×
Ad

‘ರೈಲಿಗೆ ಹತ್ತಲು ಬಿಡದೆ ಹಲ್ಲೆ ನಡೆಸಿ, ಪೇಪ್ಪರ್ ಸ್ಪ್ರೇ ಮಾಡಿದರು’

Update: 2022-03-09 19:14 IST

ಉಡುಪಿ, ಮಾ.9: ‘ಕೊನೆಯ ರೈಲು ಎಂಬ ಸಂದೇಶ ಬಂತು. ಅದಕ್ಕಾಗಿ ನಾವು ಬಂಕರ್ ಬಿಟ್ಟು ಸುಮಾರು ಏಳು ಕಿ.ಮೀ. ನಡೆದುಕೊಂಡು ರೈಲ್ವೆ ನಿಲ್ದಾಣ ತಲುಪಿದೆವು. ಅಲ್ಲಿ ಜನಜಂಗುಳಿ ತುಂಬಿತ್ತು. ಆದರೆ ರೈಲಿಗೆ ಹತ್ತಲು ಸ್ಥಳೀಯರು ಅವಕಾಶ ನೀಡಲಿಲ್ಲ. ನಾವು ಭಾರತೀಯರು ಎಂಬ ಕಾರಣಕ್ಕೆ, ನೀವು ಇಲ್ಲಿಗೆ ಯಾಕೆ ಬಂದಿರುವುದು, ಇಲ್ಲಿಯೇ ಇದ್ದು ಸತ್ತು ಹೋಗಿ ಎಂದು ಹೇಳಿದರು. ನಮ್ಮವರಿಗೆ ಕಚ್ಚಿ, ಹಲ್ಲೆ ನಡೆಸಿ, ಪೆಪ್ಪರ್ ಸ್ಪ್ರೇ ಮಾಡಿ, ಕೂದಲು ಎಳೆದು ರೈಲಿನಿಂದ ದೂಡಿ ಹಾಕಿದರು’

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿ ಸುಮಾರು ಎರಡು ವಾರಗಳ ಬಳಿಕ ತಾಯಾಡ್ನಿಗೆ ತಲುಪಿದ ಉಡುಪಿ ಕಲ್ಯಾಣಪುರದ ವಿದ್ಯಾರ್ಥಿನಿ, ವಿಲಿಯಂ ಡಿಸೋಜ ಹಾಗೂ ಶೋಭಾ ಡಿಸೋಜ ದಂಪತಿ ಪುತ್ರಿ ಅನಿಫ್ರೆಡ್ ರಿಡ್ಲೆ ಡಿಸೋಜ (20) ತಮ್ಮ ಆತಂಕದ ದಿನಗಳನ್ನು ನೆನಪು ಮಾಡಿಕೊಂಡ ರೀತಿ ಇದು.

‘ರೈಲಿಗೆ ಹತ್ತುವಾಗ ನನ್ನನು ಕೂಡ ದೂಡಿದರು. ನಾವು ಭಾರತೀಯರು ಹಾಗೂ ಅವರಿಗೆ ಸೀಟು ಸಿಗಬೇಕೆಂಬ ಕಾರಣಕ್ಕೆ ಹಲ್ಲೆ ಮಾಡುತ್ತಿದ್ದರು. ನಮಗೆ ಬೈದಿದಕ್ಕೆ ನಾವು ಕೂಡ ಅವರಿಗೆ ವಾಪಾಸ್ಸು ಬೈದಿದ್ದೇವೆ. ಪ್ರತಿ ಬೋಗಿಯಲ್ಲಿ ನಿಲ್ಲುತ್ತಿದ್ದ ಸ್ವಯಂ ಸೇವಕರ ಕೈಯಲ್ಲಿ ಗನ್‌ಗಳಿದ್ದವು. ಅದಕ್ಕೆ ನಾವು ಹೆಚ್ಚು ಮಾತನಾಡಲು ಹೋಗಿಲ್ಲ. ನಾವು ಕೂಡ ದೂಡಿಕೊಂಡೇ ರೈಲಿನ ಒಳಗೆ ನುಗ್ಗಿ ಕುಳಿತುಕೊಂಡೆವು. ಹೀಗೆ ಸುಮಾರು 24 ಗಂಟೆಗಳ ಕಾಲ ರೈಲು ಪ್ರಯಾಣ ಮಾಡಿ ಹಂಗೇರಿ ಗಡಿ ತಲುಪಿದೆವು’ ಎಂದು ಅನಿಫ್ರೆಡ್ ತಿಳಿಸಿದರು.

