×
Ad

ಕೋವಿಡ್ ವೇಳೆ ಆಶಾ ಕಾರ್ಯಕರ್ತೆಯರ ಶ್ರಮ ಎಲ್ಲರಿಗೂ ಮಾದರಿ: ಡಿಸಿ ಕೂರ್ಮಾರಾವ್

Update: 2022-03-15 21:19 IST

ಉಡುಪಿ : ಕೋವಿಡ್ ಸೇರಿದಂತೆ ಇತರೆ ತುರ್ತು ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತ ದೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅವರ ಈ ಕಾರ್ಯ ಉಳಿದೆಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಮಂಗಳವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಆಶಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕೋವಿಡ್ ಸೋಂಕಿನ ಮೂರು ಅಲೆಗಳ ಸಂದರ್ಭದಲ್ಲಿಯೂ ಅದರ ಹರಡುವಿಕೆಯನ್ನು ತಡೆಗಟ್ಟುವುದು ಸೇರಿ ದಂತೆ ನಿರ್ವಹಣಾ ಕಾರ್ಯದಲ್ಲಿ ಆಶಾ ಕಾರ್ಯಕರ್ತರು ಸೋಂಕಿತರ ಮನೆ ಮನೆಗೂ ಭೇಟಿ ನೀಡಿ, ಅವರುಗಳ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ಆರೋಗ್ಯ ಶಿಕ್ಷಣದ ಮಾಹಿತಿಗಳನ್ನು ನೀಡಿದ್ದಾರೆ ಎಂದರು.

ನಾವು ಹಲವು ಬಾರಿ ಕೋವಿಡ್ ನಿಯಂತ್ರಣ ಸಂಬಂಧ ಗ್ರಾಮೀಣ ಪ್ರದೇಶದ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ತಪ್ಪದೇ ಕಂಡುಬರುತ್ತಿದ್ದರು. ಅಲ್ಲದೇ ಸ್ವಯಂ ಆಸಕ್ತಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವುದನ್ನು ಕಂಡಿದ್ದೇನೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ ನಾಗಭೂಷಣ ಉಡುಪ ಹೆಚ್. ಮಾತನಾಡಿ, ಕೋವಿಡ್ ಸಮಯದಲ್ಲಿ ಭಾರತೀಯ ಸೇನೆ ಗಡಿಭಾಗದಲ್ಲಿ ಯಾವ ರೀತಿ ಹೋರಾಡಿದೆಯೋ ಅದೇ ರೀತಿ ನಮ್ಮ ಆಶಾ ಕಾರ್ಯಕರ್ತರೂ ಕೋವಿಡ್ ಸಮಯದಲ್ಲಿ ಹೋರಾಡಿ ಸೋಂಕನ್ನು ನಿಯಂತ್ರಿಸಲು ಶ್ರಮಿಸಿದ್ದಾರೆ. ಕೋವಿಡ್ ಪ್ರಮಾಣವನ್ನು ತಗ್ಗಿಸಲು ಮನೆಮನೆಗೆ ತೆರಳಿ ಲಸಿಕೆಯನ್ನು ಪಡೆಯಲು ಜನರಿಗೆ ಪ್ರೇರೇಪಿಸುವುದರೊಂದಿಗೆ ಜಿಲ್ಲೆಯನ್ನು ಕೋವಿಡ್ ಶೂನ್ಯಕ್ಕೆ ತರುವಲ್ಲಿ ಪ್ರಮುಖ ಕಾರ್ಯನಿರ್ವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ರತ್ನಾ, ಪ್ರಕಾಶಿಣಿ, ಲಕ್ಷ್ಮೀ ಎಸ್. ನಾಯಕ್, ವಿನೋದಾ ಜೆ.ಆಚಾರ್ಯ, ಜಯಲಕ್ಷ್ಮೀ ಎಸ್., ಕುಸುಮಾ, ವಿಜಯಲಕ್ಷ್ಮೀ, ಮಂಜುಳಾ, ವಿಜಯಾ, ಚೈತನ್ಯಾ, ನೀಲಾವತಿ, ವಿನುತಾ ವಿ.ಮರಾಠೆ, ಮಾಲಿನಿ ಶೆಟ್ಟಿ, ರೇಷ್ಮಾ ಆರ್.ಮೂಲ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ ರಚನಾ, ಡಾ ಪಿ.ವಿ.ಭಂಡಾರಿ, ಡಾ.ಅರ್ಚನಾ, ಡಾ.ಸೌಜನ್ಯಾ ಹೆಗ್ಡೆ ಆಶಾ ಕಾರ್ಯಕರ್ತೆಯರಿಗೆ ಎಚ್‌ಡಬ್ಲ್ಯೂಸಿ ಮಲ್ಟಿ ಸ್ಕಿಲ್ಲಿಂಗ್ ತರಬೇತಿಯನ್ನು ನೀಡಿದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ ಎಂ.ಜಿ.ರಾಮ, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಕೋವಿಡ್ ನೋಡಲ್ ಅಧಿಕಾರಿ ಡಾ ಪ್ರಶಾಂತ್ ಭಟ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ್ ಸಂಜು, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ ಕೃಷ್ಣಾನಂದ ಶೆಟ್ಟಿ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಡಾ.ರಾಜೇಶ್ವರಿ, ಆಶಾಮೇಲ್ವಿಚಾರಕಿ ರೀಟಾ ಉಪಸ್ಥಿತರಿದ್ದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನಾ ಸ್ವಾಗತಿಸಿ ವಂದಿಸಿದರೆ, ಕಾರ್ಯಕ್ರಮ ಸಂಯೋಜಕಿ ಡಾ. ಅಂಜಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News