×
Ad

ಹೈಕೋರ್ಟ್ ಅರ್ಜಿದಾರ ವಿದ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂಬುದು ಸಾಬೀತು: ಯಶ್ಪಾಲ್ ಸುವರ್ಣ

Update: 2022-03-16 15:04 IST

ಉಡುಪಿ : ಹಿಜಾಬ್ ಸಂಬಂಧ ಹೈಕೋರ್ಟ್ ತೀರ್ಪನ್ನೆ ಪ್ರಶ್ನೆ ಮಾಡುವ ವಿದ್ಯಾರ್ಥಿನಿಯರು ಈ ದೇಶದಲ್ಲಿ ಉಳಿಯಲು ಅರ್ಹರಲ್ಲ. ಅವರಿಗೆ ಧರ್ಮಪಾಲನೆಗೆ ಅವಕಾಶ ಇರುವ ದೇಶಕ್ಕೆ ಹೋಗಲಿ. ನ್ಯಾಯಾಂಗ ವ್ಯವಸ್ಥೆಗೆ ಅಗೌರವ ವರ್ತನೆ ತೋರುವ ಇವರು ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂಬುದು ಸಾಬೀತಾಗಿದೆ ಎಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪಿನಿಂದ ಹಿಜಾಬ್ ವಿವಾದಕ್ಕೆ ತೆರೆ ಬಿದ್ದಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನಲ್ಲಿ ತೀರ್ಪು ನೀಡಲಾಗಿದೆ. ನ್ಯಾಯಾಂಗ ಹಾಗೂ ಸಂವಿಧಾನದ ಎದುರು ಯಾವುದೇ ಧರ್ಮ ಮುಖ್ಯವಾಗುವುದಿಲ್ಲ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ನಿರ್ಣಯ ವಿರುದ್ಧ ವಿದ್ಯಾರ್ಥಿನಿಯರು ಹೈಕೋರ್ಟಿಗೆ ಹೋಗಿದ್ದರು. ಈಗ ಅವರೇ ಕೋರ್ಟಿನ ಆದೇಶವನ್ನು ಕಾನೂನು ವಿರೋಧ, ರಾಜಕೀಯ ಪ್ರೇರಿತ ಎನ್ನುತ್ತಾರೆ ಎಂದು ಟೀಕಿಸಿದ ಅವರು, ಕಾನೂನು ಗೌರವಿಸುವವರಿಗೆ ಮಾತ್ರ ನಾವು ಕಾಲೇಜಿನಲ್ಲಿ ಅವಕಾಶ ನೀಡಲಾಗುವುದು ಎಂದರು.

ಸಿಎಫ್‌ಐನ ಪೇಯ್ಡ್ ನಾಯಕರು ಸಾಕಷ್ಟು ಹೇಳಿಕೆ ನೀಡುತ್ತಿದ್ದರು. ಆದೇಶ ಬಂದ ನಂತರ ಬೇರೆಯದೇ ಮಾತನಾಡುತ್ತಿದ್ದಾರೆ. ಕರಾವಳಿಯಲ್ಲಿ ಅಶಾಂತಿ ಸೃಷ್ಠಿಸುವುದು ಇವರ ಉದ್ದೇಶವಾಗಿದೆ. ಸಿಎಫ್‌ಐ, ಪಿಎಫ್‌ಐ ಸಂಘಟನೆಯನ್ನು ನಾವು ಕಿತ್ತು ಹಾಕುತ್ತೇವೆ. ನಮ್ಮ ಮುಂದಿನ ಉದ್ದೇಶ ಈ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವುದು ಮತ್ತು ಭಾರತವನ್ನು ಹಿಂದೂ ರಾಷ್ಟ್ರ ವನ್ನಾಗಿ ಮಾಡುವುದು ಎಂದು ಯಶ್ಪಾಲ್ ಸುವರ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News