×
Ad

ಇಸ್ರೇಲ್ ಮಾದರಿ ಕೃಷಿಯಿಂದ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

Update: 2022-03-11 22:27 IST

ಕೊಲ್ನಾಡು, ಮಾ.11: ಇಸ್ರೇಲ್ ಮಾದರಿಯ ಕೃಷಿ ಲಾಭದಾಯಕವಾದ ಕಾರಣ ಅದಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಮುಲ್ಕಿ ಸಮೀಪದ ಕೊಲ್ನಾಡಿನಲ್ಲಿ ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಶುಕ್ರವಾರ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ನಡೆದ ಕೃಷಿ ಸಿರಿ-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ.ಜಿಲ್ಲೆಯು ಹಿಂದೆ ಕೃಷಿಗೆ ಹೆಸರುವಾಸಿಯಾಗಿತ್ತು. ನಮಗೆ ಬೇಕಾದ ಆಹಾರ, ತರಕಾರಿಯನ್ನು ನಾವೇ ಉತ್ಪಾದನೆ ಮಾಡುತ್ತಿದ್ದೆವು. ಆದರೆ ಇಂದು ಹಿಡಿ ಭತ್ತಕ್ಕಾಗಿ ಬೇರೆ ಜಿಲ್ಲೆಯನ್ನು ಅವಲಂಬಿಸುವಂತಾಗಿದೆ. ತರಕಾರಿಗಾಗಿ ಘಟ್ಟ ಪ್ರದೇಶವನ್ನು ಆಶ್ರಯಿಸಿದ್ದೇವೆ. ಹೇರಳವಾಗಿ ಭತ್ತ ಬೆಳೆಯಲಾಗುತ್ತಿದ್ದ ಗದ್ದೆಯನ್ನು ಹಡಿಲು ಬಿಟ್ಟ ಪರಿಣಾಮ ಕೆಲಸಕ್ಕಾಗಿ ಅಲೆಡಾಡುವಂತಹ ಪರಿಸ್ಥಿತಿ ಇದೆ ಎಂದರು.

ಕೊರೋನ ಹಾವಳಿಯ ಹಿನ್ನೆಲೆಯಲ್ಲಿ ಊರಿಗೆ ಮರಳಿದ ಅನೇಕ ಯುವಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಸ್ವಾವಲಂಬಿಯಾಗಬೇಕು. ಅದಕ್ಕಾಗಿ ಪಾಲಿ ಹೌಸ್, ಗ್ರೀನ್ ಹೌಸ್ ಫಾರ್ಮಿಂಗ್ ಮೂಲಕ ಕಡಿಮೆ ಕೀಟನಾಶಕ ಬಳಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಸಾವಯವ ಕೃಷಿಗೆ ಪ್ರಪಂಚದಲ್ಲಿ ಬೇಡಿಕೆಯಿದ್ದು ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತಿತರ ಸಣ್ಣಪುಟ್ಟ ರಾಜ್ಯಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅಲ್ಲಿನ ರೈತರ ಬೆಳೆಗಳನ್ನು ಖರೀದಿ ಮಾಡಲು ಅಮೇರಿಕ ಮತ್ತಿತರ ದೇಶಗಳ ಕಂಪೆನಿಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಶಾಸಕ ರಾಜೇಶ್ ನಾಯಕ್ ಉಳೆಪಾಡಿಗುತ್ತು ಮಾತನಾಡಿ ದೇಶದಲ್ಲಿ 65-70 ಶೇ. ಜನರು ಇಂದಿಗೂ ಕೃಷಿಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಕೊರೋನ-ಲಾಕ್‌ಡೌನ್ ಸಂದರ್ಭ ಎಲ್ಲಾ ಉದ್ಯಮಗಳು ನಿಂತರೂ ಕೃಷಿ ಚಟುವಟಿಕೆ ನಡೆದಿತ್ತು. ಕೃಷಿ ಯಾವತ್ತೂ ನಷ್ಟದ ಉದ್ಯಮವಲ್ಲ. ಆದರೆ ನಮಗಿರುವ ಸಣ್ಣ ಕೃಷಿ ಭೂಮಿಯೇ ನಮಗೆ ಸಮಸ್ಯೆಯಾಗಿದೆ. ಎರಡು ತಿಂಗಳು ಕೃಷಿ ಕೆಲಸ ಮಾಡಿದರೆ ವರ್ಷವಿಡೀ ಊಟ ಮಾಡಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಹಾಗೂ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಅಬೂಬಕರ್ ಸಿದ್ದೀಕ್, ರಘುರಾಮ ಕುಲಾಲ್, ವಿಶ್ವೇಶ್ವರ ಸಜ್ಜನ ಬಳ್ಳಾರಿ, ನಿತ್ಯಾನಂದ ಕರ್ಕೇರ ಉಡುಪಿ ಶ್ರೀನಿವಾಸ್ ಗಾಣಿಗ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸಮ್ಮೇಳನದ ಗೌರವಾಧ್ಯಕ್ಷ ಜಿ. ಆರ್. ಪ್ರಸಾದ್, ಶಾಸಕ ಉಮಾನಾಥ್ ಕೋಟ್ಯಾನ್, ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪಿ ಎಸ್ ಯಡಪಡಿತ್ತಾಯ, ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ. ರಮಣ್ ಐತಾಳ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೃಷಿ ಸಿರಿ ಸಂಚಾಲಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಮನೋಹರ್ ಶೆಟ್ಟಿ, ಕೃಷಿ ಸಿರಿ ಸಂಚಾಲಕ ಕೃಷ್ಣ ಶೆಟ್ಟಿ ತಾರೆಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಮೇಳ ಆಯೋಜನೆಯ ಹಿನ್ನೆಲೆ, ರೂಪುರೇಷೆ ಕುರಿತು ಕೃಷಿ ಸಿರಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಮಾಹಿತಿ ನೀಡಿದರು. ಕೃಷಿ ಸಿರಿ ಸಂಚಾಲಕ ಪ್ರಶಾಂತ್ ಪೈ ಸ್ವಾಗತಿಸಿದರು.ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News