ಯುರೋಪಿಯನ್ ಯೂನಿಯನ್ ಬೆಂಬಲದ ಬಲಪ್ರದರ್ಶನ: ಕೀವ್ ಗೆ ಪೋಲ್ಯಾಂಡ್, ಝೆಕ್, ಸ್ಲೊವೇನಿಯಾ ಪ್ರಧಾನಿಗಳ ಭೇಟಿ
ಕೀವ್, ಮಾ.15: ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್ನ ಬೆಂಬಲದ ಬಲಪ್ರದರ್ಶನದ ಸಂಕೇತವಾಗಿ ಝೆಕ್ ಗಣರಾಜ್ಯ, ಪೋಲ್ಯಾಂಡ್ ಮತ್ತು ಸ್ಲೊವೇನಿಯಾದ ಪ್ರಧಾನಿಗಳು ಮಂಗಳವಾರ ರೈಲಿನ ಮೂಲಕ ರಾಜಧಾನಿ ಕೀವ್‌ಗೆ ಬಂದಿಳಿದಿದ್ದಾರೆ ಎಂದು ಮೂಲಗಳು ಹೇಳಿವೆ.
ಫೆಬ್ರವರಿ 24ರಂದು ರಶ್ಯದ ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್ ರಾಜಧಾನಿಗೆ ಭೇಟಿ ನೀಡುತ್ತಿರುವ ಪ್ರಥಮ ವಿದೇಶಿ ಮುಖಂಡರು ಇವರಾಗಿದ್ದಾರೆ. ಉಕ್ರೇನ್‌ಗೆ, ಅಲ್ಲಿನ ಪೌರಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಯುರೋಪಿಯನ್ ಯೂನಿಯನ್‌ನ ನಿಸ್ಸಂದಿಗ್ಧವಾದ ಬೆಂಬಲವನ್ನು ವ್ಯಕ್ತಪಡಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ಝೆಕ್ ಪ್ರಧಾನಿ ಪೀಟರ್ ಫಿಯಾಲ ಟ್ವೀಟ್ ಮಾಡಿದ್ದಾರೆ.
ಯುರೋಪಿಯನ್ ಯೂನಿಯನ್‌ನ 3 ಪ್ರಧಾನಿಗಳ ಭೇಟಿಯನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ದೃಢಪಡಿಸಿದ್ದಾರೆ. ರಶ್ಯ ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ವಿರುದ್ಧ ನಡೆಸಿರುವ ಕ್ರಿಮಿನಲ್ ಆಕ್ರಮಣದ 20ನೇ ದಿನ ಈ ಭೇಟಿ ನಡೆದಿದೆ. ಇಂತಹ ಮಹತ್ವದ ಸಂದರ್ಭದಲ್ಲಿ ಇಲ್ಲಿಗೆ ಬರುವುದು ನಮ್ಮ ಕರ್ತವ್ಯವಾಗಿದೆ. ಯಾಕೆಂದರೆ, ಇದು ನಮ್ಮ ಹಿತಾಸಕ್ತಿಯ ವಿಷಯವಲ್ಲ, ದೌರ್ಜನ್ಯದಿಂದ ಮುಕ್ತವಾದ ಜಗತ್ತಿನಲ್ಲಿ ಬದುಕುವ ಹಕ್ಕು ಹೊಂದಿರುವ ನಮ್ಮ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಪೋಲ್ಯಾಂಡ್ ಪ್ರಧಾನಿ ಮತೆಯುರ್ ಮೊರವಿಯೆಕಿ ಹೇಳಿದ್ದಾರೆ. ಇದೊಂದು ಮಹತ್ವದ ಭೇಟಿ ಎಂದು ಸ್ಲೊವೇಕಿಯಾದ ಪ್ರಧಾನಿ ಜಾನೆರ್ ಜಾನ್ಸ್ ಹೇಳಿದ್ದಾರೆ.
ಈ ಭೇಟಿಯು ಉಕ್ರೇನ್ ಜನತೆ ಮತ್ತು ನಾಯಕತ್ವಕ್ಕೆ ಉನ್ನತ ಮಟ್ಟದ ಸಾರ್ವಜನಿಕ ಬೆಂಬಲದ ಬಹಿರಂಗ ಪ್ರದರ್ಶನವಾಗಿದ್ದು, ಕೀವ್ ಹಾಗೂ ಇತರ ಪ್ರದೇಶಗಳಿಗೆ ತುರ್ತು ಅಗತ್ಯವಿರುವ ಮಾನವೀಯ ನೆರವನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದಿನ ಕಮ್ಯುನಿಸ್ಟ್ ಒಕ್ಕೂಟದ ಸದಸ್ಯರಾಗಿದ್ದ ಝೆಕ್ ಗಣರಾಜ್ಯ ಮತ್ತು ಪೋಲ್ಯಾಂಡ್ ಈಗ ಯುರೋಪಿಯನ್ ಯೂನಿಯನ್ ಮತ್ತು ನೇಟೊ ಸದಸ್ಯತ್ವ ಪಡೆದಿದ್ದು ರಶ್ಯ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ಬಲವಾದ ಬೆಂಬಲ ಘೋಷಿಸಿರುವ ದೇಶಗಳಾಗಿವೆ.
