×
Ad

ವಿಷವಾಗುತ್ತಿರುವ ಜೀವ ಜಲ

Update: 2022-03-15 08:53 IST

ಬೇಸಿಗೆಯ ಬಿಸಿಲಿನ ಧಗೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿನ ಅಭಾವವೂ ತೀವ್ರವಾಗುವ ಸೂಚನೆಗಳಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ಕುಡಿಯುವ ನೀರಿನ ತೀವ್ರ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ನೀರಿಗಾಗಿ ಕೊಳವೆ ಬಾವಿ ಕೊರೆಯುವುದು ಹೊಸದಲ್ಲ. ಆದರೆ ರಾಜ್ಯದ ಕೆಲವೆಡೆ ಕೊಳವೆ ಬಾವಿಗಳನ್ನು ಆಳಕ್ಕೆ ಕೊರೆದಂತೆಲ್ಲ ಫ್ಲೋರೈಡ್ ಮತ್ತು ಆರ್ಸೆನಿಕ್‌ನಂತಹ ವಿಷಕಾರಿ ಅಂಶಗಳು ಕಂಡು ಬರುತ್ತಿರುವುದು ಆತಂಕದ ಸಂಗತಿಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಜಲತಜ್ಞರು ಐದಾರು ತಿಂಗಳ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಪೂರ್ವ ಭಾಗದ ಬರಪೀಡಿತ ಜಿಲ್ಲೆಗಳ ಕೊಳವೆ ಬಾವಿಗಳ ನೀರಿನಲ್ಲಿ ವಿಕಿರಣಪೂರಿತ ಯುರೇನಿಯಂ ಕಂಡು ಬಂದಿದೆ. ಸುಮಾರು 48 ಹಳ್ಳಿಗಳಲ್ಲಿ ಯುರೇನಿಯಂ ಅಂಶ ಅಪಾಯದ ಮಟ್ಟವನ್ನು ಮೀರಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಒಕ್ಕೂಟ ಸರಕಾರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಕರ್ನಾಟಕ ಸರಕಾರ ಈ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮಾತ್ರವಲ್ಲ ಗುಜರಾತಿನಲ್ಲೂ ಅನೇಕ ಕೊಳವೆಬಾವಿಗಳಲ್ಲಿ ಯುರೇನಿಯಂ ಕಂಡು ಬಂದಿದೆ. ಸಚಿವ ಶೇಖಾವತ್‌ರ ರಾಜ್ಯವಾದ ರಾಜಸ್ಥಾನದಲ್ಲೂ ಈ ಸಮಸ್ಯೆ ಗಂಭೀರವಾಗಿದೆ. ಇದರ ಪರಿಹಾರಕ್ಕೆ ಬರೀ ರಾಜ್ಯ ಸರಕಾರಗಳು ಗಮನ ವಹಿಸಿದರೆ ಸಾಲದು, ಒಕ್ಕೂಟ ಸರಕಾರವೂ ಇತ್ತ ಗಮನ ಹರಿಸಬೇಕು.
ಕುಡಿಯುವ ನೀರಿನಲ್ಲಿ ಯುರೇನಿಯಂ ಪ್ರಮಾಣ ಜಾಸ್ತಿಯಾದರೆ ಜನ ಸಾಮಾನ್ಯರ ಆರೋಗ್ಯ ಹದಗೆಡುತ್ತದೆ. ಇದರಿಂದ ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್‌ನಂತಹ ಮಾರಕ ವ್ಯಾಧಿಗಳು ಕಾಣಿಸಿಕೊಳ್ಳುತ್ತವೆ. ಈ ನೀರಿನಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಯಾವುದಾದರೂ ಕಾಯಿಲೆ ಬರಬಹುದು ಎಂದು ಆರೋಗ್ಯ ಪರಿಣಿತರು ಎಚ್ಚರಿಕೆ ನೀಡಿದ್ದಾರೆ. ಆದರೆ ಹಳ್ಳಿಗಾಡಿನ ಜನರಿಗೆ ಕೊಳವೆ ಬಾವಿಯ ನೀರನ್ನು ಬಿಟ್ಟರೆ ಬೇರೆ ಗತಿಯಿಲ್ಲ. ನಮ್ಮನ್ನಾಳುವ ಸರಕಾರಗಳು ಸುರಕ್ಷಿತ ಕುಡಿಯುವ ನೀರಿನ ಏರ್ಪಾಡು ಮಾಡುವಲ್ಲಿ ವಿಫಲಗೊಂಡಿವೆ. ಕೊಳವೆ ಬಾವಿಯ ಪ್ರತಿ ಲೀಟರ್ ನೀರಿನಲ್ಲಿ ಯುರೇನಿಯಂ ಪ್ರಮಾಣ 30 ಮೈಕ್ರೊಗ್ರಾಮ್‌ಗಿಂತ ಜಾಸ್ತಿ ಇರಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಆದರೆ ನಮ್ಮ ದೇಶದ ಪರಮಾಣು ಪರಿಣಿತರು ಒಂದಿಷ್ಟು ರಿಯಾಯಿತಿ ನೀಡಿ ಯುರೇನಿಯಂ ಪ್ರಮಾಣ 60ರಷ್ಟಿದ್ದರೂ ನಡೆಯುತ್ತದೆ ಎಂದು ಹೇಳಿದ್ದಾರೆ. ಆದರೆ ಇಂತಹ ರಿಯಾಯಿತಿ ಸಮರ್ಥನೀಯವಲ್ಲ.

