"ಮುಚ್ಚಲ್ಪಟ್ಟಿದ್ದ ಬಾಗಿಲನ್ನು ನಾನು ತೆರೆದಿದ್ದೇನೆ" ಎಂದಿದ್ದ ನ್ಯಾಯಮೂರ್ತಿ ಫಾತಿಮಾ ಬೀವಿ
‘ಗ್ಲಾಸ್ ಸೀಲಿಂಗ್’ಎಂಬ ಶಬ್ದ ಸಾಮಾನ್ಯ ಭಾಷೆಯನ್ನು ಪ್ರವೇಶಿಸುವ ಮುನ್ನವೇ ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರೋರ್ವರು ಅದನ್ನು ಒಡೆದು ಹಾಕಿದ್ದರು. ತನ್ನ ವೃತ್ತಿಜೀವನವನ್ನು ವ್ಯಾಖ್ಯಾನಿಸಿದ್ದ ಶಾಂತ ದಕ್ಷತೆಯೊಂದಿಗೆ ಎಂ.ಫಾತಿಮಾ ಬೀವಿ ಅವರು 1989,ಅಕ್ಟೋಬರ್ 6ರಂದು ಸವೋಚ್ಚ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು ಮತ್ತು 1992,ಎಪ್ರಿಲ್ 29ರಂದು ನಿವೃತ್ತಿಯವರೆಗೂ ಆ ಹುದ್ದೆಯಲ್ಲಿದ್ದರು.
ತನ್ನೆಲ್ಲ ಸಾಧನೆಗಳಿಗಾಗಿ ಒಗಟಾಗಿಯೇ ಉಳಿದಿರುವ ಅವರು ಪ್ರಚಾರದಿಂದ ದೂರವಿದ್ದು, ನಿವೃತ್ತಿಯ ಬಳಿಕ ತನ್ನ ಹುಟ್ಟೂರಿನಲ್ಲಿ ಶಾಂತ ಜೀವನವನ್ನು ನಡೆಸುತ್ತಿದ್ದಾರೆ. ಅವರ ಭಾವಚಿತ್ರಗಳು ದೃಢವಾದ ಅಭಿವ್ಯಕ್ತಿಯನ್ನು ತೋರಿಸುತ್ತವೆ. ನ್ಯಾ.ಫಾತಿಮಾ ಬೀವಿ ಅವರು ಕೇರಳದ ಪುಟ್ಟಗ್ರಾಮವೊಂದರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಪಯಣವನ್ನು ಆರಂಭಿಸಿದ್ದರು.
ಅಂದಿನ ಕೇರಳದ ಸಂಸ್ಥಾನ ತಿರುವಾಂಕೂರಿನ ಪಟ್ಟಣಂತಿಟ್ಟದ ಅನ್ನವೀಟಿ ಮೀರಾ ಸಾಹಿಬ್ ಮತ್ತು ಖದೀಜಾ ಬೀವಿ ದಂಪತಿಯ ಎಂಟು ಮಕ್ಕಳಲ್ಲಿ ಹಿರಿಯರಾದ ಫಾತಿಮಾ ಬೀವಿ 1927,ಎ.30ರಂದು ಜನಿಸಿದ್ದರು. ಎಳವೆಯಿಂದಲೇ ಅವರು ಶ್ರದ್ಧೆಯಿಂದ ಓದುತ್ತಿದ್ದರು. ಸರಕಾರಿ ನೌಕರರಾಗಿದ್ದ ಮೀರಾ ಸಾಹಿಬ್ ತನ್ನ ಪುತ್ರರು ಮತ್ತು ಪುತ್ರಿಯರಿಗೆ ಓದಲು ಸಮಾನವಾಗಿ ಪ್ರೋತ್ಸಾಹಿಸಿದ್ದರು. ಪಟ್ಟಣಂತಿಟ್ಟದಲ್ಲಿ ಮೆಟ್ರಿಕ್ಯುಲೇಷನ್ ಪೂರೈಸಿದ ಬಳಿಕ ಆಗ ತ್ರಿವೇಂದ್ರಂ ಎಂದು ಕರೆಯಲಾಗುತ್ತಿದ್ದ ಈಗಿನ ತಿರುವನಂತಪುರದಲ್ಲಿ ವಿಜ್ಞಾನದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದರು.