ಈ ಮಧ್ಯೆ, ಸೋಮವಾರ ರಶ್ಯ-ಉಕ್ರೇನ್ ಅಧಿಕಾರಿಗಳ ಮಧ್ಯೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಂಧಾನ ಮಾತುಕತೆ ಪ್ರಗತಿ ಕಾಣದೆ ವಿಫಲವಾಗಿದೆ ಎಂದು ವರದಿಯಾಗಿದೆ. ಸಂಧಾನಕಾರರು ತಾಂತ್ರಿಕ ವಿರಾಮ ಪಡೆದಿದ್ದು ಮಂಗಳವಾರ ಮತ್ತೆ ಮಾತುಕತೆ ಮುಂದುವರಿಯಲಿದೆ . ಶಾಂತಿ, ಕದನ ವಿರಾಮ, ಸೇನೆಯ ತಕ್ಷಣ ಹಿಂದೆಗೆತ ಮತ್ತು ಭದ್ರತೆಯ ಖಾತರಿಯ ಬಗ್ಗೆ ಸಂಧಾನಕಾರರು ಚರ್ಚಿಸಲಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ನಿಕಟವರ್ತಿ ಮಿಖಾಯಿಲೊ ಪೊಡೊಲ್ಯಾಕ್ ಹೇಳಿದ್ದಾರೆ.
ಉಕ್ರೇನ್: ಕೀವ್ ನಲ್ಲಿ 35 ಗಂಟೆಗಳ ಕರ್ಫ್ಯೂ ಜಾರಿ
ಉಕ್ರೇನ್ ರಾಜಧಾನಿ ಕೀವ್ನ ಹೊರವಲಯದಲ್ಲಿ ಬೀಡುಬಿಟ್ಟಿರುವ ರಶ್ಯ ಸೇನೆ ನಗರದ ಮೇಲೆ ತೀವ್ರ ವಾಯುದಾಳಿ ಮುಂದುವರಿಸಿರುವಂತೆಯೇ, ನಗರದಲ್ಲಿ 35 ಗಂಟೆಗಳ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಮೇಯರ್ ಘೋಷಿಸಿದ್ದಾರೆ. ಮಂಗಳವಾರ ರಶ್ಯದ ಕ್ಷಿಪಣಿ ದಾಳಿಯಿಂದ ಕೀವ್‌ನಲ್ಲಿ 2 ಮಂದಿ ಮೃತಪಟ್ಟಿದ್ದಾರೆ ಎಂದವರು ಹೇಳಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಯಿಂದ(ಸ್ಥಳೀಯ ಕಾಲಮಾನ ರಾತ್ರಿ 8) ಗುರುವಾರ ಬೆಳಿಗ್ಗೆ 7 ಗಂಟೆ(ಸ್ಥಳೀಯ ಕಾಲಮಾನ 5 ಗಂಟೆ)ಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಿಶೇಷ ಅನುಮತಿಯಿಲ್ಲದೆ ನಗರದಲ್ಲಿ ಸುತ್ತಾಡುವುದನ್ನು ನಿಷೇಧಿಸಲಾಗಿದೆ, ಆದರೆ ಬಾಂಬ್ ಶೆಲ್ಟರ್ಗಳಿಗೆ(ಬಾಂಬ್ ದಾಳಿಯಿಂದ ರಕ್ಷಣೆ ಪಡೆಯುವ ಸ್ಥಳ) ಹೋಗುವುದಕ್ಕೆ ನಿಷೇಧ ಅನ್ವಯಿಸುವುದಿಲ್ಲ ಎಂದು ಮೇಯರ್ ವಿಟಾಲಿಯ್ ಕಿಲ್ಶ್ಕೊ ವಿವರಿಸಿದ್ದಾರೆ.
ದೇಶದ ಹೃದಯವಾಗಿರುವ ರಾಜಧಾನಿಯನ್ನು ನಾವು ರಕ್ಷಿಸಲಿದ್ದೇವೆ. ಪ್ರಸ್ತುತ ಯುರೋಪ್‌ನ ಸ್ವಾತಂತ್ರ್ಯ ಮತ್ತು ಭದ್ರತೆಯ ಸಂಕೇತ ಮತ್ತು ಮುಂಚೂಣಿ ಕಾರ್ಯನಿರ್ವಹಣೆಯ ನೆಲೆಯಾಗಿರುವ ಕೀವ್ ಅನ್ನು ನಾವು ಬಿಟ್ಟುಕೊಡುವುದಿಲ್ಲ ಎಂದವರು ಹೇಳಿದ್ದಾರೆ.
