ಅಪಾಯ, ಆತಂಕದ ನಡುವೆ ಸುಮಿ ತೊರೆದ ಭಾರತೀಯ ವಿದ್ಯಾರ್ಥಿಗಳು: ರೊಮೇನಿಯಾದಿಂದ ಭಾರತಕ್ಕೆ ನಿರ್ಗಮನ

Update: 2022-03-09 17:50 GMT
photo coutesy:twitter

ಹೊಸದಿಲ್ಲಿ,ಮಾ.9: ಯುದ್ಧಪೀಡಿತ ಉಕ್ರೇನ್‌ನ ಸುಮಿ ಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 682 ಭಾರತೀಯ ವಿದ್ಯಾರ್ಥಿಗಳು ವಸ್ತುಶಃ ರಣರಂಗವಾಗಿರುವ ಆ ನಗರವನ್ನು ತೊರೆದಿದ್ದಾರೆ ಹಾಗೂ ಪೊಲ್ಟಾವಾ ನಗರದೆಡೆಗೆ ಪ್ರಯಾಣಿಸಿದ್ದಾರೆ. ಅಲ್ಲಿ ಅವರು ಪಶ್ಚಿಮ ಉಕ್ರೇನ್‌ನ ರೈಲುಗಳ ಮೂಲಕ ರೊಮೇನಿಯಾ ಗಡಿ ತಲುಪಿದ್ದಾರೆ. ಅಲ್ಲಿಂದ ಅವರು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ನಿರ್ಗಮಿಸಲಿದ್ದಾರೆ. ‌

ಮೂರು ದಿನಗಳ ವಿಳಂಬದ ಬಳಿಕ ಸುಮಿಯಿಂದ ತಮ್ಮನ್ನು ಸುರಕ್ಷಿತವಾಗಿ ಪಾರು ಮಾಡಿದ್ದಕ್ಕಾಗಿ ಭಾರತ ಸರಕಾರ ಮತ್ತು ಭಾರತೀಯ ರಾಯಭಾರಿ ಕಚೇರಿಗೆ ಭಾರತೀಯ ವಿದ್ಯಾರ್ಥಿಗಳು ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

ಪೊಲ್ಟಾವಾ ನಗರಕ್ಕೆ ತೆರಳುವುದಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಬಸ್‌ಗಳ ಏರ್ಪಾಡು ಮಾಡಲಾಗಿದ್ದು, ಅಲ್ಲಿಂದ ಅವರನ್ನು ರೊಮೇನಿಯಾ ನಗರಕ್ಕೆ ಸ್ಥಳಾಂತರಗೊಳಿಸಲಾಗುವುದು ಮತ್ತು ಆನಂತರ ಅವರನ್ನು ಭಾರತಕ್ಕೆ ವಿಶೇಷ ವಿಮಾನದ ಮೂಲಕ ರವಾನಿಸಲಾಗುವುದು. ಪ್ರಯಾಣದ ವೇಳೆ ಭಾರತೀಯ ರಾಯಭಾರ ಕಚೇರಿ ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಜೊತೆಗಿರುವರು. ಈ ಸುರಕ್ಷಿತ ತೆರವು ಕಾರ್ಯಾಚರಣೆಗಾಗಿ ಭಾರತ ಸರಕಾರ, ರಾಜತಾಂತ್ರಿಕರು, ರೆಡ್ ಕ್ರಾಸ್ ಸೊಸೈಟಿಗೆ ನಾವು ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ ಎಂದು ಸುಮಿ ಸ್ಟೇಟ್ ಯೂನಿವರ್ಸಿಟಿಯಲ್ಲಿ ಐದನೇ ವರ್ಷದ ವೈದ್ಯಕೀಯ ಪದವಿ ವಿದ್ಯಾರ್ಥಿ ಪಿನಾಕಿ ರಾಜನ್ ತಿಳಿಸಿದ್ದಾರೆ.

