×
Ad

ಮಂಗಳೂರು; ಸುಲಿಗೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ

Update: 2022-03-16 20:14 IST

ಮಂಗಳೂರು : ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಸುಲಿಗೆ ಮಾಡಿದ ಆರೋಪಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಕಠಿಣ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಸ್ಬಾ ಬೆಂಗ್ರೆಯ ಸರ್ಫರಾಜ್ ಆಲಿಯಾಸ್ ಚಪ್ಪು ಶಿಕ್ಷೆಗೊಳಗಾದ ಅಪರಾಧಿ. ಮೂಲತಃ ಒರಿಸ್ಸಾದ ಸಂಗ್ರಮನಾಥ ಶರ್ಮ ಎಂಬವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ೨೦೧೭ರ ಜು.೨೮ರಂದು ಮಧ್ಯಾಹ್ನ ೨ ಗಂಟೆಗೆ ಬೈಕಂಪಾಡಿ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಬಾಡಿಗೆ ಮನೆಯ ಕಡೆಗೆ ಹೋಗುತ್ತಿದ್ದರು. ಆ ಸಂದರ್ಭ ಆರೋಪಿಗಳಾದ ಸರ್ಫರಾಜ್ ಆಲಿಯಾಸ್ ಚಪ್ಪು ಮತ್ತು ಸೈಫುಲ್ ಫರಾಜ್ ಎಂಬವರು ಸಮಯ ಕೇಳುವ ನೆಪದಲ್ಲಿ ಸಂಗ್ರಮನಾಥ ಶರ್ಮರ ಹಿಂದಿನಿಂದ ತೆರಳಿ ಮೊಬೈಲ್ ಹಾಗೂ ಹಣ ಕೊಡಬೇಕೆಂದು, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು ಎಂದು ಆರೋಪಿಸಲಾಗಿತ್ತು.

ಸಂಗ್ರಮನಾಥ ಅದಕ್ಕೆ ಒಪ್ಪದಿದ್ದಾಗ ಆರೋಪಿಗಳು ಅವರ ಕೈಗಳನ್ನು ಹಿಡಿದೆಳೆದು ಅವರನ್ನು ಕೊಂದು ಸುಲಿಗೆ ಮಾಡುವ ಉದ್ದೇಶದಿಂದ ರೈಲ್ವೆ ಟ್ರ್ಯಾಕ್‌ಗೆ ಅಳವಡಿಸುವ ಕಬ್ಬಿಣದ ಲಾಕ್‌ನಿಂದ ತಲೆಗೆ ಹೊಡೆದು ಮೊಬೈಲ್ ಪೋನ್ ಮತ್ತು ೨,೫೦೦ ರೂ. ನಗದು ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ವೇಳೆ ಪೊಲೀಸ್ ನಿರೀಕ್ಷಕರಾಗಿದ್ದ ರಫೀಕ್ ಕೆ.ಎಂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇನ್ನೋರ್ವ ಆರೋಪಿ ಸೈಫುಲ್ ಫರಾಜ್ ತಲೆಮರೆಸಿಕೊಂಡ ಕಾರಣ ಒಂದನೇ ಆರೋಪಿ ವಿರುದ್ಧ ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿತ್ತು.

ಸರಕಾರದ ಪರವಾಗಿ ೧೩ ಮಂದಿ ಸಾಕ್ಷಿದಾರರ ವಿಚಾರಣೆ ನಡೆದಿದ್ದು, ಆರೋಪಿಯ ಅಪರಾಧ ರುಜುವಾತಾಗಿದೆ ಎಂದು ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ  ತೀರ್ಪು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಕಲಂ ೩೯೨ ಮತ್ತು ೩೯೭ರಡಿ ಎಸಗಿದ ಅಪರಾಧಕ್ಕೆ ೭ ವರ್ಷ ಕಠಿನ ಸಜೆ ಮತ್ತು ೫,೦೦೦ ರೂ. ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ ೨ ತಿಂಗಳ ಸಾದಾ ಸಜೆ, ಕಲಂ ೩೯೪ರಡಿ ಎಸಗಿದ ಅಪರಾಧಕ್ಕೆ ೭ ವರ್ಷ ಕಠಿನ ಸಜೆ ಮತ್ತು ೫,೦೦೦ ರೂ. ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ ೨ ತಿಂಗಳ ಸಾದಾ ಸಜೆ ವಿಧಿಸಿ ಹಾಗೂ ಆರೋಪಿ ದಂಡದ ಹಣ ಪಾವತಿಸಿದರೆ ಅದರಲ್ಲಿ ೭,೦೦೦ ರೂ.ಗಳನ್ನು ದೂರುದಾರರಿಗೆ ಪಾವತಿಸುವಂತೆ ಹಾಗೂ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಮಾ.೧೫ರಂದು ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News