×
Ad

ನಿಮಗೆಲ್ಲ ಆಳವಾಗಿ ನಾಟುವಂತಹ ಪ್ರತಿಕ್ರಮವನ್ನು ನಾವು ರೂಪಿಸುತ್ತಿದ್ದೇವೆ:ಪಾಶ್ಚಿಮಾತ್ಯ ದೇಶಗಳಿಗೆ ರಶ್ಯ ಎಚ್ಚರಿಕೆ

Update: 2022-03-09 21:58 IST
putin

ಮಾಸ್ಕೊ, ಮಾ.9: ತನ್ನ ವಿರುದ್ಧ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಕ್ಕೆ ಪ್ರತಿಯಾಗಿ ಅವುಗಳ ವಿರುದ್ಧ ಅತ್ಯಂತ ಕ್ಷಿಪ್ರ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಆಳವಾಗಿ ನಾಟುವಂತಹ ವ್ಯಾಪಕ ನಿರ್ಬಂಧ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ರಶ್ಯ ಬುಧವಾರ ಎಚ್ಚರಿಸಿದೆ. ಯಾರನ್ನು ಉದ್ದೇಶಿಸಲಾಗಿದೆಯೋ ಅವರಿಗೆ ಕ್ಷಿಪ್ರಗತಿಯಲ್ಲಿ ನಾಟುವ ಮತ್ತು ಅತ್ಯಂತ ಸೂಕ್ಷ್ಮ ಭಾಗಕ್ಕೆ ಘಾಸಿಮಾಡುವ ರೀತಿಯ ಚಿಂತನಶೀಲ ನಿರ್ಬಂಧಗಳ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ರಶ್ಯದ ವಿದೇಶ ವ್ಯವಹಾರ ಸಚಿವಾಲಯದ ಆರ್ಥಿಕ ಸಹಕಾರ ವಿಭಾಗದ ನಿರ್ದೇಶಕ ಡಿಮಿಟ್ರಿ ಬಿರಿಚೆವಿಸ್ಕಿಯನ್ನು ಉಲ್ಲೇಖಿಸಿ ರಶ್ಯದ ಆರ್ಐಎ ಸುದ್ಧಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ , ರಶ್ಯದ ಬಹುತೇಕ ಆರ್ಥಿಕ ಮತ್ತು ಕಾರ್ಪೊರೇಟ್ ವ್ಯವಸ್ಥೆಯ ಮೇಲೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ಕಠಿಣ ನಿರ್ಬಂಧದಿಂದಾಗಿ ಆ ದೇಶದ ಅರ್ಥವ್ಯವಸ್ಥೆ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ರಶ್ಯದಿಂದ ತೈಲ ಮತ್ತು ಇತರ ಇಂಧನಗಳ ಆಮದನ್ನು ಅಮೆರಿಕ ಮಂಗಳವಾರ ನಿಷೇಧಿಸಿದೆ.
ತನ್ನ ದೇಶದಿಂದ ಕಚ್ಛಾತೈಲದ ಆಮದಿಗೆ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ನಿಷೇಧ ಹೇರಿದರೆ ಕಚ್ಛಾತೈಲದ ದರ ಬ್ಯಾರಲ್‌ಗೆ 300 ಡಾಲರ್ಗಿಂತಲೂ ಹೆಚ್ಚಾಗಬಹುದು ಎಂದು ಈ ವಾರದ ಆರಂಭದಲ್ಲಿ ರಶ್ಯ ಎಚ್ಚರಿಸಿತ್ತು. ಯುರೋಪ್‌ನಲ್ಲಿ ವಾರ್ಷಿಕ ಬಳಕೆಯಾಗುವ ಸುಮಾರು 500 ಮಿಲಿಯನ್ ಟನ್ ತೈಲದಲ್ಲಿ ರಶ್ಯ ಸುಮಾರು 30% ಪೂರೈಸುತ್ತಿದೆ, ಜತೆಗೆ 80 ಮಿಲಿಯನ್ ಟನ್‌ಗಳಷ್ಟು ಪೆಟ್ರೊಕೆಮಿಕಲ್ಸ್ ಪೂರೈಸುತ್ತಿದೆ.

"ಉಕ್ರೇನ್ ಸರಕಾರದ ಪದಚ್ಯುತಿಗೆ ಪ್ರಯತ್ನಿಸುತ್ತಿಲ್ಲ"

ಉಕ್ರೇನ್ ಸರಕಾರವನ್ನು ಉರುಳಿಸಲು ತಾನು ಪ್ರಯತ್ನಿಸುತ್ತಿಲ್ಲ ಎಂದು ರಶ್ಯ ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಮೇಲಿನ ರಶ್ಯ ಆಕ್ರಮಣಕ್ಕೆ ಸಂಬಂಧಿಸಿ ಬುಧವಾರದ ಕೆಲವು ಪ್ರಮುಖ ಬೆಳವಣಿಗೆಗಳು:

