ಫಲಿತಾಂಶದ ಬೂದಿಯಲ್ಲಿ ಬಹುಜನರ ಕನಸುಗಳು
ಉತ್ತರ ಪ್ರದೇಶದ ಫಲಿತಾಂಶದ ಬೂದಿಯಲ್ಲಿ ಅಳಿದುಳಿದ ಭಾರತದ ನಿರೀಕ್ಷೆಗಳ ಎಲುಬುಗಳನ್ನು ಹುಡುಕುವ ಮತ್ತು ಅದನ್ನು ಜೋಡಿಸುವ ಪ್ರಯತ್ನವೊಂದು ದೇಶಾದ್ಯಂತ ನಡೆಯುತ್ತಿವೆ. ಕಾಂಗ್ರೆಸ್‌ನ ವೈಫಲ್ಯ, ಬಿಎಸ್‌ಪಿ ಮತ್ತು ಅಸದುಲ್ಲಾ ನೇತೃತ್ವದ ಎಐಎಂಐಎಂ ಪಕ್ಷಗಳ ದ್ರೋಹಗಳು, ದ್ವೇಷ ರಾಜಕಾರಣದ ಗೆಲುವು ಇವೆಲ್ಲವನ್ನು ಇಟ್ಟು ರಾಜಕೀಯಮಂಥನಗಳು ನಡೆಯುತ್ತಿವೆ. ಭಾರತ ಸಾಗುತ್ತಿರುವ ದಿಕ್ಕಿನ ಬಗ್ಗೆ ಸ್ಪಷ್ಟ ಸೂಚನೆಯೊಂದು ಉತ್ತರ ಪ್ರದೇಶದ ಫಲಿತಾಂಶದಲ್ಲಿದೆ ಎನ್ನುವುದು ಬಹುಸಂಖ್ಯಾತ ಜಾತ್ಯತೀತ ಚಿಂತಕರ ಅಂಬೋಣವಾಗಿದೆ. ಅಭಿವೃದ್ಧಿಯನ್ನು ಹಿಂದಿಕ್ಕಿ, ನಾಗಾಲೋಟದಲ್ಲಿ ದ್ವೇಷ ರಾಜಕಾರಣ ಮುಂದೆ ಸಾಗುತ್ತಿದೆ. ಇದು ದೇಶವನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಬಹುದು ಎನ್ನುವುದರ ಬಗ್ಗೆ ಹಿರಿಯರು ತೀವ್ರ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಂದಿನ ಹೋರಾಟದ ನೇತೃತ್ವದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈಗಾಗಲೇ ತೃಣ ಮೂಲ ಕಾಂಗ್ರೆಸ್ ಪಕ್ಷ ಹೇಳಿಕೆಯೊಂದನ್ನು ನೀಡಿದ್ದು, ಕಾಂಗ್ರೆಸ್ ಪಕ್ಷ ತೃಣ ಮೂಲದ ನೇತೃತ್ವದೊಂದಿಗೆ ಮುಂದಿನ ಚುನಾವಣೆಯನ್ನು ಎದುರಿಸಲಿ ಎಂದು ಹೇಳಿದೆ. ಅತ್ತ ಪಂಜಾಬ್‌ನಲ್ಲಿ ಉದಯಿಸಿದ ಆಪ್, ಕಾಂಗ್ರೆಸ್‌ಗೆ ಪರ್ಯಾಯವಾಗಬಹುದೋ ಎನ್ನುವ ನಿರೀಕ್ಷೆಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ವಿಪರ್ಯಾಸವೆಂದರೆ, ಕಳೆದು ಹೋದ ಬಹುಜನ ಚಳವಳಿಯನ್ನು ಮತ್ತೆ ಜೋಡಿಸುವ ಸಾಧ್ಯತೆಯ ಬಗ್ಗೆ ಯಾರು ಮಾತನಾಡುತ್ತಿಲ್ಲ. ಈ ಬಾರಿಯ ಫಲಿತಾಂಶದ ವಿಷಾದನೀಯ ಅಂಶವೆಂದರೆ, ಬಹುಜನರ ಕನಸುಗಳು ನೆಲಕಚ್ಚಿ ರುವುದು ಮತ್ತು ಬಹುಜನರನ್ನು ಸಂಘಟಿಸಿದ ಬಿಎಸ್‌ಪಿಯೇ ಅದಕ್ಕೆ ನೇರ ಕಾರಣವಾಗಿರುವುದು.
