ಉಕ್ರೇನ್ ಸೇನಾ ನೆಲೆಯ ಮೇಲೆ ರಶ್ಯಾ ವಾಯುದಾಳಿ: ಕನಿಷ್ಟ 35 ಮಂದಿ ಮೃತ್ಯು

Update: 2022-03-13 16:40 GMT
ukraine

ಕೀವ್, ಮಾ.13: ಉಕ್ರೇನ್ ರಾಜಧಾನಿ ಕೀವ್‌ನತ್ತ ಮುನ್ನುಗ್ಗುತ್ತಿರುವ  ರಶ್ಯನ್ ಪಡೆಗಳು ಉತ್ತರ, ಪಶ್ಚಿಮ ಮತ್ತು ಈಶಾನ್ಯ ದಿಕ್ಕಿನಲ್ಲಿ ದಂಡೆತ್ತಿ ಬರುತ್ತಿರುವಂತೆಯೇ ಕೀವ್‌ಗೆ ಸಮೀಪದ ನಗರ ಲಿವಿವ್‌ನ ಸೇನಾನೆಲೆಯ ಮೇಲೆ ರಶ್ಯ ಪಡೆ ಸರಣಿ ವಾಯುದಾಳಿ ನಡೆಸಿದ್ದು ಕನಿಷ್ಟ 35 ಮಂದಿ ಮೃತಪಟ್ಟಿದ್ದಾರೆ. ಇತರ 57 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಶ್ಯ- ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು :

ಉಕ್ರೇನ್‌ನ  ಪಶ್ಚಿಮದಲ್ಲಿ ಪೋಲ್ಯಾಂಡ್ ಗಡಿಯ ಸನಿಹದಲ್ಲಿರುವ ಲಿವಿವ್ ನಗರದ ಹೊರವಲಯದಲ್ಲಿರುವ ಸೇನಾ ತರಬೇತಿ ನೆಲೆಯ ಮೇಲೆ ರಶ್ಯ ಪಡೆಯಿಂದ 8 ಕ್ಷಿಪಣಿ ದಾಳಿ. 35 ಮಂದಿ ಸಾವು, 57 ಮಂದಿಗೆ ಗಾಯ.

ಉಕ್ರೇನ್ ರಾಜಧಾನಿ ಕೀವ್ ಸುತ್ತುವರಿದ ರಶ್ಯನ್ ಪಡೆ. ಕೀವ್‌ನಿಂದ ಹೊರತೆರಳಲು ಧಾವಿಸುತ್ತಿದ್ದವರ ಮೇಲೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಗು ಸಹಿತ 7 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ ಸೇನೆಯ ಹೇಳಿಕೆ.

ಕೀವ್ ನಗರ ಈಗ ಬಹುತೇಕ ಮುತ್ತಿಗೆಗೆ ಒಳಗಾಗಿದ್ದು ಆಕ್ರಮಣಕಾರರೊಂದಿಗೆ ಬೀದಿ ಕಾಳಗಕ್ಕೆ ಸೇನೆ ಮತ್ತು ಸ್ವಯಂಸೇವಕ ಪಡೆ ಸನ್ನದ್ಧವಾಗಿದೆ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಹೇಳಿಕೆ.

ದಕ್ಷಿಣದ ಬಂದರು ನಗರ ಮರಿಯುಪೋಲ್ ಮೇಲೆ ರಶ್ಯನ್ ಪಡೆಗಳ ನಿರಂತರ ಬಾಂಬ್ ದಾಳಿ ಮುಂದುವರಿಕೆ. 1,500ಕ್ಕೂ ಅಧಿಕ ಪ್ರಜೆಗಳು ಸಾವನ್ನಪ್ಪಿದ್ದು ನಗರದಲ್ಲಿ ಮಾನವೀಯ ದುರಂತದ ಪರಿಸ್ಥಿತಿ ನೆಲೆಸಿದೆ. ರಶ್ಯ ಪಡೆಯ ಕ್ಷಿಪಣಿ ದಾಳಿಯಿಂದ ನಾಗರಿಕರ ತೆರವು ಕಾರ್ಯಾಚರಣೆ ಪ್ರಯತ್ನ ವಿಫಲವಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಮರಿಯುಪೋಲ್‌ನಲ್ಲಿನ ನಾಗರಿಕ ಮೂಲಸೌಕರ್ಯ ಮತ್ತು ಸರಕಾರಿ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. ಮೆಲಿಟೊಪೊಲ್ ನಗರದ ಮೇಯರ್ ಇವಾನ್ ಫೆಡೊರೊವ್ರನ್ನು ರಶ್ಯನ್ ಪಡೆ ಅಪಹರಿಸಿದೆ ಎಂದು ಉಕ್ರೇನ್ ಅಧ್ಯಕ್ಷ  ಝೆಲೆನ್‌ಸ್ಕಿ ಹೇಳಿಕೆ.


