×
Ad

ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಮ್ಮೇಳನ

Update: 2022-03-10 22:32 IST

ಮಂಗಳೂರು, ಮಾ. 10: ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ 5ನೆ ಜಿಲ್ಲಾ ಸಮ್ಮೇಳನವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದ ಮಿನಿ ಸಭಾಂಗಣದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ಸಂಘಟನೆ ಮತ್ತು ಹೋರಾಟ ಹಕ್ಕುಗಳನ್ನು ಪಡೆಯಲು ಇರುವ ಬಲವಾದ ಅಸ್ತ್ರ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಸ್ಥರಿಗೆ ಹಕ್ಕುಗಳನ್ನು ಕಲ್ಪಿಸಲು ಅವರ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟಿತ ಹೋರಾಟದ ಪರಿಣಾಮ ಇಂದು ವ್ಯಾಪಾರಸ್ಥರು ಸಂಘಟಿತರಾಗಲು ಸಾಧ್ಯವಾಗಿದೆ. ಕಳೆದ ಸುಮಾರು 11 ವರ್ಷಗಳಿಂದ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಆಡಳಿತ ವ್ಯವಸ್ಥೆಯು ನಡೆಸುವ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಲು ಸಂಘಟನೆಯಿಂದ ಸಾಧ್ಯವಾಗಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಸಾಮಾಜಿಕ ಚಿಂತಕಿ ಡಾ. ರೀಟಾ ನೊರೊನ್ನಾ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಕೋಶಾಧಿಕಾರಿ ಮುಹಮ್ಮದ್ ಆಸಿಫ್, ರವೂಫ್ ಬಂದರು, ಹಸನ್ ಕುದ್ರೋಳಿ, ಶ್ರೀಧರ್ ಭಂಡಾರಿ, ನೌಶಾದ್, ಅರ್ಶದ್, ಮೇರಿ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮೇಳನದ ಅಂಗವಾಗಿ ರೆಡ್‌ಕ್ರಾಸ್ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News