×
Ad

'ಮನಪಾ' ಪೌರ ಕಾರ್ಮಿಕರ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ: ನೌಕರರ ಸಂಘ ಆರೋಪ

Update: 2022-03-09 15:13 IST

ಮಂಗಳೂರು, ಮಾ.9: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ನೇಮಕಾತಿಗೆ ವಿಶೇಷ ನಿಯಮಗಳ ಪ್ರಕಾರ ನಡೆದಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಳೀಯ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘ ಆಯ್ಕೆ ಪಟ್ಟಿಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಪೌರ ಕಾಮಿರ್ಕರ ನೇರ ನೇಮಕಾತಿ ಸಂದರ್ಭ ಸ್ಥಳೀಯ ಪೌರ ಕಾರ್ಮಿಕರಿಗೆ ಶೇ. 70ರಷ್ಟು ನೇಮಕಾತಿ ಮೀಸಲಿಡಲು ಮನವಿ ಮಾಡಿದ್ದರೂ ನೀಡಲಾಗಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಯರಿಗೆ ನೇರ ನೇಮಕಾತಿಗೆ ಅವಕಾಶವಿದ್ದು, ಅದರಂತೆ ಮನಪಾದಲ್ಲಿ 190 ಹುದ್ದೆಗಳಿಗೆ ನೇರ ನೇಮಕಾತಿಗೆ ಮಂಜೂರಾತಿ ದೊರಕಿದ್ದು, 111 ಮಂದಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಸ್ಥಳೀಯರಿಗೆ ಅನ್ಯಾಯಾಗಿದೆ. ಈ ಹಿಂದೆ ಹಲವು ವರ್ಷಗಳಿಂದಲೂ ಇಲ್ಲಿ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದ ಕೊರಗ ಹಾಗೂ ದಲಿತ ಸಮುದಾಯದ ಸುಮಾರು 70 ಮಂದಿ ಪೌರ ಕಾರ್ಮಿಕರು ಆನ್‌ ಲೈನ್ ಮೂಲಕ ಅರ್ಜಿ ಹಾಕಿದ್ದರೂ ಅವರನ್ನು ಪರಿಗಣಿಸಲಾಗಿಲ್ಲ. 45 ಮಂದಿ ಕೊರಗ ಸಮುದಾಯ ಪೌರ ಕಾರ್ಮಿಕರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ದೊರಕಿದೆ. ತಾತ್ಕಾಲಿಕ ಪಟ್ಟಿಯಲ್ಲಿರುವರು ಹೆಚ್ಚಿನವರು ಹೊರ ಜಿಲ್ಲೆಯವರಾಗಿದ್ದು, ನೇಮಕಾತಿ ಆದೇಶ ದೊರಕಿದ ಬಳಿಕ ಅವರು ತಮ್ಮ ಜಿಲ್ಲೆಗಳಿಗೆ ವರ್ಗಾವಣೆ ಪಡೆದು ಹೋಗುವ ಸಾಧ್ಯತೆ ಅಧಿಕ. ಅದರಿಂದ ಮತ್ತೆ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಸಮಸ್ಯೆ ಎದುರಾಗಲಿದೆ. ದ.ಕ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಹಲವಾರು ವರ್ಷಗಳಿಂದ ಗುತ್ತಿಗೆಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕರು ಅವಿದ್ಯಾವಂತರಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲೂ ಸಾಧ್ಯವಾಗಿಲ್ಲ. ಹಾಗಿದ್ದರೂ ನಾವು ಹಲವರಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸಹಕಾರ ನೀಡಿದ್ದರೂ ಅವರನ್ನು ಪರಿಗಣಿಸಲಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸಭೆಯನ್ನೂ ಕರೆಯಲಾಗಿದ್ದು, ಸ್ಥಳೀಯರಿಗೆ ನ್ಯಾಯ ಒದಗಿಸಬೇಕೆಂದು ಅವರು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪೌರ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ದಲಿತ ನಾಯಕ ಎಸ್.ಪಿ. ಆನಂದ, ವಿಶು ಕುಮಾರ್, ನಾರಾಯಣ ಮತ್ತು ಆನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News