ಉಕ್ರೇನ್‌ನ ಯುದ್ಧಗ್ರಸ್ತ ಪ್ರದೇಶದಿಂದ ನಾಗರಿಕರು ಸುರಕ್ಷಿತವಾಗಿ ಹೊರತೆರಳಲು ಮಾಡಿರುವ ಮಾನವೀಯ ಕಾರಿಡಾರ್ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಬುಧವಾರ ಒಂದು ದಿನದ ಯುದ್ಧವಿರಾಮ ಜಾರಿಗೊಳಿಸಲು ಉಭಯ ದೇಶಗಳ ಒಪ್ಪಿಗೆ. ತೀವ್ರ ಸಂಘರ್ಷ ನಡೆಯುತ್ತಿರುವ ರಾಜಧಾನಿ ಕೀವ್ ಬಳಿಯ ಪ್ರದೇಶ, ದಕ್ಷಿಣದ ಝಪೊರಿಝ್ಯಿ, ಈಶಾನ್ಯದ ಕೆಲವು ಪ್ರದೇಶಗಳಲ್ಲಿ ಬುಧವಾರ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕದನ ವಿರಾಮಕ್ಕೆ ಉಭಯ ದೇಶಗಳೂ ಒಪ್ಪಿರುವುದಾಗಿ ಉಕ್ರೇನ್‌ನ ಉಪಪ್ರಧಾನಿ ಇರಿನಾ ವೆರೆಸ್ ಚುಕ್ ಹೇಳಿಕೆ.

ಪಾಶ್ಚಿಮಾತ್ಯ ದೇಶಗಳ ನಿರ್ಬಂಧಕ್ಕೆ ಪ್ರತಿಯಾಗಿ ಚಿಂತನಶೀಲ, ತ್ವರಿತ ಮತ್ತು ಸೂಕ್ಷ್ಮ ವಿಭಾಗಗಳಿಗೆ ನಾಟುವಂತಹ ರೀತಿಯಲ್ಲಿ ಉತ್ತರಿಸುವ ಯೋಜನೆಯನ್ನು ರೂಪಿಸುತ್ತಿರುವುದಾಗಿ ರಶ್ಯದ ವಿದೇಶ ಸಚಿವಾಲಯದ ಆರ್ಥಿಕ ಸಹಕಾರ ವಿಭಾಗದ ನಿರ್ದೇಶಕ ಡಿಮಿಟ್ರಿ ಬಿರಿಚೆವಿಸ್ಕಿ ಹೇಳಿಕೆ.

ರಶ್ಯದ ಆಕ್ರಮಣದ ಬಳಿಕ ಉಕ್ರೇನ್‌ನಿಂದ ಪಲಾಯನ ಮಾಡಿರುವವರ ಸಂಖ್ಯೆ ಸುಮಾರು 2.2 ಮಿಲಿಯನ್‌ಗೆ ತಲುಪಿರಬಹುದು ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಸಮಿತಿ ಯುಎನ್‌ಎಚ್‌ಸಿಆರ್‌ನ ಮುಖುಸ್ಥ ಫಿಲಿಪೊ ಗ್ರಾಂಡಿ ಸುದ್ಧಿಗೋಷ್ಟಿಯಲ್ಲಿ ಹೇಳಿಕೆ. ಇದೀಗ ದೇಶಗಳ ಮಧ್ಯೆ ನಿರಾಶ್ರಿತರ ಹಂಚಿಕೆ ವಿಷಯದಲ್ಲಿ ಚರ್ಚೆ ನಡೆಯುವ ಬದಲು, ನಿರಾಶ್ರಿತರಿಗೆ ಗಡಿಭಾಗದಲ್ಲಿ ನೆರವು ಒದಗಿಸಲು ಪ್ರಯತ್ನಿಸುವ ಸಮಯ ಇದಾಗಿದೆ ಎಂದವರು ಹೇಳಿದ್ದಾರೆ.

ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಸಿಬ್ಬಂದಿ ಈಗ ರಶ್ಯದ ಭದ್ರತಾ ಸಿಬಂದಿಯ ಕೈಕೆಳಗೆ ಕೆಲಸ ಮಾಡುತ್ತಿರುವುದರಿಂದ ಈಗ ವಿಶ್ವಸಂಸ್ಥೆಯ ಪರಮಾಣು ನಿಗಾ ಸಮಿತಿಗೆ ಡೇಟಾವನ್ನು ರವಾನಿಸುವುದಿಲ್ಲ ಎಂದು ಸಮಿತಿ ಹೇಳಿದೆ. ಚೆರ್ನೋಬಿಲ್ ಸ್ಥಾವರದಲ್ಲಿ ಅಳವಡಿಸಲಾಗಿದ್ದ ಮೇಲ್ವಿಚಾರಣೆ ವ್ಯವಸ್ಥೆಯಿಂದ ಡೇಟಾ ರವಾನೆ ಕಾರ್ಯ ಸ್ಥಗಿತಗೊಂಡಿದೆ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿಯ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ , ರಶ್ಯದ ಇನ್ನಷ್ಟು ಅಧಿಕಾರಿಗಳು ಹಾಗೂ ಉದ್ಯಮಿಗಳನ್ನು ಕಪ್ಪುಪಟ್ಟಿ(ನಿಷೇಧ)ಗೆ ಸೇರಿಸಲು ಯುರೋಪಿಯನ್ ಯೂನಿಯನ್ ಒಪ್ಪಿಗೆ. ಸಮುದ್ರ ಮಾರ್ಗದ ವ್ಯವಹಾರವನ್ನು ಗುರಿಯಾಗಿಸಿಕೊಂಡು ಕ್ರಿಪ್ಟೊಕರೆನ್ಸಿ ವರ್ಗಾವಣೆಯ ಮೇಲಿನ ನಿಯಂತ್ರಣ ಇನ್ನಷ್ಟು ಬಿಗುಗೊಳಿಸಲು ನಿರ್ಧಾರ.

ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಆದೇಶಿಸಿದ್ದ ಹಿನ್ನೆಲೆಯಲ್ಲಿ ರಶ್ಯವನ್ನು ಭಯೋತ್ಪಾದಕ ದೇಶವೆಂದು ಗೊತ್ತುಪಡಿಸುವಂತೆ ಬ್ರಿಟನ್ ಸಂಸದರಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಗ್ರಹ. ದೇಶದ ವಾಯುವಲಯ ಸುರಕ್ಷಿತವಾಗಿರುವುದನ್ನು ಖಾತರಿಪಡಿಸಲು ರಶ್ಯ ವಿರುದ್ಧ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೆ ಒತ್ತಾಯ.

ಅಮೆರಿಕದ ವಾಯುನೆಲೆಯ ಮೂಲಕ ಉಕ್ರೇನ್‌ಗೆ ಮಿಗ್-29 ಯುದ್ಧವಿಮಾನ ರವಾನಿಸುವ ಪೋಲ್ಯಾಂಡ್ ಪ್ರಸ್ತಾವನೆಗೆ ಅಮೆರಿಕ ತಿರಸ್ಕಾರ. ಇದರಿಂದ ನೇಟೊ ಒಕ್ಕೂಟದ ಮೇಲೆ ಗಂಭೀರ ಆತಂಕ ಎದುರಾಗಬಹುದು ಎಂದು ಅಮೆರಿಕದ ಹೇಳಿಕೆ. ಸೋವಿಯತ್ ಒಕ್ಕೂಟದ ಯುಗದ ಯುದ್ಧವಿಮಾನವನ್ನು ಉಕ್ರೇನ್‌ಗೆ ಪೂರೈಸಿದರೆ ಪೋಲ್ಯಾಂಡ್‌ಗೆ ಎಫ್-16 ಯುದ್ಧವಿಮಾನ ಪೂರೈಸುವುದಾಗಿ ಅಮೆರಿಕ ಹೇಳಿತ್ತು.

ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ, ರಶ್ಯದಲ್ಲಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವುದಾಗಿ ಮೆಕ್ಡೊನಾಲ್ಡ್, ಕೋಕಾ-ಕೋಲಾ, ಸ್ಟಾರ್ಬಕ್ಸ್ ಸಹಿತ ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಗಳ ಘೋಷಣೆ. ರಶ್ಯದಿಂದ ತೈಲ, ಅನಿಲ(ಗ್ಯಾಸ್) ಮತ್ತು ಕಲ್ಲಿದ್ದಲು ಆಮದಿನ ಮೇಲೆ ನಿಷೇಧ ಘೋಷಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್. ರಶ್ಯದಿಂದ ತೈಲ ಆಮದನ್ನು ಈ ವರ್ಷಾಂತ್ಯದೊಳಗೆ ಹಂತಹಂತವಾಗಿ ಮುಕ್ತಾಯಗೊಳಿಸುವುದಾಗಿ ಬ್ರಿಟನ್ ಹೇಳಿಕೆ.

ಮೊಣಕಾಲಲ್ಲಿ ನಿಂತು ಬೇಡಿಕೊಳ್ಳುವ ದೇಶದ ಅಧ್ಯಕ್ಷನಾಗಿರಲು ತಾನು ಬಯಸುವುದಿಲ್ಲ . ನೇಟೊ ಸದಸ್ಯತ್ವಕ್ಕೆ ಇನ್ನು ಮುಂದೆ ಒತ್ತಾಯ ಹೇರುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಘೋಷಣೆ. ಉಕ್ರೇನ್ ವಿರುದ್ಧದ ರಶ್ಯದ ಅಸಮಾಧಾನಕ್ಕೆ ಈ ವಿಷಯ (ನೇಟೊ ಸದಸ್ಯತ್ವ) ಪ್ರಮುಖ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News