×
Ad

ಹಿಜಾಬ್; ಹೈಕೋರ್ಟ್ ತೀರ್ಪು ವಿರೋಧಿಸಿ ಗುರುವಾರ ಬಂದ್: ವಿವಿಧ ಸಂಘಟನೆಗಳ ಬೆಂಬಲ

Update: 2022-03-16 20:49 IST

ಮಂಗಳೂರು : ಹಿಜಾಬ್ ವಿಷಯದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ನಿರಾಶದಾಯಕವಾಗಿದೆ. ಈ ತೀರ್ಪನ್ನು ವಿರೋಧಿಸಿ ಮಾ.17ರಂದು ಅಮೀರ್ ಎ ಶರೀಯತ್‌ನ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿರುವ ಬಂದ್‌ಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಬೆಂಬಲ  ಸೂಚಿಸಿದ್ದಾರೆ.

ಮಾ.17ರಂದು ಎಲ್ಲರೂ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ನ್ಯಾಯಕ್ಕಾಗಿ ಒತ್ತಾಯಿಸಿ ಕರೆ ನೀಡಲಾದ ಈ ಬಂದ್ ಶಾಂತಿಯುತವಾಗಿರಬೇಕು. ಬಲವಂತದ ಬಂದ್ ನಡೆಸಬಾರದು. ಜಾಥಾ, ಮೆರವಣಿಗೆ ನಡೆಸಬಾರದು ಎಂದು ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.

ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ನಿರ್ಬಂಧ ಹೇರಿದ ಸರಕಾರದ ನಿಲುವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟಿನ ಅಸಂವಿಧಾನಿಕ ತೀರ್ಪನ್ನು ವಿರೋಧಿಸಿ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಗುರುವಾರ ನೀಡಿರುವ  ಕರ್ನಾಟಕ ಬಂದ್‌ಗೆ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.

ಸ್ವಯಂಪ್ರೇರಿತವಾಗಿ ನಡೆಯುವ ಈ ಬಂದ್‌ಗೆ ಎಲ್ಲಾ ವರ್ತಕರು, ವಿದ್ಯಾಸಂಸ್ಥೆಗಳು, ಅಟೋ, ಟ್ಯಾಕ್ಸಿ ಮತ್ತು ಬಸ್ ಚಾಲಕರು, ಮಾಲಕರು, ಕಾರ್ಮಿಕ ಸಂಘಟನೆಗಳು ಬೆಂಬಲಿಸಬೇಕು ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆಗ್ರಹಿಸಿದ್ದಾರೆ.

ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್, ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್ (ವಿಮ್) ಕರ್ನಾಟಕ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಷ್ಟ್ರೀಯ ಸಮಿತಿಯ ಸದಸ್ಯ ಜಾಫರ್ ಸಾದಿಕ್ ಫೈಝಿ ಬೆಂಬಲ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News