ಎಳೆಯ ಬಾಲಕಿಯೋರ್ವಳು ಕುಟುಂಬದಿಂದ ದೂರವಿದ್ದು ನಗರಕ್ಕೆ ಓದಲು ತೆರಳುವುದು ದಿಟ್ಟ ನಡೆಯಾಗಿದ್ದ ಕಾಲದಲ್ಲಿ ತನ್ನ ಪುತ್ರಿಯ ಓದುವ ಹಂಬಲವನ್ನು ಮೀರಾ ಸಾಹಿಬ್ ಹೃತ್ಪೂರ್ವಕವಾಗಿ ಬೆಂಬಲಿಸಿದ್ದರು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಲು ಫಾತಿಮಾ ಬೀವಿ ಬಯಸಿದ್ದರಾದರೂ ಅದಕ್ಕೆ ತಂದೆ ಒಲವು ವ್ಯಕ್ತಪಡಿಸಿರಲಿಲ್ಲ. ಮಗಳು ಕಾನೂನು ವ್ಯಾಸಂಗ ಮಾಡಬೇಕು ಎಂದು ಅವರು ಬಯಸಿದ್ದರು. ತಂದೆಯ ಬಯಕೆಯನ್ನು ಗೌರವಿಸಿ ಫಾತಿಮಾ ಬೀವಿ ತಿರುವನಂತಪುರದ ಸರಕಾರಿ ಕಾನೂನು ಕಾಲೇಜಿಗೆ ಸೇರಿದ್ದರು. ಆ ಕಾಲದಲ್ಲಿ ಅನ್ನಾ ಚಾಂಡಿ ಅವರು ಮೊದಲ ಮಹಿಳಾ ನ್ಯಾಯಾಂಗ ಅಧಿಕಾರಿಯಾಗಿದ್ದು,ತಿರುವಾಂಕೂರು ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಚಾಂಡಿಯವರ ಸಾಧನೆಗಳಿಂದ ಮೀರಾ ಸಾಹಿಬ್ ತುಂಬ ಪ್ರಭಾವಿತರಾಗಿದ್ದರು ಮತ್ತು ತನ್ನ ಮಗಳು ನ್ಯಾಯಾಧೀಶೆಯಾಗಬೇಕೆಂಬ ಅವರ ಕನಸಿಗೆ ಬಹುಶಃ ಚಾಂಡಿಯವರೇ ಪ್ರೇರಣೆಯಾಗಿದ್ದರು. ಫಾತಿಮಾ ಬೀವಿ ಸೇರಿದಂತೆ ತರಗತಿಯಲ್ಲಿ ಐವರು ವಿದ್ಯಾರ್ಥಿನಿಯರಿದ್ದರು. ಕಾನೂನು ಪದವಿಯ ಬಳಿಕ ಹಿರಿಯ ವಕೀಲರೋರ್ವರ ಬಳಿ ಅವರು ಒಂದು ವರ್ಷ ತರಬೇತಿಯನ್ನು ಪಡೆದಿದ್ದರು.
ಫಾತಿಮಾ ಬೀವಿ ವೃತ್ತಿಜೀವನದಲ್ಲಿಯ ಹಲವಾರು ಪ್ರಥಮಗಳಲ್ಲಿ ಮೊದಲನೆಯದನ್ನು 1950ರಲ್ಲಿ ಸಾಧಿಸಿದ್ದರು. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು 1949-50ನೇ ಸಾಲಿನ ಬಾರ್ ಕೌನ್ಸಿಲ್ನ ಸ್ವರ್ಣ ಪದಕಕ್ಕೆ ಭಾಜನರಾಗಿದ್ದರು.
