×
Ad

ವಿಶ್ವ ಕೊಂಕಣಿ ಕೇಂದ್ರದಿಂದ ವಿವಿಧ ಸ್ಪರ್ಧೆಗೆ ಆಹ್ವಾನ

Update: 2022-03-13 19:39 IST

ಮಂಗಳೂರು : ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರವು ಮಾ.19-20 ರಂದು ಆಯೋಜಿಸುತ್ತಿರುವ ವಿಶ್ವ ಕೊಂಕಣಿ ಸಮಾರೋಪದ ಅಂಗವಾಗಿ ಕೊಂಕಣಿ ಭಾಷಿಕ ಮಹಿಳಾ ಸಂಘಗಳಿ ಗೋಸ್ಕರ ಪ್ರದರ್ಶಿನಿ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.

ಸರ್ವಶ್ರೇಷ್ಠ ಕೊಂಕಣಿ ಮಹಿಳಾ ಸಂಘ: ಕೊಂಕಣಿ ಭಾಷಿಕ ಮಹಿಳಾ ಸಂಘಗಳು ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಮಾತೃಭಾಷಾ ಪ್ರೋತ್ಸಾಹ ಚಟುವಟಿಕೆಗಳನ್ನು ನೀಡಲಾಗುವ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು. ನಿರ್ಣಾಯಕರು ಈ ಚಟುವಟಿಕೆಗಳ ಗುಣಮಟ್ಟ, ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಸಮಾಜಮುಖಿ ಪ್ರಯೋಜನಗಳನ್ನು ಪರಿಶೀಲಿಸಿ ಸರ್ವಶ್ರೇಷ್ಠ ಕೊಂಕಣಿ ಮಹಿಳಾ ಸಂಘ ಪ್ರಶಸ್ತಿಗೆ ಆಯ್ಕೆ ಮಾಡುವರು. ಪ್ರದರ್ಶಿನಿಯಲ್ಲಿ ಪ್ರತಿ ಸಂಘದ ಒಬ್ಬ ಸದಸ್ಯರು ಸದಾಕಾಲ ಉಪಸ್ಥಿತರಿರತಕ್ಕದ್ದು. ಸಮಾರೋಹದ ಎರಡೂ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ರತನಕ ಪ್ರದರ್ಶಿನಿಯು ತೆರೆದಿರುವುದು. ಸರ್ವಶ್ರೇಷ್ಠ ಕೊಂಕಣಿ ಮಹಿಳಾ ಸಂಘಕ್ಕೆ  25,000 ರೂ,ನಗದು ಬಹುಮಾನವು ಲಭಿಸುವುದು.

ಕೊಂಕಣಿ ಆಶು ಕವಿತಾ ಸ್ಪರ್ಧೆ (ವೈಯಕ್ತಿಕ): ಮಾ.19ರಂದು ಬೆಳಗ್ಗೆ ನೀಡಲಾಗುವ ವಿಷಯವನ್ನು ಆಧರಿಸಿ ಕೊಂಕಣಿ ಕವಿತೆಯನ್ನು ಸ್ಥಳದಲ್ಲೇ ರಚಿಸಿ ವಾಚಿಸಬೇಕು. ಕೊಂಕಣಿ ಭಾಷೆಯ ಯಾವುದೇ ಪ್ರಬೇಧದಲ್ಲಿ (ಬೋಲಿ) ಕವಿತೆಯನ್ನು ರಚಿಸಬಹುದು. ನಿಗದಿತ ವಿಷಯದ ಮೇಲೆ ಕನಿಷ್ಠ 12 ಸಾಲುಗಳ ಕವಿತೆಯನ್ನು ರಚಿಸಬೇಕು. ಸ್ಪರ್ಧೆಯು ಮಾ.19ರ ಮಧ್ಯಾಹ್ನ 2ಕ್ಕೆ ನಡೆಯುವುದು.

ಸಿರಿಧಾನ್ಯಗಳನ್ನು ಬಳಸಿ ಕೊಂಕಣಿ ಪಾರಂಪರಿಕ ಖಾದ್ಯ ತಯಾರಿ ಸ್ಪರ್ಧೆ (ವೈಯಕ್ತಿಕ): ಒಂದು ತಂಡದಿಂದ ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಬಹುದು. ಒಂದು ಸ್ಪರ್ಧಿಗೆ ಒಂದು ಖಾದ್ಯವನ್ನು ಪ್ರದರ್ಶಿಸಲು ಮಾತ್ರ ಅವಕಾಶ. ಖಾದ್ಯವನ್ನು ಮನೆಯಲ್ಲೇ ತಯಾರಿಸಿ ತಂದು ಪ್ರದರ್ಶಿಸುವುದು. ಖಾದ್ಯದ ರುಚಿ, ಬಳಸಿದ ಸಿರಿಧಾನ್ಯಗಳ ಪ್ರಮಾಣ, ಪ್ರದರ್ಶಿಸಿದ ರೀತಿ ಇವುಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು. ಖಾದ್ಯದ ತಯಾರಿಕಾ ವಿಧಾನವನ್ನು ಕೊಂಕಣಿಯಲ್ಲಿ ಬರೆದು ಖಾದ್ಯದ ಬಳಿ ಪ್ರದರ್ಶಿಸತಕ್ಕದ್ದು. ಖಾದ್ಯವು ಮಾ. 19ರ ಪೂ.11 ಗಂಟೆಯೊಳಗೆ ಪ್ರದರ್ಶಿಸಬೇಕು.