ಅಹಿಂದ ಅಸ್ಮಿತೆಯನ್ನು ಜಾಗೃತಗೊಳಿಸಿ ರಾಷ್ಟ್ರಾದ್ಯಂತ ಪರ್ಯಾಯ ರಾಜಕಾರಣವೊಂದರ ಭರವಸೆಯನ್ನು ಕಾನ್ಶೀರಾಂ ಹುಟ್ಟಿಸಿದ್ದರು. ಮಾಯಾವತಿ ಬಹುಮತದೊಂದಿಗೆ ಮುಖ್ಯಮಂತ್ರಿಯಾದಾಗ ಅವರಲ್ಲಿ ಈ ದೇಶದ ಭಾವಿ ಪ್ರಧಾನಿಯನ್ನು ಕಂಡಿದ್ದರು. ತಕ್ಷಣದ ರಾಜಕೀಯ ಲಾಭಕ್ಕಾಗಿ ರಾಜಿ ಮಾಡಿಕೊಳ್ಳದೆ, ಸಿಕ್ಕಿದ ಅಧಿಕಾರವನ್ನು ದೂರದೃಷ್ಟಿಯಿಟ್ಟುಕೊಂಡು ಬಳಸಿಕೊಂಡಿದ್ದಿದ್ದರೆ ಮಾಯಾವತಿ ಅವರು ಪ್ರಧಾನಿಯಾಗದೇ ಇದ್ದರೂ, ಉತ್ತರ ಪ್ರದೇಶದಲ್ಲಿ ಇನ್ನೂ ಮುಖ್ಯಮಂತ್ರಿಯಾಗಿಯೇ ಉಳಿದುಕೊಳ್ಳುತ್ತಿದ್ದರೋ ಏನೋ. ತಾನು ಅಧಿಕಾರಕ್ಕೆ ಬಂದ ಬೆನ್ನಿಗೇ ದಲಿತರು, ಮುಸ್ಲಿಮರು ಮತ್ತು ತಳಸ್ತರದ ಶೂದ್ರವರ್ಗವನ್ನು ಇನ್ನಷ್ಟು ಸಂಘಟಿಸುವಲ್ಲಿ ಶ್ರಮವಹಿಸಿದ್ದರೂ ಸಾಕಿತ್ತು, ಕಾನ್ಶಿರಾಂ ಕನಸು ಕಂಡಿದ್ದ ಬಹುಜನ ಚಳವಳಿ ಜೀವಂತ ಉಳಿದು ಬಿಡುತ್ತಿತ್ತು. ಆದರೆ ಪ್ರಧಾನಿಯಾಗುವ ಅವಸರದಲ್ಲಿ ಬಹುಜನವನ್ನು ಸರ್ವಜನವಾಗಿಸಿದರು. ತನ್ನನ್ನು ವೈಭವೀಕರಿಸುವ ಆತ್ಮಪ್ರಶಂಸೆಯ ರಾಜಕೀಯದಲ್ಲಿ ತ ಲ್ಲೀನರಾದರು. ನಿಧಾನಕ್ಕೆ ಬಹುಜನದಲ್ಲಿ ಮೇಲ್‌ಜಾತಿಯ ಶೇಕಡವಾರು ಸಂಖ್ಯೆ ಹೆಚ್ಚ ತೊಡಗಿತು. ಬ್ರಾಹ್ಮಣರಿಲ್ಲದೆ ರಾಷ್ಟ್ರ ನಾಯಕಿಯಾಗುವುದು ಅಸಾಧ್ಯ ಎನ್ನುವುದನ್ನೂ ಅವರೂ ನಂಬಿದರು. ಚಳವಳಿಯಲ್ಲಿ ರಾಜಿ ಮಾಡತೊಡಗಿದರು. ಜೊತೆಗೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲೂ ಸಿಲುಕಿಕೊಂಡರು. ತನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಬಹುಜನರು ದೂರವಾಗುತ್ತಿರುವ ವಾಸ್ತವವನ್ನು ಮರೆತೇ ಬಿಟ್ಟರು.