ಆದರೆ ಸೋಮವಾರ ಭಾರತೀಯ ರಾಯಭಾರ ಕಚೇರಿಯು ಕೊನೆ ಕ್ಷಣದಲ್ಲಿ ಸುಮಿಯಲ್ಲಿ ಬಸ್ ಏರಿದ್ದ ಭಾರತೀಯ ವಿದ್ಯಾರ್ಥಿಗಳಿಗೆ, ರೊಮೇನಿಯಾಕ್ಕೆ ಪ್ರಯಾಣಿಸುವ ದಾರಿಯು ಸುರಕ್ಷಿತವಲ್ಲದ ಕಾರಣ ಪ್ರಯಾಣವನ್ನು ನಿಲ್ಲಿಸುವಂತೆ ಸೂಚಿಸಿದಾಗ ಗೊಂದಲದ ವಾತಾವರಣವುಂಟಾಗಿತ್ತು.

600ಕ್ಕೂ ಅಧಿಕ ವಿದ್ಯಾರ್ಥಿಗಳು ಸುಮಿ ವಿವಿಯಿಂದ ತೆರವುಗೊಳ್ಳಬೇಕಿತ್ತಾದರೂ ಕೇವಲ 3 ಬಸ್‌ಗಳಷ್ಟೇ ಆಗಮಿಸಿದ್ದವು ಎಂದು ಪಿನಾಕಿ ಹೇಳಿದ್ದಾರೆ. ಮಂಗಳವಾರದಂದು ಇನ್ನೂ ಹೆಚ್ಚಿನ ಬಸ್‌ಗಳನ್ನು ತರಲಾಗುವುದು ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದರು. ರಶ್ಯ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾದಾಗಿನಿಂದಲೂ ತಮ್ಮನ್ನು ತೆರವುಗೊಳಿಸಬೇಕೆಂಬ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆಯದಿದ್ದಾಗ ವಿದ್ಯಾರ್ಥಿಗಳ ಒಂದು ಗುಂಪಿನಲ್ಲಿ ಅಸಹನೆ ಸೃಷ್ಟಿಯಾಗಿತ್ತು.
 
ಶನಿವಾರದಂದು ವಿದ್ಯಾರ್ಥಿಗಳು ವಿಡಿಯೋ ಒಂದನ್ನು ಬಿಡುಗಡೆಗೊಳಿಸಿ ತಾವಾಗಿಯೇ ಸುಮಿಯನ್ನು ತೊರೆಯಲಿದ್ದು, ರಶ್ಯದ ಗಡಿಯತ್ತ ಪ್ರಯಾಣಿಸುವುದಾಗಿ ಹೇಳಿದ್ದರು. ಆದಾಗ್ಯೂ ಭಾರತ ಸರಕಾರದ ಭರವಸೆ ಹಾಗೂ ಪ್ರಧಾನಿ ಕಾರ್ಯಾಲಯದ ಕರೆಯ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಸುಮಿಯಲ್ಲಿ ಪ್ರಸಕ್ತ ಪರಿಸ್ಥಿತಿ ಅತ್ಯಂತ ಭಯಾನಕವಾಗಿದ್ದು ಆಹಾರ ಮತ್ತು ನೀರಿನ ಕೊರತೆ ತಲೆದೋರಿದೆ ಹಾಗೂ ನಿಯಮಿತವಾದಿ ವಿದ್ಯುತ್ ಕಡಿತ ಉಂಟಾಗಿವೆ. ಪ್ರತಿ ತಾಸಿಗೂ ಬಾಂಬ್ ಸ್ಫೋಟಗಳ ಸದ್ದು ನಮಗೆ ಕೇಳಿಬರುತ್ತಿದೆ. ಸುರಕ್ಷತಾ ಬಂಕರ್‌ಗಳನ್ನು ಪ್ರವೇಶಿಸುವುದೇ ನಮಗೆ ಸವಾಲಿನ ಕೆಲಸವಾಗಿತ್ತು. ಆದರೆ, ಈಗ ನಾವೀಗ ಸುರಕ್ಷಿತ ವಲಯಗಳಿಗೆ ತೆರಳುತ್ತಿರುವುದರಿಂದ ಮತ್ತು ಅಲ್ಲಿಂದ ತಾಯ್ನಿಡಿಗೆ ನಿರ್ಗಮಿಸಲಿರುವುದು ನಮಗೆ ಸಂತಸ ತಂದಿದೆ ಎಂದು ನಾಲ್ಕನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅರಿಂದ್ರೊಮ್ ಪುಖೊನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News