ಆನ್‌ಲೈನ್ ತರಗತಿಗೆ ಒಪ್ಪಿಲ್ಲ

‘ಯುದ್ಧ ಆರಂಭವಾಗುವ ಸುದ್ದಿ ತಿಳಿದು ನಾವು ಆನ್‌ಲೈನ್ ತರಗತಿ ಮಾಡುವಂತೆ ಡೀನ್ ಅವರಲ್ಲಿ ಕೇಳಿಕೊಂಡೆವು. ಅದಕ್ಕಾಗಿ ವಿದ್ಯಾರ್ಥಿಗಳು ಡೀನ್ ಕಚೇರಿ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ ಅವರು ಅದಕ್ಕೆ ಒಪ್ಪದೆ ಆಫ್‌ಲೈನ್ ತರಗತಿಯನ್ನು ಮುಂದುವರೆಸಿದರು. ಹಾಗಾಗಿ ನಾವು ಅಲ್ಲೇ ಉಳಿದುಕೊಳ್ಳಬೇಕಾಯಿತು’ ಎಂದು ಅನಿಫ್ರೆಡ್ ತಿಳಿಸಿದರು.

ಕೇವಲ ಪಠ್ಯ ಪುಸ್ತಕದಲ್ಲಿ ಓದಿರುವುದು ಬಿಟ್ಟರೆ ನನಗೆ ವಾಸ್ತವವಾಗಿ ಯುದ್ಧ ಅಂದರೆ ಏನು ಎಂಬುದೇ ಗೊತ್ತಿಲ್ಲ. ಮೊದಲ ಬಾರಿಗೆ ಯುದ್ಧ ನೋಡುವಾಗ ಹೇಗೆ ಪ್ರತಿಕ್ರಿಯಿಸಬೇಕೆಂಬುದು ಗೊತ್ತಾಗಿಲ್ಲ. ಆದರೆ ನನ್ನ ತಂದೆ ತಾಯಿ ನನಗೆ ತುಂಬಾ ಧೈರ್ಯ ಕೊಡುತ್ತಿದ್ದರು. ಆದಷ್ಟು ಬೇಗ ತಾಯ್ನಿಡಿಗೆ ತಲುಪಬೇಕೆಂಬ ಛಲದೊಂದಿಗೆ ಧೈರ್ಯ ಮಾಡಿಕೊಂಡೆ. ಇದರಿಂದ ಭಯ ಕೂಡ ಕಡಿಮೆ ಆಯಿತು. ಹಾಗಾಗಿ ನಾವು ಮಾ.2ಕ್ಕೆ ಬಂಕರ್ ಬಿಡುವ ನಿರ್ಧಾರ ಮಾಡಿದ್ದೇವು ಎಂದು ಅವರು ವಿವರಿಸಿದರು.

ರಾಯಭಾರಿ ಕಚೇರಿಯವರು ನಮಗೆ ಸಮಯ ಸಮಯಕ್ಕೆ ತುಂಬಾ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಹಾಗಾಗಿ ನಾವು ಸುರಕ್ಷಿತ ರೂಟ್ ಪ್ಲಾನ್ ಮಾಡಿ ಕೊಂಡೆವು. ಹಂಗೇರಿಯಲ್ಲಿ ಉಚಿತ ಊಟ, ಟಿಕೆಟ್‌ಗಳನ್ನು ನಮಗೆ ಒದಗಿಸಲಾಯಿತು. ಅಲ್ಲದೆ ತಕ್ಷಣದಲ್ಲಿಯೇ ನಮಗೆ ತಾಯ್ನಾಡಿಗೆ ಬರಲು ವಿಮಾನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

''ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯವರು ಮೊದಲೇ ನಮಗೆ ಸ್ಟ್ರಾಂಗ್ ಅಡ್ವೈಸರಿ ನೀಡುತ್ತಿದ್ದರೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ. ನಮಗೆ ಶಿಕ್ಷಣ ಕೂಡ ಮುಖ್ಯವಾಗಿತ್ತು. ನಾವು ಅಲ್ಲಿಗೆ ನಮ್ಮ ಕನಸನ್ನು ನನಸು ಮಾಡಲು ಹೋಗಿರುವುದೇ ಹೊರತು ತಿರುಗಾಡಲು ಅಲ್ಲ. ಹಾಗಾಗಿ ನಾವು ಶಿಕ್ಷಣಕ್ಕೆ ಆದ್ಯತೆ ನೀಡಿ ಅಲ್ಲೇ ಉಳಿದುಕೊಂಡಿವು'' -ಅನಿಫ್ರೆಡ್ ರಿಡ್ಲೆ ಡಿಸೋಜ, ವಿದ್ಯಾರ್ಥಿನಿ

''ಮಗಳು ಸುರಕ್ಷಿತವಾಗಿ ಮನೆ ತಲುಪುವಂತೆ ಪ್ರತಿದಿನ ಚರ್ಚಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದೆ. ಮಗಳ ಫೋನ್ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆ. ಅವಳಿಗೆ ಫೋನ್ ಮೂಲಕ ಎಲ್ಲ ರೀತಿಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದೆ. ಮಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿರುವ ದೇವರಿಗೆ ಕೃತಜ್ಞತೆಗಳು. ಅದೇ ರೀತಿ ಸರಕಾರ ಕೂಡ ತುಂಬಾ ಸಹಾಯ ಮಾಡಿದೆ''.
-ಶೋಭಾ ಡಿಸೋಜ, ಅನಿಫ್ರೆಡ್ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News