ರಶ್ಯ-ಉಕ್ರೇನ್ ಯುದ್ಧದಿಂದ ಬಡದೇಶಗಳಿಗೆ ಆಘಾತ ಮತ್ತು ಅಪಾಯ: ವಿಶ್ವಸಂಸ್ಥೆ (ವಾಟ್ಸಪ್ ಬೇಕಾದರೆ)
ನ್ಯೂಯಾರ್ಕ್, ಮಾ.15: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ಜಾಗತಿಕ ಅರ್ಥವ್ಯವಸ್ಥೆಯ ಮೇಲೆ , ಅದರಲ್ಲೂ ವಿಶೇಷವಾಗಿ ಬಡದೇಶಗಳಿಗೆ ಅಪಾಯದ ತೂಗುಕತ್ತಿಯಾಗಿ ಪರಿಣಮಿಸಿದ್ದು ಆಕಾಶಕ್ಕೆ ಜಿಗಿದಿರುವ ಆಹಾರ, ಇಂಧನ, ರಸಗೊಬ್ಬರಗಳ ದರದಿಂದಾಗಿ ಬಡದೇಶಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಜಗತ್ತಿಗೆ ಪೂರೈಕೆಯಾಗುವ ಸೂರ್ಯಕಾಂತಿ ಎಣ್ಣೆ(ಸನ್ ಫ್ಲವರ್ ಆಯಿಲ್)ಯ 50%ಕ್ಕೂ ಅಧಿಕ , ಗೋಧಿಯಲ್ಲಿ ಸುಮಾರು 30% ಪ್ರಮಾಣ ರಶ್ಯ ಮತ್ತು ಉಕ್ರೇನ್ನಿಂದ ಸರಬರಾಜಾಗುತ್ತದೆ. ಧಾನ್ಯದ ಬೆಲೆಗಳು ಈಗಾಗಲೇ 2007-08ರ ಆಹಾರ ಬಿಕ್ಕಟ್ಟಿನ ಸಂದರ್ಭಕ್ಕಿಂತಲೂ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಈಜಿಪ್ಟ್, ಕಾಂಗೊ ಗಣರಾಜ್ಯ, ಬುರ್ಕಿನಾ ಫಾಸೊ, ಲೆಬನಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಯೆಮನ್ ಸೇರಿದಂತೆ ಕನಿಷ್ಟ ಅಭಿವೃದ್ಧಿ ಹೊಂದಿದ 45 ದೇಶಗಳಿಗೆ ಅಗತ್ಯವಿರುವ ಗೋಧಿಯಲ್ಲಿ 3ನೇ 1ರಷ್ಟು ಪ್ರಮಾಣ ಉಕ್ರೇನ್ ಮತ್ತು ರಶ್ಯದಿಂದ ಆಮದಾಗುತ್ತದೆ. ಇತರ 18 ಕನಿಷ್ಟ ಅಭಿವೃದ್ಧಿಯ ದೇಶಗಳಿಗೆ ಅಗತ್ಯವಿರುವ 50%ದಷ್ಟು ಗೋಧಿ ಈ 2 ದೇಶಗಳಿಂದ ಆಮದಾಗುತ್ತಿದೆ . ಈಗ ನಡೆಯುತ್ತಿರುವ ಯುದ್ಧ ಈ ಎಲ್ಲಾ ಅಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಮತ್ತು ಜಗತ್ತಿನೆಲ್ಲೆಡೆ ರಾಜಕೀಯ ಅಸ್ಥಿರತೆ ಮತ್ತು ಅಶಾಂತಿಯ ಬೀಜವನ್ನು ಬಿತ್ತುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಆಘಾತದಿಂದ ಉಂಟಾಗಿದ್ದ ಹಣದುಬ್ಬರ, ಬಡ್ಡಿದರ ಹೆಚ್ಚಳ, ಸಾಲದ ಹೊರೆಯ ಸಮಸ್ಯೆಯಿಂದ ತತ್ತರಿಸಿಹೋಗಿದ್ದ ಅತ್ಯಂತ ಬಡದೇಶಗಳು ಚೇತರಿಕೆಯ ಹಾದಿಗೆ ಮರಳುವ ಪ್ರಯತ್ನ ಮಾಡುತ್ತಿರುವಂತೆಯೇ ಆರಂಭವಾಗಿರುವ ಯುದ್ಧವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಗುಟೆರಸ್ ಹೇಳಿದ್ದಾರೆ.