1950, ನವಂಬರ್ 14ರಂದು ಕೇರಳದ ಕೊಲ್ಲಂ ಕೆಳ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ದಾಖಲಾಗುವುದರೊಂದಿಗೆ ಫಾತಿಮಾ ಬೀವಿ ಅವರ ಕಾನೂನು ಕ್ಷೇತ್ರದಲ್ಲಿ ವಿಧ್ಯುಕ್ತ ವೃತ್ತಿಜೀವನ ಆರಂಭಗೊಂಡಿತ್ತು. ನ್ಯಾಯಾಲಯದ ಆವರಣಗಳಲ್ಲಿ, ವಿಶೇಷವಾಗಿ ಅಧಿಕಾರದ ಹುದ್ದೆಗಳಲ್ಲಿ ಪುರುಷರದೇ ಪ್ರಾಬಲ್ಯವಿತ್ತು ಮತ್ತು ಮಹಿಳೆಯರು ಅಪರೂಪವಾಗಿ ಕಂಡು ಬರುತ್ತಿದ್ದರು. ಏಕೈಕ ಮಹಿಳಾ ನ್ಯಾಯವಾದಿಯಾಗಿದ್ದ, ನ್ಯಾಯಾಲಯದಲ್ಲಿ ಶಿರವಸ್ತ್ರ ಧರಿಸುತ್ತಿದ್ದ ಅವರನ್ನು ಕಂಡು ಅನೇಕರು ಹುಬ್ಬೇರಿಸಿದ್ದರು.
ಕೊಲ್ಲಂನಲ್ಲಿ ಸುಮಾರು ಎಂಟು ವರ್ಷಗಳ ಕಾಲ ನ್ಯಾಯವಾದಿಯಾಗಿ ಸಾರ್ವಜನಿಕರ ಮನ ಗೆದ್ದಿದ್ದ ಫಾತಿಮಾ ಬೀವಿ 1958ರಲ್ಲಿ ಕೇರಳ ಅಧೀನ ನ್ಯಾಯಾಂಗ ಸೇವೆಗಳಲ್ಲಿ ಮುನ್ಸೀಫ್ ಆಗಿ ನೇಮಕಗೊಂಡಿದ್ದರು ಮತ್ತು 1968ರಲ್ಲಿ ಅಧೀನ ನ್ಯಾಯಾಧೀಶರಾಗಿ ಪದೋನ್ನತಿಯನ್ನು ಹೊಂದಿದ್ದರು. ವೃತ್ತಿಜೀವನದಲ್ಲಿ ತ್ವರಿತವಾಗಿ ಮೇಲೇರಿದ ಅವರು 1972ರಲ್ಲಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮತ್ತು 1974ರಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು.
ಜನವರಿ 1980ರಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ನ್ಯಾಯಾಂಗ ಸದಸ್ಯೆಯಾಗಿ ನೇಮಕಗೊಂಡಿದ್ದ ಅವರಿಗೆ 1983,ಆ.4ರಂದು ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆಯು ಒಲಿದು ಬಂದಿತ್ತು. ಇದರೊಂದಿಗೆ ಉನ್ನತ ನ್ಯಾಯಾಂಗಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಒಂದು ವರ್ಷದ ಬಳಿಕ ಕೇರಳ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು ಎಪ್ರಿಲ್ 1989ರಲ್ಲಿ ನಿವೃತ್ತರಾಗಿದ್ದರು.
