ದಿಲ್ಲಿ ಹಿಂಸಾಚಾರ: ಯುಎಪಿಎ ಪ್ರಕರಣದಲ್ಲಿ ಗುಲ್ಫಿಶಾ ಫಾತಿಮಾ ಮತ್ತು ತಸ್ಲೀಂ ಅಹ್ಮದ್‌ ಗೆ ಜಾಮೀನು ನಿರಾಕರಿಸಿದ ಕೋರ್ಟ್

Update: 2022-03-17 08:02 GMT

ಹೊಸದಿಲ್ಲಿ: 2020ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿದ್ಯಾರ್ಥಿ-ಕಾರ್ಯಕರ್ತೆ ಗುಲ್ಫಿಶಾ ಫಾತಿಮಾ ಮತ್ತು ಶೈಕ್ಷಣಿಕ ಸಲಹೆಗಾರ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಫಾತಿಮಾ ಮತ್ತು ಅಹ್ಮದ್ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ(UAPA) ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಫೆಬ್ರವರಿ 23 ಮತ್ತು ಫೆಬ್ರವರಿ 26, 2020 ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಬೆಂಬಲಿಗರು ಮತ್ತು ಕಾನೂನನ್ನು ವಿರೋಧಿಸುವವರ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರವು 53 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.

ಫಾತಿಮಾ ಮತ್ತು ಅಹ್ಮದ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸುವ ಆದೇಶದಲ್ಲಿ, ನ್ಯಾಯಾಧೀಶ ಅಮಿತಾಭ್ ರಾವತ್, "ಅವರಿಬ್ಬರ ವಿರುದ್ಧದ ಆರೋಪಗಳನ್ನು ಪ್ರಾಥಮಿಕವಾಗಿ ನಿಜವೆಂದು ನಂಬಲು ಸಮಂಜಸವಾದ ಕಾರಣಗಳಿವೆ" ಎಂದು ಗಮನಿಸಿದರು. ಯುಎಪಿಎ ಕಾಯ್ದೆಯ ಸೆಕ್ಷನ್ 43ಡಿ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 437 ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಫಾತಿಮಾ ಮತ್ತು ಅಹ್ಮದ್‌ಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದ್ದು, ಎರಡೂ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲು ನ್ಯಾಯಾಲಯವು ಒಂದೇ ಕಾರಣಗಳನ್ನು ಉಲ್ಲೇಖಿಸಿದೆ.

ಆರೋಪಿಗಳ ವಕೀಲರು ಜೂನ್ 15 ರಂದು ವಿದ್ಯಾರ್ಥಿ ಹೋರಾಟಗಾರರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದಿಲ್ಲಿ ಹೈಕೋರ್ಟ್ ನೀಡಿದ ಜಾಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News