×
Ad

ಪರ್ಯಾಯ ಮಾಧ್ಯಮಕ್ಕೂ ಅಪಾಯ!

Update: 2022-03-18 00:05 IST

ಮುದ್ರಣ ಮಾಧ್ಯಮಗಳು ಮತ್ತು ಟಿವಿ ವಾಹಿನಿಗಳು ಪೂರ್ಣ ಪ್ರಮಾಣದಲ್ಲಿ ಪ್ರಭುತ್ವದ ಮುಖವಾಣಿಯಾಗಿ, ಅದರ ವೈಫಲ್ಯಗಳನ್ನೆಲ್ಲ ಮುಚ್ಚಿ ಹಾಕತೊಡಗಿದಾಗ ಪರ್ಯಾಯ ಮಾಧ್ಯಮವಾಗಿ ಹುಟ್ಟಿಕೊಂಡದ್ದು ಸಾಮಾಜಿಕ ಜಾಲ ತಾಣಗಳು. ಮುದ್ರಣ ಮಾಧ್ಯಮಗಳು ತಾವು ಮುದ್ರಿಸಿದ್ದೇ ಸತ್ಯ ಎಂಬಂತೆ ಸರಕಾರಕ್ಕೆ ಪೂರಕವಾಗಿ ‘ಸಬ್ ಚಂಗಾಸಿ’ ಸುದ್ದಿಗಳನ್ನು ಮುಖಪುಟದಲ್ಲಿ ಛಾಪಿಸ ತೊಡಗಿದಾಗ, ಸಂತ್ರಸ್ತರು ಅಸಹಾಯಕರಾದರು. ಯಾವುದೇ ಮಾಧ್ಯಮಗಳು ತನ್ನನ್ನು ವಿಮರ್ಶಿಸತೊಡಗಿದರೆ ಒಂದೋ ಅದನ್ನು ದುಡ್ಡಿನಿಂದ ಕೊಂಡುಕೊಳ್ಳುವುದು ಇಲ್ಲವೇ ಅಧಿಕಾರಗಳ ಮೂಲಕ ಅದನ್ನು ದಮನಿಸುವುದನ್ನು ಸರಕಾರ ಕೆಲವು ವರ್ಷಗಳಿಂದ ನಡೆಸುತ್ತಾ ಬರುತ್ತಿದೆ. ಜನಸಾಮಾನ್ಯರು ಸರಕಾರವನ್ನು ವಿರೋಧಿಸಿ ನೀಡುವ ಹೇಳಿಕೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲವಾದುದರಿಂದ, ಸರಕಾರದ ವಿರುದ್ಧವಾದ ಧ್ವನಿಯೇ ಇಲ್ಲ ಎಂದು ಜನರನ್ನು ನಂಬಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಸತ್ಯ ಸಂಗತಿಗಳನ್ನು ಮುಚ್ಚಿಟ್ಟು, ಉದ್ವಿಗ್ನಕಾರಿ ಸುಳ್ಳುಗಳನ್ನು ಮಾಧ್ಯಮಗಳು ಹರಡಿ ಸಮಾಜವನ್ನು ಕೆಡಿಸತೊಡಗಿದವು. ಕನಿಷ್ಠ ಜನಸಾಮಾನ್ಯರ ಸ್ಪಷ್ಟೀಕರಣಗಳನ್ನು ಕೂಡ ಪ್ರಕಟಿಸಲು ಈ ಪತ್ರಿಕೆಗಳು ಹಿಂದೇಟು ಹಾಕಿದವು. ಹಲವು ಕೋಮುಗಲಭೆಗಳು ಪತ್ರಿಕೆಗಳೇ ನಡೆಸಿದ ವ್ಯವಸ್ಥಿತ ಸಂಚುಗಳಾಗಿದ್ದವು. ಇಂತಹ ಸಂದರ್ಭದಲ್ಲಿ ಜನರಿಗೆ ಸತ್ಯವನ್ನು, ವಾಸ್ತವವನ್ನು ತಲುಪಿಸುವ ಮಾಧ್ಯಮಗಳೇ ಇಲ್ಲದೆ ಸಂವಿಧಾನಪರವಾಗಿರುವ ಶಕ್ತಿಗಳು ಹತಾಶವಾಗಿದ್ದವು. ಆಗ ತೆರೆದುಕೊಂಡದ್ದು ಸಾಮಾಜಿಕ ಜಾಲತಾಣಗಳು.

ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳು. ಜೊತೆಜೊತೆಗೆ ಬ್ಲಾಗ್ ಮತ್ತು ವೈಬ್‌ಸೈಟ್‌ಗಳು. ಮೊದಲನೆಯದಾಗಿ ಮುದ್ರಣ ಮಾಧ್ಯಮಗಳು ಹರಡುವ ಸುಳ್ಳುಗಳನ್ನು ಸಾಮಾಜಿಕ ಮಾಧ್ಯಮಗಳು ಬಯಲು ಮಾಡಿ ಅವುಗಳನ್ನು ನಗ್ನವಾಗಿ ನಿಲ್ಲಿಸತೊಡಗಿದವು. ಟಿವಿ ವಾಹಿನಿಗಳು ಪ್ರಸಾರ ಮಾಡುವ ಯಾವುದೇ ಸುಳ್ಳುಸುದ್ದಿಗಳನ್ನು ಸಾಕ್ಷಾಧಾರ ಸಹಿತ ಅವುಗಳನ್ನು ಅಲ್ಲಗಳೆಯುವ ಶಕ್ತಿ ಈ ಪರ್ಯಾಯ ಮಾಧ್ಯಮಗಳಿಗಿದ್ದವು. ಕನಿಷ್ಠ ‘ತಾನು ಪ್ರಸಾರ ಮಾಡಿದ್ದು, ಮುದ್ರಣ ಮಾಡಿದ್ದೇ ಅಂತಿಮ ಸತ್ಯ. ಅವುಗಳನ್ನೇ ನೀವು ನಂಬಬೇಕು’ ಎನ್ನುವ ದುರಹಂಕಾರಗಳಿಗೆ ಈ ಸಾಮಾಜಿಕ ಜಾಲತಾಣಗಳು ಕಡಿವಾಣ ಹಾಕಿದವು. ಮಾಧ್ಯಮಗಳು ಪ್ರಸಾರ ಮಾಡಿರುವುದೆಲ್ಲ ಸತ್ಯವಾಗಿರಬೇಕಾಗಿಲ್ಲ ಎನ್ನುವುದು ಈ ಪರ್ಯಾಯ ಮಾಧ್ಯಮಗಳಿಂದ ಜನರು ಶೀಘ್ರವಾಗಿ ಅರಿತುಕೊಂಡರು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕೆಲವು ರಾಜಕೀಯ ಮತ್ತು ಕೋಮುವಾದಿ ಸಂಘಟನೆಗಳು ವದಂತಿಗಳನ್ನು ವ್ಯಾಪಕವಾಗಿ ಹರಡುತ್ತಿದ್ದವು, ಅವುಗಳನ್ನು ಸುಳ್ಳು ಎಂದು ಸಾಬೀತು ಮಾಡುವ ಅಧಿಕಾರವಂತೂ ಜನರ ಕೈಯಲ್ಲಿರುತ್ತಿತ್ತು. ಒಟ್ಟಿನಲ್ಲಿ ನಮಗೆ ಮಾಧ್ಯಮಗಳೇ ಇಲ್ಲ ಎನ್ನುವ ಸಂತ್ರಸ್ತರ ಕೊರಗನ್ನು ಸಾಮಾಜಿಕ ಜಾಲತಾಣ ನಿವಾರಿಸಿದ್ದಂತೂ ಸತ್ಯ.