ಆದರೆ ಕೆಲವೇ ತಿಂಗಳ ಬಳಿಕ ಅಕ್ಟೋಬರ್ 1989ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಅದು ನಿಜಕ್ಕೂ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ತಿರುವಿನ ಘಳಿಗೆಯಾಗಿತ್ತು. ಮಾಧ್ಯಮಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಈ ಐತಿಹಾಸಿಕ ಘಳಿಗೆಯ ಕುರಿತು ಮಾತನಾಡಿದ್ದ ಫಾತಿಮಾ ಬೀವಿ ‘ಮುಚ್ಚಲ್ಪಟ್ಟಿದ್ದ ಬಾಗಿಲನ್ನು ನಾನು ತೆರದಿದ್ದೇನೆ ’ಎಂದು ಹೇಳಿದ್ದರು.
ಇತರ ಹಿರಿಯ ನ್ಯಾಯಾಧೀಶರನ್ನು ಹಿಂದಿಕ್ಕಿ ಸರ್ವೋಚ್ಚ ನ್ಯಾಯಾಲಯಕ್ಕೆ ಫಾತಿಮಾ ಬೀವಿಯವರ ನೇಮಕವು 1986ರ ಮುಸ್ಲಿಂ ಮಹಿಳೆಯರ ( ವಿಚ್ಛೇದನ ಕುರಿತು ಹಕ್ಕುಗಳ ರಕ್ಷಣೆ) ಕಾಯ್ದೆಯ ಕುರಿತು ವಿವಾದದ ಹಿನ್ನೆಲೆಯಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿಯವರು ಕೈಗೊಂಡಿದ್ದ ರಾಜಕೀಯ ನಿರ್ಧಾರವಾಗಿದೆ ಎಂದು ಕೆಲವರು ಆಗ ಹೇಳಿದ್ದರು. ಅದು ನಿಜವೋ ಸುಳ್ಳೋ ಗೊತ್ತಿಲ್ಲ,ಆದರೆ ಅದೊಂದು ಮಹತ್ವದ ನೇಮಕವಾಗಿತ್ತು. ಮಹಿಳಾ ನ್ಯಾಯಾಧೀಶರನ್ನು ನೇಮಕಗೊಳಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ನಾಲ್ಕು ದಶಕಗಳೇ ಬೇಕಾಗಿದ್ದವು. ದಶಕಗಳ ಬಳಿಕ ಇಂದಿಗೂ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯವು ಪುರುಷರಿಗಿಂತ ತುಂಬ ಕಡಿಮೆಯೇ ಇದೆ.
ಅದು ಏಷ್ಯಾದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೊದಲ ಮಹಿಳಾ ನ್ಯಾಯಾಧೀಶರ ನೇಮಕವಾಗಿತ್ತು. ಫಾತಿಮಾ ಬೀವಿ ಅವರು ಭಾರತ ಮತ್ತು ಏಷ್ಯಾದಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊದಲ ಮುಸ್ಲಿಂ ನ್ಯಾಯಾಧೀಶರೂ ಆಗಿದ್ದರು. 1992ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತಿಯ ಬಳಿಕ ಫಾತಿಮಾ ಬೀವಿಯವರನ್ನು 1997,ಜ.25ರಂದು ಡಿಎಂಕೆ ವರಿಷ್ಠ ಎಂ.ಕರುಣಾನಿಧಿಯವರ ಶಿಫಾರಸಿನ ಮೇರೆಗೆ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಳಿಸಲಾಗಿತ್ತು.
