ಮಾ.12: 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಚಾಲನೆ

Update: 2022-03-10 18:00 GMT

ಮಂಗಳೂರು, ಮಾ.10: ರಾಜ್ಯ ಸರಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿ ರುವ ಮೂಲ ದಾಖಲೆಗಳಾದ ಪಹಣಿ, ಅಟ್ಟಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯನ್ನು ಹಮ್ಮಿಕೊಂಡಿದೆ.

ಈ ಯೋಜನೆಯನ್ನು ಮಾ.12ರಂದು ಪೂ.11ಕ್ಕೆ ಮುಖ್ಯಮಂತ್ರಿ ರಾಜ್ಯಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ. ಅದರಂತೆ ದ.ಕ.ಜಿಲ್ಲೆಯಲ್ಲಿ ಮಾ.12ರಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಮೂಡುಬಿದಿರೆ ತಾಲೂಕಿನ ಮೂಡುಬಿದಿರೆ ಹೋಬಳಿಯ ಪಡುಮಾರ್ನಾಡು ಗ್ರಾಮದಲ್ಲಿ ಚಾಲನೆ ನೀಡುವರು.

ತಾಲೂಕು ಮಟ್ಟದಲ್ಲಿ ಸ್ಥಳೀಯ ವಿಧಾನ ಸಭಾ ಸದಸ್ಯರು ಅವರ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ರೈತರಿಗೆ ದಾಖಲೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸುವರು.

ಅದರಂತೆ ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಕೊಳಂಬೆ ಗ್ರಾಮ, ಉಳ್ಳಾಲ ತಾಲೂಕಿನ ಉಳ್ಳಾಲ ಹೋಬಳಿಯ ಕೊಣಾಜೆ ಗ್ರಾಮ. ಮುಲ್ಕಿ ತಾಲೂಕಿನ ಮುಲ್ಕಿ ಹೋಬಳಿಯ ಪಾವಂಜೆ ಗ್ರಾಮ, ಬಂಟ್ವಾಳ ತಾಲೂಕಿಮ ಪಾಣೆಮಂಗಳೂರು ಹೋಬಳಿಯ ಅಮ್ಮುಂಜೆ ಗ್ರಾಮ, ಪುತ್ತೂರು ತಾಲೂಕಿನ ಪುತ್ತೂರು ಹೋಬಳಿಯ ಆರ್ಯಪು ಗ್ರಾಮ. ಕಡಬ ತಾಲೂಕಿನ ಕಡಬ ಹೋಬಳಿಯ 102 ನೆಕ್ಕಿಲಾಡಿ ಗ್ರಾಮ, ಬೆಳ್ತಂಗಡಿ ತಾಲೂಕಿನ ವೇಣೂರು ಹೋಬಳಿಯ ಕುದ್ಯಾಡಿ ಗ್ರಾಮ. ಸುಳ್ಯ ತಾಲೂಕಿನ ಸುಳ್ಯ ಕಸ್ಟಾ ಹೋಬಳಿಯ ಅರಂತೋಡು ಗ್ರಾಮದಲ್ಲಿ ಚಾಲನೆ ನೀಡಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News