"ಗಿರಿಜ ಮಗಳ್ ಗಿರಿಯಂತಾಳ್ ನೇಜಿಗೊರ ಬರೊಡುಗೆ..." ಕೃಷಿ ಮೇಳದಲ್ಲಿ ಗಮನ ಸೆಳೆದ ಪಾಡ್ದನ ಮೇಳ
ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಕೊನೆಯ ದಿನವಾದ ರವಿವಾರ ಬೆಳಗ್ಗೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲಿ ತುಳುವರ್ಲ್ಡ್ ಕಾಸರಗೋಡು ಇದರ ಬೊಲಿಕೆ ಕಲಾತಂಡದ "ಪಾಡ್ದನ ಮೇಳ" ನೆರೆದಿದ್ದ ಸಭಿಕರಿಗೆ ಭರಪೂರ ಮನೋರಂಜನೆ ನೀಡಿತು. ಒಂದೂವರೆ ಗಂಟೆಗಳ ಕಾಲ ತುಳುನಾಡಿನ ಅಳಿವಿನಂಚಿನ ಪಾಡ್ದನ ಸಾಹಿತ್ಯವನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ರಂಜಿಸಿದರು.
ಪಾಡ್ದನ ತುಳುನಾಡಿನ ಪುರಾತನ ಜಾನಪದ ಸಾಹಿತ್ಯವಾಗಿದ್ದು ಆಡುಭಾಷೆ ತುಳುವಿನಲ್ಲಿ ಬರೆಯಲ್ಪಟ್ಟ ಅನೇಕ ಸಾಹಿತ್ಯ ಇಂದಿಗೂ ಗಾಯಕರ ಕಂಠದ ಮೂಲಕ ಜೀವಂತವಾಗಿದೆ. ಸಾಂಪ್ರದಾಯಿಕ ದುಡಿ, ಡೋಲು ವಾದ್ಯವನ್ನು ಬಾರಿಸುವ ಮೂಲಕ ಕಲಾತಂಡದ 8 ಮಂದಿ ಸದಸ್ಯರು ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದರು.
ಕಾಸರಗೋಡಿನ ಬೊಲಿಕೆ ತಂಡ ದೇಶ ವಿದೇಶಗಳಲ್ಲಿ 1422 ಕಾರ್ಯಕ್ರಮ ನೀಡುತ್ತಾ ಬಂದಿದ್ದು ತಂಡದಲ್ಲಿ ಅಶೋಕ್ ಎಂ. ಅರಿಯಪಾಡಿ, ಯಶೋಧ ಸ್ವಾಮಿ ಕೃಪಾ, ಯದುಷಾ, ಹರೀಶ್ ಎಂ. ಕೆ. ಅರಿಯಪಾಡಿ, ರಾಕೇಶ್ ಎಂ.ಕೆ., ಸುನಿಲ್ ಎಂ.ಕೆ., ಯಜ್ನೇಶ್, ಶಂಕರ್ ಸ್ವಾಮಿ ಕೃಪಾ ಅವರಿದ್ದರು.