ಈ ವೇಳೆ ಭ್ರಷ್ಟಾಚಾರದ ಆರೋಪದಲ್ಲಿ ಜಯಲಲಿತಾ ದೋಷನಿರ್ಣಯಕ್ಕೊಳಗಾಗಿದ್ದರು ಮತ್ತು ಅವರನ್ನು ಆರು ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸುವುದರಿಂದ ನಿಷೇಧಿಸಲಾಗಿತ್ತು. ಆದಾಗ್ಯೂ ರಾಜ್ಯಪಾಲರಾಗಿ ಫಾತಿಮಾ ಬೀವಿ ವಿಧಾನಸಭಾ ಚುನಾವಣೆಗಳ ಬಳಿಕ ಜಯಲಲಿತಾರ ಬಹುಮತದ ವಾದಕ್ಕೆ ಮಣೆ ಹಾಕಿದ್ದರು. ʼಶಾಸಕಾಂಗದ ಸದಸ್ಯರಲ್ಲದವರು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿರುವ ಸಂವಿಧಾನದ 164ನೇ ವಿಧಿಯಡಿ ಫಾತಿಮಾ ಬೀವಿ ಕಾರ್ಯ ನಿರ್ವಹಿಸಿದ್ದರು ಮತ್ತು ತಾನು ಮುಖ್ಯಮಂತ್ರಿಯಾಗಬೇಕು ಎನ್ನುವುದು ಜನರ ಇಚ್ಛೆಯಾಗಿದೆʼ ಎಂಬ ಜಯಲಲಿತಾರ ವಾದವನ್ನು ಪುರಸ್ಕರಿಸಿದ್ದರು.
ಫಾತಿಮಾ ಬೀವಿ ಜಯಲಲಿತಾರನ್ನು ಮುಖ್ಯಮಂತ್ರಿಯಾಗಿ ನೇಮಕಗೊಳಿಸಿದಾಗ ಅವರು ಭ್ರಷ್ಟಾಚಾರದ ಆರೋಪಗಳಿಂದ ಖುಲಾಸೆಗೊಂಡಿದ್ದರು. ಹೀಗಿದ್ದರೂ ಜಯಲಲಿತಾರ ನೇಮಕವನ್ನು ಪರಿಗಣಿಸುವ ಮುನ್ನ ಫಾತಿಮಾ ಬೀವಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ಮುಖ್ಯ ನ್ಯಾಯಮೂರ್ತಿ ಅಹ್ಮದಿ,ಹಿರಿಯ ವಕೀಲ ಫಲಿ ನಾರಿಮನ್ ಮತ್ತಿತರರೊಂದಿಗೆ ಸಮಾಲೋಚಿಸಿದ್ದರು ಮತ್ತು ಅವರೆಲ್ಲರೂ ಹಸಿರು ನಿಶಾನೆಯನ್ನು ತೋರಿಸಿದ್ದರು.
‘ನಾನು ಯಾವುದೇ ನಿರ್ಧಾರವನ್ನು ದಿಢೀರ್ ಕೈಗೊಳ್ಳುವುದಿಲ್ಲ, ಚೆನ್ನಾಗಿ ಯೋಚಿಸಿಯೇ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆದರೆ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಸಂಘರ್ಷಗಳು ಸೃಷ್ಟಿಯಾದಾಗ ಹುದ್ದೆಯಲ್ಲಿ ಮುಂದುವರಿಯಲು ನಾನು ಬಯಸಿರಲಿಲ್ಲ. ಹೀಗಾಗಿ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ವಾಪಸಾಗಿದ್ದೆ ’ ಎಂದು ಫಾತಿಮಾ ಬೀವಿ ಸ್ಮರಿಸಿಕೊಂಡರು.
ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಫಾತಿಮಾ ಬೀವಿ ಏಕಾಂತದಲ್ಲಿ ತನ್ನ ಜೀವನವನ್ನು ಕಳೆಯಲು ಪಟ್ಟಣಂತಿಟ್ಟದಲ್ಲಿಯ ಕುಟುಂಬದ ಮನೆಗೆ ಮರಳಿದ್ದರು. 73ನೇ ವಯಸ್ಸಿನಲ್ಲಿ ರಾಜೀನಾಮೆ ನೀಡಿದ್ದ ಅವರು ನಿವೃತ್ತ ಜೀವನವನ್ನು ಪ್ರತಿಷ್ಠಿತ ಹುದ್ದೆಗಳಲ್ಲಿದ್ದಾಗಿನ ಅದೇ ಶಾಂತಿಯಿಂದ ಕಳೆಯುತ್ತಿದ್ದಾರೆ.
ಕೃಪೆ: Theprint.in