ಶನಿವಾರ ಒಂದೇ ದಿನ ಉಕ್ರೇನ್‌ನ ಹಲವು ನಗರಗಳಿಂದ ಸುಮಾರು 13,000 ಜನರನ್ನು ತೆರವುಗೊಳಿಸಿರುವುದಾಗಿ ಉಕ್ರೇನ್‌ನ ಉಪಪ್ರಧಾನಿ ಹೇಳಿಕೆ. ಜನರ ಸುರಕ್ಷಿತ ಸ್ಥಳಾಂತರಕ್ಕೆ ಪೂರಕವಾಗಿ ತೆರಯಲಾದ 14 ಮಾನವೀಯ ಕಾರಿಡಾರ್‌ಗಳಲ್ಲಿ 9 ಕಾರಿಡಾರ್‌ಗಳು ಯಶಸ್ವಿಯಾಗಿದೆ ಎಂದು ಸರಕಾರ ಹೇಳಿದೆ.
ರಶ್ಯದ ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್‌ನ ಸುಮಾರು 1,300 ಯೋಧರು ಸಾವನ್ನಪ್ಪಿರುವುದಾಗಿ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿಕೆ. ತನ್ನ 498 ಯೋಧರು ಮೃತರಾಗಿರುವುದಾಗಿ ರಶ್ಯ ಮಾರ್ಚ್ 2ರಂದು ಹೇಳಿತ್ತು. ಸಂಘರ್ಷದ ಬಳಿಕ ಉಕ್ರೇನ್‌ನಿಂದ  ಸುಮಾರು 2.6 ಮಿಲಿಯನ್ ಜನತೆ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.

ಮೂಡಿದ ಆಶಾಕಿರಣ ಈ ಹಿಂದಿನ ಸಂಧಾನ ಮಾತುಕತೆ ಸಂದರ್ಭ ಯಾವುದೇ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಬಿಗಿ ನಿಲುವು ತಳೆದಿದ್ದ ರಶ್ಯ, ಇತ್ತೀಚಿನ ಮಾತುಕತೆಯಲ್ಲಿ, ಸಂಘರ್ಷ ಕೊನೆಗೊಳಿಸುವ ವಿಷಯದಲ್ಲಿ ಮೂಲಭೂತವಾಗಿ ವಿಭಿನ್ನ ವಿಧಾನ ಬಳಸಿದ್ದು, ಸಂಘರ್ಷ ಅಂತ್ಯಗೊಳ್ಳುವ ಬಗ್ಗೆ ಕಿಂಚಿತ್ ಆಶಾಕಿರಣ ಮೂಡಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಶನಿವಾರ ಹೇಳಿದ್ದಾರೆ.

ಈ ಮಧ್ಯೆ, ಫ್ರಾನ್ಸ್ ಮತ್ತು ಜರ್ಮನಿ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಹುಡುಕುವ ಪ್ರಯತ್ನ ಮುಂದುವರಿಸಿದೆ. ರಶ್ಯ ಅಧ್ಯಕ್ಷ ಪುಟಿನ್ಗೆ ದೂರವಾಣಿ ಕರೆ ಮಾಡಿದ ಫ್ರಾನ್ಸ್‌ನ ಮುಖಂಡ ಇಮ್ಯಾನುವೆಲ್ ಮ್ಯಾಕ್ರನ್ ಮತ್ತು ಜರ್ಮನಿಯ ಮುಖಂಡ ಒಲಾಫ್ ಶಾಲ್ಝ್  ಉಕ್ರೇನ್ ವಿರುದ್ಧದ ಮಾರಣಾಂತಿಕ ದಾಳಿ ಅಂತ್ಯಗೊಳಿಸುವಂತೆ ಆಗ್ರಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ರಶ್ಯದ ನಿರಂತರ ವಾಯುದಾಳಿ ಮರಿಯುಪೋಲ್‌ನಲ್ಲಿ ಒಟ್ಟು 1,582 ಜನರ ಮೃತ್ಯು

