ಕ್ಯಾನ್ಸರ್‌ನಿಂದ ಗುಣಹೊಂದಲು ಸಾಧ್ಯ: ಡಾ.ಅಶೋಕ್ ಕುಮಾರ್
ಉಡುಪಿ : ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ಚಿಕಿತ್ಸೆ ಪಡೆಯುವುದರಿಂದ ರೋಗದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ ತಿಳಿಸಿದ್ದಾರೆ.
ಉಡುಪಿಯ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯುಜಿಎ ಹಾಲ್‌ನಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಕ್ಯಾನ್ಸರ್ ರೋಗವು ಒಂದು ಮಾರಣಾಂತಿಕ ರೋಗವಾಗಿದೆ. ಜನಸಾಮಾನ್ಯರು ಕ್ಯಾನ್ಸರ್ ರೋಗದ ಗುಣಲಕ್ಷಣಗಳ ಬಗ್ಗೆ ಅರಿವು ಹೊಂದಿದ್ದಲ್ಲಿ ಪ್ರಾರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಗುಣಪಡಿಸಿಕೊಳ್ಳಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರನ್ನು ಕಾಡುತ್ತಿದೆ. ಈ ರೋಗ ಹೊಂದಿದವರು ಉತ್ತಮ ಮನೋಬಲವನ್ನು ಹೊಂದುವುದರ ಜೊತೆಗೆ ಆತ್ಮಸ್ಥೈ ರ್ಯವನ್ನು ಹೊಂದಿ, ಸೂಕ್ತ ಬದಲಾವಣೆ ಕ್ರಮಗಳನ್ನು ಅನುಸರಿಸುವ ಮೂಲಕ ರೋಗದ ಭಯಾನಕತೆಯಿಂದ ಬಿಡುಗಡೆ ಪಡೆಯಬಹುದು ಎಂದರು.
ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹದಂತೆ ಕ್ಯಾನ್ಸರ್ ರೋಗ ಕೂಡ ಒಂದಾಗಿದೆ ಎಂದ ಅವರು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವಂತೆ ಪ್ರತಿಯೊಬ್ಬರೂ ಉತ್ತಮ ಅಭ್ಯಾಸ, ಹವ್ಯಾಸ ಹಾಗೂ ಉತ್ತಮ ಜೀವನಶೈಲಿಯಿಂದ ಕ್ಯಾನ್ಸರ್ ರೋಗದಿಂದ ದೂರ ಇರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಭಾಸ್ಕರ್ ಶೆಟ್ಟಿ ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್‌ಕ್ರಾಸ್‌ನ ಉಡುಪಿ ಜಿಲ್ಲಾ ಘಟಕದ ಪ್ರಥಮ ಚಿಕಿತ್ಸಾ ತರಬೇತುದಾರ ಹಾಗೂ ಎಲುಬು ಮತ್ತು ಮೂಳೆ ತಜ್ಞ ಡಾ. ಸುರೇಶ್ ಶೆಣೈ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ ಮತ್ತು ಪ್ರೊ.ಜಯಲಕ್ಷೀ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಘಟಕದ ಪ್ರೋಗ್ರಾಮ್ ಆಫೀಸರ್ ಪ್ರೊ. ಶೋಭಾ ಎಂ. ಸ್ವಾಗತಿಸಿದರು.