ನಮ್ಮ ಮೇಲಿನ ನಿರ್ಬಂಧ ಮುಂದುವರಿದರೆ ʼಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕುಸಿಯಬಹುದುʼ: ರಶ್ಯ ಎಚ್ಚರಿಕೆ

Update: 2022-03-12 16:18 GMT
photo pti

ಮಾಸ್ಕೊ, ಮಾ.12: ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ವಿಧಿಸಿರುವ ನಿರ್ಬಂಧಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕುಸಿತಕ್ಕೆ ಕಾರಣವಾಗಬಹುದು ಎಂದು ರಶ್ಯ ಶನಿವಾರ ಎಚ್ಚರಿಸಿದೆ.

ಈ ದಂಡನಾತ್ಮಕ ಕ್ರಮಗಳನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸೇವೆಯಲ್ಲಿರುವ ರಶ್ಯನ್ ಅಂತರಿಕ್ಷ ನೌಕೆಯನ್ನು ಹಿಂಪಡೆಯಬೇಕಾಗುತ್ತದೆ. ಇದರಿಂದ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ತೀವ್ರ ತೊಡಕಾಗಲಿದೆ. ಬಾಹ್ಯಾಕಾಶ ನಿಲ್ದಾಣದ ಕಕ್ಷೆಯನ್ನು ಸ್ಥಿರಗೊಳಿಸುವ ಕಾರ್ಯನಿರ್ವಹಿಸುವ ರಶ್ಯದ ನೌಕೆ ಸೇವೆಯಿಂದ ಹಿಂದೆ ಸರಿದರೆ 500 ಟನ್‌ಗಳಷ್ಟು ತೂಕದ ಬಾಹ್ಯಾಕಾಶ ನಿಲ್ದಾಣ ಸಮುದ್ರದ ಮೇಲೆ ಅಥವಾ ಯಾವುದಾದರೊಂದು ದೇಶದ ಮೇಲೆ ಕುಸಿದು ಬೀಳಬಹುದು ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಮಸ್ ಶನಿವಾರ ಎಚ್ಚರಿಕೆ ನೀಡಿದೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಬಾಹ್ಯಾಕಾಶ ತ್ಯಾಜ್ಯಗಳಿಂದ ಎದುರಾಗುವ ಅಪಾಯವನ್ನು ನಿವಾರಿಸುವ ಜತೆಗೆ, ವರ್ಷಕ್ಕೆ ಸರಾಸರಿ 11 ಬಾರಿ ನಿಲ್ದಾಣದ ಕಕ್ಷೆಯನ್ನು ಸರಿಪಡಿಸುವ ಕೆಲಸವನ್ನು ರಶ್ಯದ ನೌಕೆ ನಿರ್ವಹಿಸುತ್ತಿದೆ ಎಂದು ರೋಸ್ಕೊಮಸ್ ಹೇಳಿದೆ. ಬಾಹ್ಯಾಕಾಶ ನೌಕೆಯ ಸಂಭಾವ್ಯ ಕುಸಿತದ ಬಗ್ಗೆ ನಕ್ಷೆ ಸಹಿತ ಮುನ್ಸೂಚನೆ ನೀಡಿರುವ ಸಂಸ್ಥೆ, ರಶ್ಯದ ಮೇಲೆ ಕುಸಿದು ಬೀಳುವ ಸಾಧ್ಯತೆಯಿಲ್ಲ. ಆದರೆ , ಇತರ ದೇಶಗಳ ಜನಸಮುದಾಯ, ಅದರಲ್ಲೂ ವಿಶೇಷವಾಗಿ ‘ಯುದ್ಧದ ನಾಯಿಗಳ’ ನೇತೃತ್ವದ ದೇಶಗಳ ಜನತೆ ರಶ್ಯ ವಿರುದ್ಧದ ನಿಬರ್ಂಧಕ್ಕೆ ತೆರಬೇಕಾಗುವ ಬೆಲೆಯ ಬಗ್ಗೆ ಆಲೋಚನೆ ನಡೆಸುವುದು ಒಳಿತು’ ಎಂದಿದೆ.

ರಶ್ಯದ ನೆರವಿಲ್ಲದೆ ಬಾಹ್ಯಾಕಾಶ ನಿಲ್ದಾಣ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಪರ್ಯಾಯ ಮಾರ್ಗವನ್ನು ಕಂಡುಹಿಡಿಯಲಾಗುವುದು ಎಂದು ಮಾರ್ಚ್ 1ರಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News