ಮಾ.20ರಂದು ಇವಾಲ್ವ್ ಮಹಿಳಾ ಉದ್ಯಮಿಗಳ ಸಂಘಟನೆಯಿಂದ ನಡಿಗೆ
ಮಂಗಳೂರು : ಮಹಿಳಾ ಉದ್ಯಮಿಗಳ ಸಂಘಟನೆಯಾದ ಇವಾಲ್ವ್ ವತಿಯಿಂದ ಮಹಿಳೆಯರ ಮುಟ್ಟಿನ ಸಂದರ್ಭದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾ. 20ರಂದು ನಡಿಗೆಯನ್ನು ಆಯೋಜಿಸಲಾಗಿದೆ ಎಂದು ಸಂಗಟನೆಯ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ದಿವ್ಯಾ ಡಿಸೋಜಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಬೆಳಗ್ಗೆ 6 ಗಂಟೆಗೆ ಬಿಜೈ ಭಾರತ್ ಮಾಲ್‌ನಿಂದ ನಡಿಗೆ ಆರಂಭಗೊಳ್ಳಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೆಟ್ ಶ್ರೀಮಾ ಪ್ರಿಯದರ್ಶಿನಿ ನಡಿಗೆಗೆ ಹಸಿರು ನಿಶಾನೆ ತೋರಲಿದ್ದಾರೆ. ನಡಿಗೆಗೆ ನೋಂದಾಯಿಸಿದವರು ನಡಿಗೆಯಲ್ಲಿ ಭಾಗವಹಿಸಲಿದ್ದು, ನಡಿಗೆಯು ನಗರದ ಸಾಯಿಬೀನ್ ಕಾಂಪ್ಲೆಕ್ಸ್ ಎದುರಿನಿಂದ ಪಿವಿಎಸ್ ವೃತ್ತದವರೆಗೆ ಸಾಗಿ ಬಂಟ್ಸ್ ಹಾಟ್ಸೆಲ್ ಮೂಲಕ ಯುನೈಟೆಡ್ ಟೊಯೊಟಾ ಶೋರೂಂ ಆಗಿ ಪಿವಿಎಸ್ ಆಗಿ, ಎಂಪಾಯರ್ ಮಾಲ್‌ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬೆಳಗ್ಗೆ 8 ಗಂಟೆಗೆ ಮತ್ತೆ ಭಾರತ್ ಮಾಲ್ ಎದುರು ಸಮಾರೋಪಗೊಳ್ಳಲಿದೆ. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಎಸಿಪಿ ಪರಮೇಶ್ವರ ಎ. ಹೆಗಡೆ ಹಾಗೂ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ದೀಪಕ್ ಶೆಡ್ಡೆ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ನಡಿಗೆಯಲ್ಲಿ ಭಾಗವಹಿಸುವವರಿಗೆ ಉಚಿತ ಟಿಶರ್ಟ್ ಒದಗಿಸಲಾಗುವುದು ಜತೆಗೆ ಗಿಫ್ಟ್ ವೋಚರ್ ಮತ್ತು ಬಹುಮಾನಗಳನ್ನು ಪಡೆಯಲಿದ್ದಾರೆ. ಡೆಕಾತ್ಲಾನ್ ಸಂಸ್ಥೆಯು ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾಗಿದ್ದಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಮಹಿಳಾ ಉದ್ಯಮಿಗಳು ಹಾಗೂ ಸಂಘಟನೆಯ ಸ್ಥಾಪಕ ಸದಸ್ಯರಾದ ವತಿಕಾಪೈ, ನಂದಿತಾ ಅರೂರು ರಾವ್, ರಕ್ಷಾ ಭಟ್, ಜಯಶ್ರೀ ರತಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.