ರಶ್ಯದ ನಿರಂತರ ಬಾಂಬ್ ಮತ್ತು ಕ್ಷಿಪಣಿ ದಾಳಿಯಿಂದ ಉಕ್ರೇನ್‌ನ ದಕ್ಷಿಣದ ನಗರ ಮರಿಯುಪೋಲ್‌ನಲ್ಲಿ  ನಾಗರಿಕ ಮೂಲಸೌಕರ್ಯ ಮತ್ತು ಸರಕಾರಿ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿರುವುದು ಮಾಕ್ಸರ್ ಟೆಕ್ನಾಲಜೀಸ್ ಎಂಬ ಅಮೆರಿಕದ ಖಾಸಗಿ ಸಂಸ್ಥೆ ಶನಿವಾರ ಬಿಡುಗಡೆಗೊಳಿಸಿದ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ.

ಕಪ್ಪು ಸಮುದ್ರದ ದಡದಲ್ಲಿರುವ ಬಂದರು ನಗರ ಮರಿಯುಪೋಲ್‌ನ ಹತ್ತಕ್ಕೂ ಅಧಿಕ ಬಹುಮಹಡಿ ಕಟ್ಟಡಗಳಿಂದ ಹೊಗೆಯ ಕಪ್ಪುಮೋಡ ಆಕಾಶಕ್ಕೆ ಚಿಮ್ಮುತ್ತಿರುವ ಮತ್ತು ಇನ್ನು ಹಲವು ಕಟ್ಟಡಗಳಿ ನೆಲಸಮಗೊಂಡಿರುವ ಚಿತ್ರಗಳನ್ನು ಉಪಗ್ರಹಗಳು ರವಾನಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮರಿಯುಪೋಲ್‌ಗೆ ರಶ್ಯನ್ ಪಡೆ ಮುತ್ತಿಗೆ ಹಾಕಿದ್ದರೂ ನಗರವಿನ್ನೂ ತಮ್ಮ ನಿಯಂತ್ರಣದಲ್ಲಿದೆ ಎಂದು ಉಕ್ರೇನ್‌ನ ವಿದೇಶ ವ್ಯವಹಾರ ಸಚಿವ ಡಿಮಿಟ್ರೊ ಕ್ಯುಲೆಬಾ ಶನಿವಾರ ಹೇಳಿದ್ದಾರೆ. ಆದರೆ ನಗರದಲ್ಲಿ ಹತಾಶೆಯ ಪರಿಸ್ಥಿತಿಯಿದ್ದು ನೀರು, ಆಹಾರದ ಕೊರತೆಯಿಂದ ಜನ ಕಂಗೆಟ್ಟಿದ್ದಾರೆ ಎಂದು ‘ಡಾಕ್ಟರ್ಸ್ ವಿತೌಟ್ ಬಾರ್ಡರ್’ ಎಂಬ ಎನ್ಜಿಒ ಸಂಸ್ಥೆ ಹೇಳಿದೆ. ರಶ್ಯದ ನಿರಂತರ ಕ್ಷಿಪಣಿ ದಾಳಿ ಮತ್ತು ಕಳೆದ 12 ದಿನಗಳಿಂದ ಮುಂದುವರಿದಿರುವ ಮುತ್ತಿಗೆಯಿಂದ ಮರಿಯುಪೋಲ್ ನಗರದಲ್ಲಿ ಕನಿಷ್ಟ 1,582 ಪ್ರಜೆಗಳು ಮೃತಪಟ್ಟಿರುವುದಾಗಿ ನಗರದ ಆಡಳಿತ ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News