ಮುಝಫ್ಫರ್‌ನಗರದಲ್ಲಿ ಕೋಮುಗಲಭೆ ನಡೆಯುತ್ತಿರುವಾಗ ಮಾಯಾವತಿ ಒಂದೇ ಒಂದು ಗಂಭೀರ ಹೇಳಿಕೆಗಳನ್ನಾಗಲಿ, ಅಲ್ಲಿನ ಮುಸ್ಲಿಮರ ಪರವಾಗಿ ಬೀದಿಗಿಳಿಯುವ ಕೆಲಸವನ್ನಾಗಲಿ ಮಾಡಲಿಲ್ಲ. 'ತನ್ನ ಸೋಲಿಗೆ ಮುಸ್ಲಿಮರೂ ಕಾರಣ' ಎನ್ನುವ ಮೇಲ್‌ಜಾತಿ ವರ್ಗದ ಹೇಳಿಕೆಗಳನ್ನು ಅವರೂ ಗಂಭೀರವಾಗಿ ನಂಬಿದಂತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳೂ ಅವರನ್ನು ತಟ್ಟಲಿಲ್ಲ. ರೋಹಿತ್ ವೇಮುಲಾನ ಆತ್ಮಹತ್ಯೆ ಮುಂಚೂಣಿಗೆ ಬಂದುದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಿಂದ. ರೋಹಿತ್ ವೇಮುಲಾ ಆತ್ಮಹತ್ಯೆ ವಿರುದ್ಧದ ಹೋರಾಟ ಯುವ ಸಮೂಹದಲ್ಲಿ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಆ ಯುವ ಸಮೂಹವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ವಿಫಲರಾದ ಮಾಯಾವತಿ, ಪ್ರತಿಭಟನಾಕಾರರ ವಿರುದ್ಧವೇ ಹೇಳಿಕೆಗಳನ್ನು ನೀಡತೊಡಗಿದರು. ಉನಾದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ, ಗೋಹತ್ಯೆಯ ವಿರುದ್ಧ ಕಾನೂನು, ಸಿಎಎ ಕಾಯ್ದೆ ಇವೆಲ್ಲಕ್ಕೂ ತನ್ನ ಬಹುಜನ ಪಕ್ಷಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದರು. ಕನಿಷ್ಠ ಎಡಪಂಥೀಯ ಸಂಘಟನೆಗಳಿಗಿದ್ದ ಕಾಳಜಿಯೂ ಮಾಯಾವತಿಗಿರಲಿಲ್ಲ. ಪಕ್ಷವನ್ನು ಮರುಸಂಘಟಿಸುವ ಬದಲು, ಬಿಜೆಪಿಗೆ ಪೂರಕವಾಗುವ ಹೇಳಿಕೆಗಳಿಂದಲೇ ಮಾಧ್ಯಮಗಳಲ್ಲಿ ಸುದ್ದಿಯಾಗತೊಡಗಿದರು.
'ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶೀಘ್ರದಲ್ಲೇ ಕಟ್ಟಿಸುವೆ' ಎಂದರು. ಬೆಂಕಿಯಂತೆ ಹರಡುತ್ತಿದ್ದ ದ್ವೇಷ ರಾಜಕಾರಣದ ವಿರುದ್ಧ ಜೋರು ಧ್ವನಿಯಲ್ಲಿ ಮಾತನಾಡಿ ಬಹುಜನರನ್ನು ಮತ್ತೊಮ್ಮೆ ಸಂಘಟಿಸುವ ಅವಕಾಶವನ್ನು ಅವರಾಗಿಯೇ ಕೈ ಚೆಲ್ಲಿ ಗಾಳಿ ಬಂದ ಕಡೆಗೆ ಸಾಗುವ ರಾಜಿ ರಾಜಕೀಯವನ್ನು ಆರಿಸಿಕೊಂಡರು. ಬಿಎಸ್‌ಪಿಯ ಕುರಿತಂತೆ ಬಹುಜನರು ಭರವಸೆಯನ್ನು ಕಳೆದುಕೊಂಡು ನಿಧಾನಕ್ಕೆ ದೂರವಾಗತೊಡಗಿದರು. ಒಂದು ರೀತಿಯಲ್ಲಿ ಇದು ಎಸ್‌ಪಿಗೆ ಅನುಕೂಲವನ್ನೇ ಮಾಡಿಕೊಟ್ಟಿತು. ಎಸ್‌ಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ತನ್ನದಾಗಿಸುವಲ್ಲಿ ಬಿಎಸ್‌ಪಿ ಚುನಾವಣೆಯಲ್ಲಿ ಅನುಸರಿಸಿದ ಮೃದು ಬಿಜೆಪಿ ನಿಲುವು ಕೂಡ ಕಾರಣ. ಉತ್ತರ ಪ್ರದೇಶದ ಚುನಾವಣೆ ಮೇಲ್‌ಜಾತಿಯ ಜನರು ಬಹುಜನರಾಗಿ ರಾಜಕೀಯವಾಗಿ ಸಂಘಟಿತರಾಗುತ್ತಿರುವ ಅಪಾಯಕಾರಿ ಹಂತವನ್ನು ಬಯಲುಗೊಳಿಸಿದೆ. ಬಹುಜನ ಚಳವಳಿ ಸಂಪೂರ್ಣ ದುರ್ಬಲವಾದುದು ಮಾತ್ರವಲ್ಲ, ಮೇಲ್‌ಜಾತಿಯ ಜನರು ಬಹುಜನರಾಗಿ ಯಶಸ್ವಿಯಾಗಿ ರಾಜಕೀಯ ದಾಳಗಳನ್ನು ಹಾಕುತ್ತಿದ್ದಾರೆ. ಇದು ಕೇವಲ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ವಿಷಯವಲ್ಲ.