ಈ ಮಧ್ಯೆ, ರಶ್ಯನ್ ಸೇನೆಯ ಮುತ್ತಿಗೆಗೆ ಒಳಗಾಗಿರುವ ದಕ್ಷಿಣದ ಬಂದರು ನಗರ ಮರಿಯುಪೋಲ್ನಲ್ಲಿ ಆಹಾರ, ನೀರು, ಔಷಧ ಹಾಗೂ ಇತರ ಮೂಲಭೂತ ಅವಶ್ಯಕತೆಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ ಎಂದು ವಿಶ್ವಸಂಸ್ಥೆಯ ಸಹಾಯಕ ವಕ್ತಾರ ಫರ್ಹಾನ್ ಹಖ್ ಹೇಳಿದ್ದಾರೆ. ಉಕ್ರೇನ್ನಲ್ಲಿ ಮಾನವೀಯ ನೆರವಿನ ಅಗತ್ಯವಿರುವ ಸುಮಾರು 6 ಲಕ್ಷ ಜನರಿಗೆ ವಿಶ್ವಸಂಸ್ಥೆ ಗರಿಷ್ಟ ನೆರವು ಒದಗಿಸಿದೆ. ಆದರೆ, ಇನ್ನೂ 6 ಮಿಲಿಯನ್ ಜನರಿಗೆ ನೆರವು ಒದಗಿಸಲು ಹೆಚ್ಚುವರಿ 1.1 ಬಿಲಿಯನ್ ಡಾಲರ್ ಮೊತ್ತದ ದೇಣಿಗೆಯನ್ನು ವಿಶ್ವಸಂಸ್ಥೆ ಕೋರಿದ್ದು ಇದುವರೆಗೆ ಕೇವಲ 219 ಮಿಲಿಯನ್ ಡಾಲರ್ ದೇಣಿಗೆ ಸಂಗ್ರಹವಾಗಿದೆ. ಈಗಾಗಲೇ ಉಕ್ರೇನ್ಗೆ ನೆರವಿನ ವಾಗ್ದಾನ ಮಾಡಿರುವ ದೇಣಿಗೆ ಒದಗಿಸುವ ಮೂಲಕ ವಾಗ್ದಾನ ಈಡೇರಿಸಿಕೊಳ್ಳುವಂತೆ ಹಖ್ ಆಗ್ರಹಿಸಿದ್ದಾರೆ.
ಯುದ್ಧದ ಸಂದರ್ಭ ಆರೋಗ್ಯರಕ್ಷಣೆ ವ್ಯವಸ್ಥೆಯ ಮೇಲೆ ದಾಳಿ ನಡೆಸುವುದನ್ನು ತಕ್ಷಣ ಅಂತ್ಯಗೊಳಿಸುವಂತೆ ರವಿವಾರ ವಿಶ್ವಸಂಸ್ಥೆ ಆಗ್ರಹಿಸಿದೆ. ಉಕ್ರೇನ್-ರಶ್ಯ ಯುದ್ಧ ಆರಂಭವಾದಂದಿನಿಂದ 24 ವೈದ್ಯಕೀಯ ವ್ಯವಸ್ಥೆ, 5 ಆಂಬ್ಯುಲೆನ್ಸ್ಗಳಿಗೆ ಹಾನಿಯಾಗಿದ್ದು ಕನಿಷ್ಟ 12 ಮಂದಿ ಮೃತಪಟ್ಟು 34 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಉಕ್ರೇನ್ ಗೆ 40 ಮಿಲಿಯನ್ ಡಾಲರ್ ಹೆಚ್ಚುವರಿ ನೆರವು
ಯುದ್ಧಗ್ರಸ್ತ ಉಕ್ರೇನ್ನಲ್ಲಿ ಈಗಾಗಲೇ ಕನಿಷ್ಟ 1.9 ಮಿಲಿಯನ್ ಜನತೆ ದೇಶದೊಳಗಿನ ಇತರ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದು ಇವರಿಗೆ ತುರ್ತು ಅಗತ್ಯವಿರುವ ಆಹಾರ, ನೀರು ಮತ್ತು ಔಷಧ ಪೂರೈಸಲು ವಿಶ್ವಸಂಸ್ಥೆಯ ತುರ್ತು ನಿಧಿಯಿಂದ ಹೆಚ್ಚುವರಿಯಾಗಿ 40 ಮಿಲಿಯನ್ ಡಾಲರ್ ನೆರವು ಒದಗಿಸುವುದಾಗಿ ಗುಟೆರಸ್ ಘೋಷಿಸಿದ್ದಾರೆ.
ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭವಾದಂದಿನಿಂದ ಇದುವರೆಗೆ 2.8 ಮಿಲಿಯನ್ಗೂ ಅಧಿಕ ಮಂದಿ ಇತರ ದೇಶಗಳಿಗೆ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆ ವರದಿ ಮಾಡಿದೆ.