ಕೌನ್ಸಿಲ್ ಆಫ್ ಯುರೋಪ್ ತ್ಯಜಿಸುವುದಾಗಿ ರಶ್ಯ ಘೋಷಣೆ
ಮಾಸ್ಕೊ, ಮಾ.16: ಕೌನ್ಸಿಲ್ ಆಫ್ ಯುರೋಪ್(ಸಿಒಇ)ನಿಂದ ರಶ್ಯವನ್ನು ಉಚ್ಛಾಟಿಸಬೇಕೆಂಬ ಇತರ ಸದಸ್ಯರ ಆಗ್ರಹದ ಮಧ್ಯೆಯೇ ಸಮಿತಿಯಿಂದ ಹೊರಬರುವುದಾಗಿ ರಶ್ಯ ಬುಧವಾರ ಘೋಷಿಸುವ ಮೂಲಕ ಸಂಭಾವ್ಯ ಮುಖಭಂಗದಿಂದ ತಪ್ಪಿಸಿಕೊಂಡಿದೆ.
2ನೇ ವಿಶ್ವಯುದ್ಧದ ಬಳಿಕ ಯುರೋಪ್ನಲ್ಲಿ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಗಳನ್ನು ಎತ್ತಿಹಿಡಿಯಲು 1949ರಲ್ಲಿ ಸ್ಥಾಪಿಸಲಾಗಿರುವ ಕೌನ್ಸಿಲ್ ಆಫ್ ಯುರೋಪ್ನಲ್ಲಿ 47 ಸದಸ್ಯ ದೇಶಗಳಿವೆ.
ಉಕ್ರೇನ್ ವಿರುದ್ಧ ರಶ್ಯ ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ರಶ್ಯವನ್ನು ಸಮಿತಿ ಸದಸ್ಯತ್ವದಿಂದ ಉಚ್ಛಾಟಿಸಬೇಕೆಂಬ ಆಗ್ರಹ ಬಲವಾಗಿರುವಂತೆಯೇ, ಸಮಿತಿಯಿಂದ ಹೊರಬರುವುದಾಗಿ ರಶ್ಯದ ವಿದೇಶಾಂಗ ಸಚಿವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿಗೆ ತಿಳಿಯಪಡಿಸಿದ್ದಾರೆ. ಇದರೊಂದಿಗೆ ಯುರೋಪಿಯನ್ ಮಾನವ ಹಕ್ಕುಗಳ ಒಡಂಬಡಿಕೆ ಜತೆ ಇನ್ನು ಮುಂದೆ ರಶ್ಯಕ್ಕೆ ಸಂಬಂಧ ಇರುವುದಿಲ್ಲ.
ಅಲ್ಲದೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆಯೂ ರಶ್ಯ ನಾಗರಿಕರು ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. 1960ರಲ್ಲಿ ಗ್ರೀಸ್ ದೇಶ ಸಿಒಇಯಿಂದ ತಾತ್ಕಾಲಿಕವಾಗಿ ಹೊರಬಂದ ಬಳಿಕ, ಇಂತಹ 2ನೇ ಪ್ರಕರಣ ಇದಾಗಿದೆ. ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಮರುದಿನವೇ ರಶ್ಯವನ್ನು ಎಲ್ಲಾ ಪ್ರಾತಿನಿಧ್ಯ ಹಕ್ಕುಗಳಿಂದ ಅಮಾನತುಗೊಳಿಸಲಾಗಿದೆ. ಉಕ್ರೇನ್ ಮೇಲಿನ ರಶ್ಯ ಆಕ್ರಮಣವನ್ನು ಸಿಒಇ ಮುಖಂಡರಾಗಿ ದೃಢವಾಗಿ ಖಂಡಿಸಿದ್ದೆವು. ಇದೀಗ ರಶ್ಯ ವಿದೇಶ ಸಚಿವಾಲಯದ ಪತ್ರದ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಗುರುವಾರ ಬೆಳಿಗ್ಗೆ ಸಮಿತಿಯ ಮಹಾಸಭೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಪರವಾಗಿರುವ ರಾಷ್ಟ್ರದ ಮೇಲೆ ಆಕ್ರಮಣ ಎಸಗಿರುವ ರಶ್ಯಕ್ಕೆ ಸದಸ್ಯತ್ವದಲ್ಲಿ ಮುಂದುವರಿಯಲು ಯಾವುದೇ ಹಕ್ಕು ಇಲ್ಲ, ರಶ್ಯವನ್ನು ಸಿಒಇಯಿಂದ ಉಚ್ಛಾಟಿಸಬೇಕೆಂದು ಉಕ್ರೇನ್ ಕೂಡಾ ಆಗ್ರಹಿಸಿತ್ತು.