×
Ad

ಹಿಜಾಬ್ ಇಸ್ಲಾಮಿನ ಅತ್ಯಗತ್ಯ ವಿಧಿ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ; ಉಡುಪಿ ಮುಸ್ಲಿಮ್ ಧಾರ್ಮಿಕ ವಿದ್ವಾಂಸರು

Update: 2022-03-16 20:43 IST

ಉಡುಪಿ : ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನಿಕ ಮೌಲ್ಯಗಳ ಸ್ಪೂರ್ತಿಗೆ ತಕ್ಕುದಲ್ಲ. ಯಾವುದೇ ಧರ್ಮದ ಅತ್ಯಗತ್ಯ ಭಾಗ ಮತ್ತು ಯಾವುದೇ ಅಲ್ಲ ಎಂಬುದನ್ನು ಹೈಕೋರ್ಟ್ ತೀರ್ಮಾನಿಸಲು ಹೊರಟಿರುವುದು ಆಘಾತಕಾರಿಯಾಗಿದೆ. ಹಿಜಾಬ್ ಇಸ್ಲಾಮಿನ ಅತ್ಯಗತ್ಯ ವಿಧಿ ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಕುರಿತು ಸಮುದಾಯದಲ್ಲಿ ಒಮ್ಮತ ಇದೆ ಎಂದು ಉಡುಪಿ ಜಿಲ್ಲೆಯ ಮುಸ್ಲಿಮ್ ಧಾರ್ಮಿಕ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಪೆ ಜಾಮೀಯ ಮಸೀದಿಯ ಇಮಾಮ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ, ಹಿಜಾಬ್‌ಗೆ ಅನುಮತಿ ಕೊಡಿ ಎಂದು ನಾವು ಹೈಕೋರ್ಟಿನಲ್ಲಿ ಕೇಳಿದೆವು. ಆದರೆ ಹಿಜಾಬ್ ಧರ್ಮದ ಭಾಗವೇ ಅಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದು ನಮ್ಮ ಬೇಡಿಕೆ ಆಗಿರರಿಲ್ಲ ಎಂದರು.

ಈ ತೀರ್ಪು ಅಂತಿಮವಲ್ಲ. ನ್ಯಾಯಾಲಯವನ್ನು ಗೌರವಿಸುವುದರೊಂದಿಗೆ ಇರುವ ಅವಕಾಶಗಳ ಆಧಾರದ ಮೇಲೆ ಸಮುದಾಯವು ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಧಾರ್ಮಿಕ ಹಕ್ಕು ಮತ್ತು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಬಹುದೆಂಬ ಭರವಸೆ ನಮಗೆ ಇದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಇಸ್ಲಾಮ್ ಧರ್ಮದ ಗ್ರಂಥದಲ್ಲಿರುವ ಪಠ್ಯದ ಬಗ್ಗೆ ತಮ್ಮ ತಿಳುವಳಿಕೆಗೆ ಅನುಗುಣವಾಗಿ ವಿವರಣೆ ನೀಡಲು ಹೊರಟಿರುವ ಮೂಲಕ ನ್ಯಾಯಾಲಯ ಹೊಸ ಸಂಪ್ರದಾಯವನ್ನು ಪರಿಚಯಿಸುತ್ತಿದೆ. ಇದು ನ್ಯಾಯದ ಬೇಡಿಕೆಗೆ ಅನುಗುಣವಾಗಿಲ್ಲ. ಇದರಿಂದಾಗಿ ಧಾರ್ಮಿಕ ಹಕ್ಕು ಮಾತ್ರವಲ್ಲದೆ ಮಕ್ಕಳ ಶೈಕ್ಷಣಿಕ ಹಕ್ಕುಗಳೂ ಕಸಿಯಲ್ಪಡುತ್ತದೆ. ಮುಂದಿನ ತಲೆಮಾರನ್ನು ಸುಶಿಕ್ಷಿತರಾಗಿ ಸುವುದಕ್ಕಿಂತ ಸಮವಸ್ತ್ರವೇ ಮುಖ್ಯ ಎಂಬ ಸಂದೇಶವನ್ನು ನ್ಯಾಯಾಲಯ ನೀಡಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಸಮ್ಮಾನ್ ಕೌನ್ಸಿಲಿಂಗ್ ಸೆಂಟರ್ ಮುಖ್ಯಸ್ಥ ಮೌಲಾನ ಅಬ್ದುಲ್ಲತೀಫ್ ಮದನಿ, ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉಡುಪಿ ಜಾಮೀಯ ಮಸೀದಿಯ ಇಮಾಮ್ ಮೌಲಾನ ರಶೀದ್ ಅಹ್ಮದ್ ಉಮರಿ, ಇಂದ್ರಾಳಿ ನೂರಾನಿ ಮಸೀದಿ ಇಮಾಮ್ ಮೌಲಾನ ಮಸೀಹುಲ್ಲಾ ಖಾನ್ ಕಾಸ್ಮೀ, ಹೈದರಲಿ ಅಹ್ಸಾನಿ ಮುಸ್ಲಿಮಯಾರ್ ಮುಳೂರು, ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಂ.ಎ.ಬಾವು, ಶಾಂತಿನಗರ ಮಸೀದಿಯ ಧರ್ಮಗುರು ಶೌಕತ್ ಅಲಿ ರಝ್ವಿ, ಮೌಲಾನಾ ಝಮೀರ್ ಅಹ್ಮದ್ ರಶಾದಿ, ಮೌಲಾನ ಜಾವೇದ್ ಕಾಸ್ಮೀ ಉಪಸ್ಥಿತರಿದ್ದರು.

ʼʼಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆಯೇ ಹೊರತು ನಮಗೆ ನ್ಯಾಯ ಒದಗಿಸಿಲ್ಲ. ಒಂದು ಕಾಲದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿಲ್ಲ ಎಂಬ ಆರೋಪಗಳಿದ್ದವು. ಅದನ್ನು ದೂರ ಮಾಡಲು ಹಾಗೂ ನಮ್ಮ ಮಕ್ಕಳು ಯಾವುದರಲ್ಲಿ ಹಿಂದೆ ಇಲ್ಲ ಎಂಬುದನ್ನು ತೋರಿಸಲು ಸಂವಿಧಾನ ಹಾಗೂ ಧಾರ್ಮಿಕ ಬದ್ಧವಾದ ಉಡುಗೆ ತೊಡುಗೆ ಹಾಕಿಕೊಂಡು ಕಾಲೇಜಿಗೆ ಬರುವಾಗ ಸಮವಸ್ತ್ರವೇ ಮುಖ್ಯ ಎಂದು ಹೇಳಿ ಅವರನ್ನು  ಶಿಕ್ಷಣ ದಿಂದ ವಂಚಿತರನ್ನಾಗಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸರಕಾರ ಕೂಡ ಹೊಣೆಯಾಗುತ್ತದೆʼʼ.
-ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News