ಚೆರ್ನೋಬಿಲ್ ಅಣುಸ್ಥಾವರದ ಡೇಟಾ ವ್ಯವಸ್ಥೆಯ ನಿಯಂತ್ರಣ ತಪ್ಪಿಹೋಗಿದೆ: ವಿಶ್ವಸಂಸ್ಥೆ ಪರಮಾಣು ನಿಗಾ ಸಮಿತಿ
ವಿಯೆನ್ನಾ, ಮಾ.9: ಉಕ್ರೇನ್‌ನಲ್ಲಿನ ಚೆರ್ನೊಬಿಲ್ ಅಣುಸ್ಥಾವರದ ಸಿಬಂದಿ ಈಗ ರಶ್ಯದ ಭದ್ರತಾ ಪಡೆಯ ಕೈಕೆಳಗೆ ಕೆಲಸ ಮಾಡಬೇಕಿರುವುದರಿಂದ ಅಲ್ಲಿನ ಅಣುಸ್ಥಾವರದ ಡೇಟಾ ವ್ಯವಸ್ಥೆಯ ಮೇಲಿನ ನಿಯಂತ್ರಣ ತಪ್ಪಿಹೋಗಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾರ್ಯಕ್ರಮ ನಿಗಾ ಸಮಿತಿ(ಐಎಇಎ) ಹೇಳಿದೆ.
ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ್ದ ರಶ್ಯ, ಚೆರ್ನೋಬಿಲ್ ಅಣುಸ್ಥಾವರವನ್ನು ವಶಕ್ಕೆ ಪಡೆದಿದೆ. ಆ ಸ್ಥಾವರದಲ್ಲಿ ಐಎಇಎ ಅಳವಡಿಸಿದ್ದ ಮೇಲ್ವಿಚಾರಣಾ ವ್ಯವಸ್ಥೆಯ ಸಂಪರ್ಕ ತಪ್ಪಿಹೋಗಿದೆ . ಇದೀಗ ಉಕ್ರೇನ್‌ನ ಇತರ ಸ್ಥಳಗಳಲ್ಲಿ ಅಳವಡಿಸಿರುವ ಮೇಲ್ವಿಚಾರಣಾ ವ್ಯವಸ್ಥೆಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ. 13 ದಿನದ ಹಿಂದೆ ಚೆರ್ನೋಬಿಲ್ ಸ್ಥಾವರ ರಶ್ಯದ ನಿಯಂತ್ರಣಕ್ಕೆ ಬಂದ ಸಂದರ್ಭ ಅಲ್ಲಿ 200ಕ್ಕೂ ಹೆಚ್ಚು ತಾಂತ್ರಿಕ ಸಿಬಂದಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಅಲ್ಲಿನ ತಾಂತ್ರಿಕ ಸಿಬ್ಬಂದಿಗೆ ನಿರಂತರ ನಿರ್ವಹಣೆಯ ಅಗತ್ಯವಿದೆ. ಇಲ್ಲದಿದ್ದರೆ ಮತ್ತೊಂದು ಪರಮಾಣು ದುರಂತ ಸಂಭವಿಸಬಹುದು. ಸ್ಥಗಿತಗೊಳಿಸಲಾಗಿರುವ ಈ ಸ್ಥಾವರದಲ್ಲಿ ಸ್ಥಗಿತಗೊಂಡ ರಿಯಾಕ್ಟರ್‌ಗಳು ಮತ್ತು ರೇಡಿಯೊ ವಿಕಿರಣ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿದೆ. ಸ್ಥಾವರದಲ್ಲಿ ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಗಳಿಗೆ ವಿಶ್ರಾಂತಿಯ ಅಗತ್ಯವಿದ್ದು ಪಾಳಿ ವ್ಯವಸ್ಥೆ ಮಾಡದಿದ್ದರೆ ಸ್ಥಾವರಕ್ಕೆ ಅಪಾಯವಿದೆ. ಈ ಬಗ್ಗೆ ರಶ್ಯ ಗಮನ ಹರಿಸಬೇಕು ಎಂದು ಐಎಇಎ ಒತ್ತಾಯಿಸಿದೆ