ವಿಪರ್ಯಾಸವೆಂದರೆ, ಟಿವಿ, ಮುದ್ರಣ ಮಾಧ್ಯಮಗಳನ್ನು ನಿಯಂತ್ರಿಸಿದ ಶಕ್ತಿಗಳು ಇದೀಗ ಪರ್ಯಾಯ ಮಾಧ್ಯಮಗಳೆಂದು ಕರೆಸಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮಗಳನ್ನೂ ನಿಯಂತ್ರಿಸಲು ಮುಂದಾಗಿವೆ. ಅಷ್ಟೇ ಅಲ್ಲ, ರಾಜಕೀಯ ಒತ್ತಡ, ಹಣ ಇತ್ಯಾದಿಗಳಿಗೆ ಬಲಿಯಾಗಿ ಫೇಸ್‌ಬುಕ್‌ನಂತಹ ಸಂಸ್ಥೆಗಳು ದ್ವೇಷವನ್ನು ಹರಡುವುದಕ್ಕೆ, ನಿರ್ದಿಷ್ಟ ರಾಜಕೀಯ ಪಕ್ಷಗಳ ತುತ್ತೂರಿಯಾಗುವುದಕ್ಕೆ ತೊಡಗಿದೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗೂ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಎರಡು ಅಂಶಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡತೊಡಗಿವೆ. ರಿಲಯನ್ಸ್ ಒಡೆತನದ ಮಾಧ್ಯಮ ಸಂಸ್ಥೆಯೊಂದು ಫೇಸ್‌ಬುಕ್ ಮೂಲಕ ಬಿಜೆಪಿ ಪರವಾಗಿ ವ್ಯಾಪಕ ಚುನಾವಣಾ ಪ್ರಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ರಿಲಯನ್ಸ್ ಸಂಸ್ಥೆಗೂ ಸರಕಾರಕ್ಕೂ ಇರುವ ಸಂಬಂಧವನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಇಡೀ ಸರಕಾರವನ್ನು ಎರಡು ಕಾರ್ಪೊರೇಟ್ ಸಂಸ್ಥೆಗಳು ನಿಯಂತ್ರಿಸುತ್ತಿರುವ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತವೆ. ಮತ್ತು ಚುನಾವಣೆಯ ಸಂದರ್ಭದಲ್ಲಿ ಈ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹೇಗೆ ಆ ಸರಕಾರವನ್ನೇ ಮತ್ತೆ ಅಧಿಕಾರಕ್ಕೆ ತರುತ್ತಿವೆ ಎನ್ನುವುದನ್ನು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ನಡೆಸಿದ ತನಿಖಾ ವರದಿಯಿಂದ ಬೆಳಕಿಗೆ ಬಂದಿದೆ.