ಕರ್ನಾಟಕದ ಕೋಲಾರ ಮತ್ತು ಚಿಕ್ಕಬಳ್ಳಾಪುರದ 20 ಹಳ್ಳಿಗಳಲ್ಲಿ ಕೊಳವೆ ಬಾವಿಯ ಕುಡಿಯುವ ನೀರಿನಲ್ಲಿ ಯುರೇನಿಯಂ ಪ್ರಮಾಣ 1,000 ಮೈಕ್ರೊಗ್ರಾಮ್‌ಗಿಂತ ಹೆಚ್ಚಾಗಿದೆ ಎಂದು ರಾಜ್ಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಇದು ಅತ್ಯಂತ ಕಳವಳವನ್ನು ಉಂಟು ಮಾಡುವ ಸಂಗತಿಯಾಗಿದೆ. ವಿಜ್ಞಾನಿಗಳು ಈ ಸಮೀಕ್ಷೆಯನ್ನು ಸರಕಾರಕ್ಕೆ ಸಲ್ಲಿಸಿ ಮೂರು ತಿಂಗಳಾಗುತ್ತಾ ಬಂದರೂ ಕರ್ನಾಟಕದ ಬಿಜೆಪಿ ಸರಕಾರ ಗಾಢವಾದ ನಿದ್ರೆಯಲ್ಲಿ ಇದ್ದಂತೆ ಕಾಣುತ್ತದೆ. ನಮ್ಮ ರಾಜ್ಯದ ಆರೋಗ್ಯ ಮಂತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯವರು. ತಮ್ಮ ಜಿಲ್ಲೆಯ ಜನ ವಿಷಕಾರಿ ನೀರನ್ನು ಕುಡಿಯುತ್ತಿರುವುದು ಅವರ ಗಮನಕ್ಕೆ ಬಂದಿಲ್ಲವೇ? ಗಮನಕ್ಕೆ ಬಂದಿದ್ದರೆ ಅವರು ಕೈಗೊಂಡ ಕ್ರಮಗಳೇನು ಎಂಬುದನ್ನು ಬಹಿರಂಗ ಪಡಿಸಲಿ.
ಕುಡಿಯುವ ನೀರಿನ ಈ ದುರವಸ್ಥೆಗೆ ಯಾರು ಕಾರಣ? ನಾವು ಕೆರೆ ಕಟ್ಟೆಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಂಡಿದ್ದರೆ, ನೀರಿನ ದುಂದು ಬಳಕೆಗೆ ಕಡಿವಾಣ ಹಾಕಿದ್ದರೆ, ಮರಳು ಗಣಿಗಾರಿಕೆಯನ್ನು ನಿಯಂತ್ರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ಪೂರ್ವಿಕರು ನಿರ್ಮಿಸಿದ ಕೆರೆಗಳನ್ನು ನಾವು ಉಳಿಸಿಕೊಳ್ಳಲಿಲ್ಲ. ಕಾಡುಗಳನ್ನು ಕಾಪಾಡಿಕೊಳ್ಳಲಿಲ್ಲ. ಹೀಗಾಗಿ ಮಳೆಯ ಅಭಾವ ಉಂಟಾಗಿ ಪರಿಸ್ಥಿತಿ ಬಿಗಡಾಯಿಸುತ್ತಾಬಂತು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಂತೂ ಪರಿಸ್ಥಿತಿ ಗಂಭೀರವಾಗಿದೆ.


ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಸರಕಾರಗಳು ಕೊಳವೆ ಬಾವಿಯನ್ನು ಕೊರೆಯುವ ಸುಲಭದ ಮಾರ್ಗವನ್ನು ಕಂಡುಕೊಂಡವು. ಆದರೆ ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಗಮನಿಸಲಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ 800 ಮಿಲಿ ಮೀಟರ್‌ನಷ್ಟು ಮಳೆ ಬೀಳುತ್ತದೆ. ಅದನ್ನು ವ್ಯವಸ್ಥಿತವಾಗಿ ಹಿಡಿದಿಟ್ಟುಕೊಳ್ಳುವ ಯೋಜನೆಯನ್ನು ರೂಪಿಸಿದರೆ ಪ್ರತಿ ಹೆಕ್ಟೇರ್‌ಗೆ 800 ಲಕ್ಷ ಲೀಟರ್ ನೀರು ಸಿಗುತ್ತದೆ. ಅದನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿಯುವ ನೀರಿಗಾಗಿ ಉಪಯೋಗಿಸುವ ಸರಳ ವಿಧಾನದತ್ತ ನಮ್ಮ ಸರಕಾರಗಳು ಗಮನ ಹರಿಸಲೇ ಇಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಗಮನ ಹರಿಸಲು ಬಿಡಲಿಲ್ಲ.


 ಚುನಾವಣೆಗಳು ಸಮೀಪಿಸಿದಾಗ ಜನರ ಕಣ್ಣಿಗೆ ಮಣ್ಣೆರಚಲು ರಾಜಕಾರಣಿಗಳು ಎತ್ತಿನಹೊಳೆ, ಮೇಕೆದಾಟು, ಲಿಂಗನಮಕ್ಕಿಯ ಕೋಟ್ಯಂತರ ರೂಪಾಯಿ ಯೋಜನೆಗಳ ಮಂತ್ರ ಪಠಿಸುತ್ತಾರೆ. ಎಲ್ಲದರಲ್ಲೂ ಕಮಿಶನ್ ದೋಚುವ ಅವರ ದುರಾಸೆಯು ಜನೋಪಕಾರಿ, ಜನೋಪಯೋಗಿ ಸರಳ ಯೋಜನೆಗಳನ್ನು ರೂಪಿಸಲು ಅವಕಾಶ ನೀಡುವುದಿಲ್ಲ.

ಅದೇನೇ ಇರಲಿ ತಮ್ಮನ್ನು ಚುನಾಯಿಸಿ ಅಧಿಕಾರವನ್ನು ನೀಡಿದ ಜನರಿಗೆ ಕನಿಷ್ಠ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವತ್ತ ರಾಜಕಾರಣಿಗಳು ಲಕ್ಷ ನೀಡಬೇಕು. ಮಳೆ ನೀರು ಸಂಗ್ರಹದಂತಹ ಸಣ್ಣಪುಟ್ಟ ಯೋಜನೆಗಳತ್ತ ಗಮನ ಹರಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News