ಕೊಂಕಣಿ ಕೋಲಾಟ ನೃತ್ಯ ಸ್ಪರ್ಧೆ (ತಂಡ ವಿಭಾಗ): ನೃತ್ಯಕ್ಕೆ ಕೊಂಕಣಿ ಹಾಡುಗಳನ್ನು ಮಾತ್ರ ಬಳಸಬೇಕು. ಪ್ರತಿ ತಂಡದಲ್ಲಿ 8 ರಿಂದ 12 ನರ್ತಕಿಯರು ಪಾಲ್ಗೊಳ್ಳಬಹುದು. ನೃತ್ಯವು ಕನಿಷ್ಟ 5 ನಿಮಿಷಗಳಿಗೆ ಕಡಿಮೆಯಾಗದಂತೆ ಮತ್ತು ಗರಿಷ್ಟ 7 ನಿಮಿಷಗಳಿಗೆ ಮೀರದಂತಿರಬೇಕು. ಉಡುಗೆ ತೊಡುಗೆ, ನೃತ್ಯದ ನಾವೀನ್ಯತೆ, ತಂಡದ ಸಮನ್ವಯ, ಕ್ರಿಯಾಶೀಲತೆ ಗಳನ್ನು ಆಧರಿಸಿ ಅಂಕಗಳನ್ನು ನೀಡಲಾಗುವುದು. ಸ್ಪರ್ಧೆಯು ಮಾ.೧೯ರ ಸಂಜೆ ೫ರಿಂದ ೭ರವರೆಗೆ ವೃತ್ತಾಕಾರದ ಹೊರಾಂಗಣದಲ್ಲಿ ನಡೆಯಲಿದೆ.

*ಕೊಂಕಣಿ ಪಾರಂಪರಿಕ ರಸಪ್ರಶ್ನೆ: ರಸಪ್ರಶ್ನೆಯು ಕೊಂಕಣಿ ಪಾರಿಭಾಷಿಕ ಶಬ್ದಗಳನ್ನು ಆಧರಿಸಿ ನಡೆಯಲಿದೆ. ಪ್ರತೀ ಮಹಿಳಾ ಸಂಘದಿಂದ ಎರಡು ಸದಸ್ಯರನ್ನೊಳಗೊಂಡ ಒಂದು ತಂಡವು ಭಾಗವಹಿಸಬಹುದು. ಸ್ಪರ್ಧೆಯು ಮಾ.೧೯ರ ಪೂ.೧೧ಕ್ಕೆ ನಡೆಯಲಿದೆ.

 ಕೊಂಕಣಿ ಪಾರಂಪರಿಕ ವಿನ್ಯಾಸ ಗೊದ್ದಡಿ (ಕೌದಿ) ಪ್ರದರ್ಶನ ಸ್ಪರ್ಧೆ: ಒಂದು ಸಂಘದಿಂದ ಒಂದಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಬಹುದು. ಓರ್ವ ಸ್ಪರ್ಧಾಳು ಕೇವಲ ಒಂದು ಕೌದಿಯನ್ನು ಪ್ರದರ್ಶಿಸಬಹುದು. ಬಳಸದಿರುವ ೨೦/೨೦ ಅಥವಾ ೩೦/೩೦ ಇಂಚಿನ ಕೌದಿಯನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪಂಜು ಅಥವಾ ಫೋಮನ್ನು ಬಳಸಿರಬಾರದು. ಕೌದಿಯನ್ನು ಮಾ. ೧೯ರ ಪೂ.೧೧ ಗಂಟೆಯೊಳಗೆ ಪ್ರದರ್ಶಿಸಬೇಕು.

ಎಲ್ಲಾ ಸ್ಪರ್ಧೆಗಳು ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ  ನೀಡಲಾಗುವುದು. ಕೊಂಕಣಿ ಭಾಷಿಕ ಮಹಿಳಾ ಸಂಘಗಳು ಮಾ.17ರ ಸಂಜೆ ೫ರೊಳಗೆ ಮೊ.ಸಂ:9900924313ಕ್ಕೆ ವಾಟ್ಸಪ್ ಮೂಲಕ ಸಂದೇಶವನ್ನು ಕಳುಹಿಸಿ ಹೆಸರು ನೋಂದಾಯಿಸಬಹುದು.

ಮಹಿಳಾ ಸಂಘದ ಹೆಸರು, ಊರು, ಸಂಪರ್ಕ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ, ಸ್ಪರ್ಧೆಯ ಹೆಸರು, ಸ್ಪರ್ಧಾಳುವಿನ ಹೆಸರು, ಸ್ಪರ್ಧಾಳುವಿನ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸಂಘದ ಲೆಟರ್‌ಹೆಡ್‌ನಲ್ಲಿ ಮುದ್ರಿಸಿ ವಾಟ್ಸಪ್ ಮೂಲಕ ಕಳುಹಿಸಬೇಕು. ಸಂದೇಶ ಕಳುಹಿಸಿದ ಬಳಿಕ 9900924313 ನಂಬ್ರಕ್ಕೆ ಕರೆಮಾಡಿ ನೋಂದಣಿಯನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News