×
Ad

ಪಿಯುಸಿ ಹಂತದಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಉನ್ನತ ಶಿಕ್ಷಣದಿಂದ ವಂಚಿತರಾಗದಿರಿ: ಎಸ್.ಎಂ. ರಶೀದ್ ಹಾಜಿ

Update: 2022-03-12 22:29 IST

ಬಂಟ್ವಾಳ : ವಿದ್ಯಾರ್ಥಿಗಳು ತಮ್ಮ ಭವಿಷ್ಯದ ರೂಪೀಕರಣಕ್ಕಾಗಿ ಶಿಕ್ಷಣ ದಲ್ಲಿ ಪ್ರಗತಿಯನ್ನು ಸಾಧಿಸಬೇಕು, ಪತ್ರಿಕೆಯನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಪಿಯುಸಿ ಹಂತದಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಪದವಿ ಹಾಗೂ ಉನ್ನತ ಶಿಕ್ಷಣದಿಂದ ವಂಚಿತರಾಗದಿರಿ ಎಂದು ʼಮೀಟ್‌ʼ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಎಸ್.ಎಮ್. ರಶೀದ್ ಹಾಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣವು ಮೌಲ್ಯಾಧಾರಿತ ಬದುಕಿಗೆ ಪ್ರೇರಣೆಯಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ,  ತುಂಬೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ ಶಿಕ್ಷಣ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು ಇದರಲ್ಲಿ ಯಶಸ್ಸು ಗಳಿಸಬೇಕಾದರೆ ಅರ್ಪಣಾ ಮನೋಭಾವ ಅತೀ ಅಗತ್ಯ, ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ರಶೀದ್ ಹಾಜಿ ಅವರು ಗುರುತರ ಸಾಧನೆ ಮಾಡಿದ್ದಾರೆ ಎಂದರು.

ಬಂಟ್ವಾಳ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ  ಅಬ್ದುಲ್ ರಝಕ್ ಅನಂತಾಡಿ,  ಮೆಲ್ಕಾರ್ ಮಹಿಳಾ ಕಾಲೇಜು ಪ್ರಾಂಶುಪಾಲ ಬಿ.ಕೆ. ಅಬ್ದುಲ್ ಲತೀಫ್, ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹಮೀದ್ ಕೆ. ಮಾಣಿ ಮಾತನಾಡಿದರು.

ಹವ್ವ ನೌಫಾ, ಮುನಿಷಾ, ನಫೀಸ ಶಹಬ, ತಶ್ರೀಫ ಕೆ, ನಿಷತ್ ಫಾತಿಮ,  ವಿದ್ಯಾರ್ಥಿಗಳ ಪರವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಉಪನ್ಯಾಸಕ ಅಬ್ದುಲ್ ಮಜೀದ್, ಎಂ.ಡಿ.ಮಂಚಿ ಹಾಗೂ ಇತರ ಉಪನ್ಯಾಸಕರು ಸಹಕರಿಸಿದರು.

ಕಾಲೇಜು ಉಪ ಪ್ರಾಂಶುಪಾಲೆ ಸುನೀತಾ ಪಿರೇರಾ ಅವರು ಕುಮಾರಿ ಚೈತ್ರಾ ಅವರನ್ನು ವರ್ಷದ ಉತ್ತಮ ವಿದ್ಯಾರ್ಥಿನಿ ಎಂದು ಘೋಷಿಸಿದರು.  ಈ ಸಂದರ್ಭ ಆಕೆಯನ್ನು ಪುರಸ್ಕರಿಸಲಾಯಿತು. ಇತರ ವಿದ್ಯಾರ್ಥಿಗಳಿಂದ ವಿವಿಧ ಆಹಾರ ಖಾದ್ಯಗಳ ಪ್ರದರ್ಶನ ಮೇಳ ಮತ್ತು ಮಾರಾಟ ನಡೆಯಿತು.

ಸ್ವಾಲಿಹಾ ಮತ್ತು ನಫೀಶತುಲ್ ಮಿಶ್ರಿಯ ಪ್ರಾರ್ಥನೆ ನೆರವೇರಿಸಿದರು. ಶಿಫಾನ ಸ್ವಾಗತಿಸಿ, ಫಿದಾ ನಹೀಮ ಧನ್ಯವಾದವಿತ್ತರು. ಶಹನಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News