ಉಪ್ಪಿನಂಗಡಿ: ಎ.2ರಂದು ವಿಜಯ- ವಿಕ್ರಮ ಜೋಡುಕರೆ ಕಂಬಳ
ಉಪ್ಪಿನಂಗಡಿ: ಇಲ್ಲಿನ ವಿಜಯ- ವಿಕ್ರಮ ಜೋಡುಕರೆ ಹೊನಲು ಬೆಳಕಿನ ಬಯಲು ಕಂಬಳವು ಎ.2ರಂದು ಆರಂಭವಾಗಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಹಳೆಗೇಟು ಬಳಿಯ ದಡ್ಡುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ ರವಿವಾರ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡ ಬಳಿಕ ಮಾತನಾಡಿದ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, 36ನೇ ವರ್ಷದ ಹೊನಲು ಬೆಳಕಿನ ಕಂಬಳ ಕೂಟ ಇದಾಗಿದ್ದು, ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ನಡೆಸಲು ಯೋಚಿಸಲಾಗಿದೆ. ಅದಕ್ಕಾಗಿ ಭರದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ. ಕಂಬಳ ಕರೆಯ ಕೆಲಸಗಳು ಪೂರ್ಣಗೊಂಡಿದ್ದು, ಕೋಣಗಳನ್ನು ಕುದಿ ಓಡಿಸಲು ಇಂದೇ ಅವಕಾಶ ನೀಡಲಾಗಿದೆ ಎಂದರು.
ಎ.2ರಂದು ಬೆಳಗ್ಗೆ 10:31ರಿಂದ ಕಂಬಳ ಕೂಟಕ್ಕೆ ಚಾಲನೆ ದೊರೆಯಲಿದ್ದು, ಬೆಳಗ್ಗೆ 9:31ರಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಿಂದ ಕಂಬಳ ಕೋಣಗಳ ಭವ್ಯ ಮೆರವಣಿಗೆ ನಡೆಯಲಿದೆ. ಚೆಂಡೆ, ಕೊಂಬು, ಗೊಂಬೆಕುಣಿತಗಳು ಮೆರವಣಿಗೆಗೆ ಸಾಥ್ ನೀಡಲಿವೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಕಂಬಳ ಕೂಟಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭಾಗವಹಿಸಲಿದ್ದು, ಈ ಸಂದರ್ಭ ಅವರು ಸಮಾಜ ಸೇವಾ ಸಾಧನೆಗಾಗಿ ಗುಜರಾತ್ ಬರೋಡದ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಅವರನ್ನು ಸನ್ಮಾನಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿಗಳ ಇ- ಆಡಳಿತ ಕಾರ್ಯದರ್ಶಿ ಬೇಳೂರು ಸುದರ್ಶನ್, ಶಾಸಕರಾದ ಸಂಜೀವ ಮಠಂದೂರು, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಎಸ್‍ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿದ್ದಾರೆ. ವಿಶೇಷ ಆಕರ್ಷಣೆಯಾಗಿ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ, ರಂಗಭೂಮಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ನಟಿ ನಿರೀಕ್ಷಾ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ತುಳುನಾಡ ಜಾನಪದ ಕ್ರೀಡೆಯಲ್ಲೊಂದಾದ ಕಂಬಳವು ಇಂದು ಉತ್ತುಂಗದ ಸ್ಥಿತಿಗೆ ತಲುಪಿದ್ದು, ಮುಂದೊಂದು ದಿನ ಕಂಬಳ ಸಮಿತಿಗೆ ಸೇರಲು ಅರ್ಜಿ ಹಾಕಿ ಕಾಯುವ ಪರಿಸ್ಥಿತಿಯೂ ಎದುರಾಗಬಹುದು. ಆದ್ದರಿಂದ ಯುವ ಸಮೂಹ ಸಿಕ್ಕ ಅವಕಾಶವನ್ನು ಬಳಸಿಕೊಂಡು ಈಗಲೇ ಕಂಬಳಕ್ಕಾಗಿ ದುಡಿಯಲು ಮುಂದೆ ಬರಬೇಕು ಎಂದರು.
ಈ ಸಂದರ್ಭ ಕಂಬಳ ಕರೆಯಲ್ಲಿ ಪ್ರಾಯೋಗಿಕವಾಗಿ ಕಂಬಳ ಕೋಣ ಓಡಿಸಲು (ಕುದಿ ಓಡಿಸಲು) ಚಾಲನೆ ನೀಡಲಾಯಿತು. ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಂಬಳ ಕರೆಯ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಈ ಸಂದರ್ಭ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಗೌರವ ಸಲಹೆಗಾರ ಸದಾಶಿವ ಸಾಮಾನಿ ಸಂಪಿಗೆದಡಿ, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ಸಹಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಪದಾಧಿಕಾರಿಗಳಾದ ಮಹಾಲಿಂಗ ಕಜೆಕ್ಕಾರು, ಜಗದೀಶ್ ಕುಮಾರ್ ಪರಕಜೆ, ರಾಕೇಶ್ ಶೆಟ್ಟಿ, ಕರುಣಾಕರ ಸಾಮಾನಿ, ವಿಶ್ವನಾಥ ಶೆಟ್ಟಿ, ಜಯಾನಂದ ಗೌಡ, ಪ್ರತೀಶ್ ಶೆಟ್ಟಿ, ರಾಜೀವ್ ಶೆಟ್ಟಿ ಕೇದಗೆ ಮತ್ತಿತರರು ಇದ್ದರು.