ದೇಶಾದ್ಯಂತ ಮೇಲ್‌ಜಾತಿಯ ಹಿತಾಸಕ್ತಿಯೇ ರಾಜಕೀಯ ಅಜೆಂಡಾಗಳಾಗಿ ರೂಪುಗೊಳ್ಳುತ್ತಿದೆ. ಅದೂ ಗುಟ್ಟಾಗಿಯಲ್ಲ, ಸಾರ್ವಜನಿಕವಾಗಿ ಅವುಗಳನ್ನು ಘೋಷಿಸಲಾಗುತ್ತಿದೆ. ಆಪ್, ಎಸ್‌ಪಿ, ಕಾಂಗ್ರೆಸ್‌ಗಳ ತೇಪೆ ಇದನ್ನು ಪ್ರಬಲವಾಗಿ ಎದುರಿಸುವುದು ಸಾಧ್ಯವಿಲ್ಲದ ಮಾತು. ಯಾಕೆಂದರೆ ಈ ಎಲ್ಲ ಪಕ್ಷಗಳೂ ಮೇಲ್‌ಜಾತಿಯ ನಾಯಕರಿಂದಲೇ ನಿಯಂತ್ರಿಸಲ್ಪಡುತ್ತಿವೆ. ಸದ್ಯಕ್ಕೆ ಮೇಲ್‌ಜಾತಿಗಳಿಗೆ ತಾವು ಸಬಲರಾಗುವುದರ ಜೊತೆಗೆ, ಶೋಷಿತ ಸಮುದಾಯ ಇನ್ನಷ್ಟು ದುರ್ಬಲವಾಗುವುದು ಅತ್ಯಗತ್ಯವಾಗಿದೆ. ಆದುದರಿಂದಲೇ ಎಲ್ಲ ಮೇಲ್‌ಜಾತಿಗಳು ಒಳಗಿಂದೊಳಗೆ ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯ ಜೊತೆಗೆ ಕೈ ಜೋಡಿಸುತ್ತಿವೆ. ಇಂದು ಈ ದೇಶದ ಅಲ್ಪಸಂಖ್ಯಾತರು, ದಲಿತರು ಮತ್ತು ತಳಸ್ತರದ ಶೂದ್ರರ ಮರುಸಂಘಟನೆ ನಡೆಯಬೇಕಾಗಿದೆ. ಅದಕ್ಕೆ ಹೊಸ ನೇತೃತ್ವವೊಂದು ದೊರಕಬೇಕಾದ ಅಗತ್ಯವಿದೆ. ಮಾಯಾವತಿ ಈಗಾಗಲೇ ಶಸ್ತ್ರ ತ್ಯಜಿಸಿದ್ದಾರೆ. ಕಾನ್ಶೀರಾಮರ ಬಹುಜನ ದೊಂದಿಯಷ್ಟೇ ದೇಶವನ್ನು ಆವರಿಸತೊಡಗಿರುವ ಕಾರ್ಗತ್ತಲನ್ನು ಬೆಳಗಬಹುದು. ಶೋಷಿತ ಸಮುದಾಯ ಒಂದೇ ವೇದಿಕೆಯಲ್ಲಿ ಕೈ ಜೋಡಿಸುವುದೇ ಬಿಜೆಪಿಯ ಬ್ರಾಹ್ಮಣಶಾಹಿ ಹಿಂದುತ್ವವನ್ನು ಎದುರಿಸಲು ಇರುವ ದಾರಿ. ಫಲಿತಾಂಶದ ಬೂದಿಯಲ್ಲೇ ಆ ದಾರಿಯನ್ನು ನಾವು ಹುಡುಕಬೇಕಾಗಿದೆ.