರ್‌ಗಳು) ಲಂಚ ವಸೂಲಿ ಮಾಡುವುದಕ್ಕಾಗಿ ಜಿಎಸ್‌ಟಿ ನೋಂದಣಿಯನ್ನು ರದ್ದುಪಡಿಸುವ ಬೆದರಿಕೆಯನ್ನು ಯಾವಾಗ ಬೇಕಾದರೂ ಹಾಕಬಹುದಾಗಿದೆ. ಅದರಲ್ಲೂ ಮುಖ್ಯವಾಗಿ ಸಣ್ಣ ಪೂರೈಕೆದಾರರು ಈ ಬೆದರಿಕೆಯಡಿಯಲ್ಲೇ ಜೀವಿಸುತ್ತಾರೆ. ಇದು ಈ ವಿಚಿತ್ರ ಜಿಎಸ್‌ಟಿ ನಿಯಮದ ಇನ್ನೊಂದು ಅಡ್ಡ ಪರಿಣಾಮವಾಗಿದೆ.

ಕೃಪೆ: theprint.in

Writer - ರಿತೇಶ್ ಕುಮಾರ್ ಸಿಂಗ್

contributor

Editor - ರಿತೇಶ್ ಕುಮಾರ್ ಸಿಂಗ್

contributor

Similar News