ಇದಿಷ್ಟೇ ಅಲ್ಲ. ಫೇಸ್‌ಬುಕ್‌ನಲ್ಲಿ ಬಿಜೆಪಿಗೆ ಕಡಿಮೆ ದರದಲ್ಲಿ ಚುನಾವಣಾ ಜಾಹೀರಾತುಗಳನ್ನು ಒದಗಿಸುತ್ತಿರುವ ಅಂಶವನ್ನೂ ಟಿಆರ್‌ಸಿ ಮತ್ತು ಆ್ಯಂಡ್ ವಾಚ್‌ನ ತನಿಖಾ ವರದಿಯಿಂದ ಬಹಿರಂಗವಾಗಿದೆ. ಜಾಹೀರಾತನ್ನು 10 ಲಕ್ಷ ಬಾರಿ ಪ್ರದರ್ಶಿಸಲು ಬಿಜೆಪಿಗೆ ವಿಧಿಸಿದ ದರಕ್ಕಿಂತ ಶೇ. 29ರಷ್ಟು ಹೆಚ್ಚು ದರವನ್ನು ಇತರ ಪಕ್ಷಗಳು ಪಾವತಿ ಮಾಡಬೇಕಾಗಿತ್ತು. ಬಿಜೆಪಿಯನ್ನು ಪ್ರಚಾರ ಮಾಡಲು, ಅದರ ಕಾರ್ಯಸಾಧ್ಯತೆ ಉತ್ತೇಜಿಸಲು ಹಾಗೂ ಚುನಾವಣೆಯಲ್ಲಿ ಮತದಾರರನ್ನು ತಲುಪಲು ಅಲ್ಲದೆ ಪ್ರತಿಪಕ್ಷ ಹಾಗೂ ಅದರ ಅಭ್ಯರ್ಥಿಗಳನ್ನು ಪ್ರಚಾರ ಮಾಡುವ ಸರಿ ಸುಮಾರು ಎಲ್ಲ ಇಂತಹ ಜಾಹೀರಾತುಗಳನ್ನು ನಿರ್ಬಂಧಿಸಲು ದೊಡ್ಡ ಸಂಖ್ಯೆಯ ನಕಲಿ ಜಾಹೀರಾತುದಾರರು ಹಾಗೂ ಪೋಷಕ ಜಾಹೀರಾತುದಾರರಿಗೆ ಫೇಸ್‌ಬುಕ್ ಅವಕಾಶ ನೀಡಿರುವುದನ್ನೂ ಸಂಸ್ಥೆ ಬಹಿರಂಗಪಡಿಸಿದೆ. ಅಂದರೆ ಫೇಸ್‌ಬುಕ್ ತನ್ನ ಲಾಭಕ್ಕಾಗಿ ಭಾರತದ ರಾಜಕೀಯದೊಳಗೆ ನೇರ ಹಸ್ತಕ್ಷೇಪ ನಡೆಸುತ್ತಿದೆ. ಭವಿಷ್ಯದಲ್ಲಿ ಇದು ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಮೇಲೆ ಖಂಡಿತವಾಗಿಯೂ ಗಂಭೀರ ಪರಿಣಾಮ ಬೀರಲಿದೆ.

ಫೇಸ್‌ಬುಕ್‌ನೊಳಗೆ ಈಗಾಗಲೇ ಕೆಲವು ರಾಜಕೀಯ ಹಿತಾಸಕ್ತಿಗಳುಳ್ಳ ಅಭ್ಯರ್ಥಿಗಳು ನುಸುಳಿ ತಮ್ಮ ಮೂಗಿನ ನೇರಕ್ಕೆ ಅದರ ಕಾನೂನನ್ನು ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿವೆ. ಮೇಲ್‌ಜಾತಿ ಶೋಷಣೆಯ ಕುರಿತಂತೆ, ಸರಕಾರದ ಜನವಿರೋಧಿ ನೀತಿಗಳ ಕುರಿತಂತೆ ಬರೆಯುವ ಸದಸ್ಯರನ್ನು ಗುರುತಿಸಿ ಅವರ ಮೇಲೆ ಕಾರಣಗಳಿಲ್ಲದೆ ನಿರ್ಬಂಧಗಳನ್ನು ಹೇರುವ ಕೃತ್ಯಗಳು ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಫೇಸ್‌ಬುಕ್‌ನ್ನು ದ್ವೇಷ ಮತ್ತು ಕೋಮುಗಲಭೆಗಳನ್ನು ಹರಡಲು ಪ್ರಯತ್ನಿಸುವ ಪೇಜ್‌ಗಳನ್ನು, ಸದಸ್ಯರನ್ನು ಪರೋಕ್ಷವಾಗಿ ಪೋಷಿಸುವ ಕೆಲಸವೂ ನಡೆಯುತ್ತಿದೆ. ಯಾವುದನ್ನು ಪರ್ಯಾಯ ಮಾಧ್ಯಮ ಎಂದು ಭಾವಿಸಲಾಗಿತ್ತೋ ಅದನ್ನು ಕೂಡ ಜನಸಾಮಾನ್ಯರಿಂದ ಅಪಹರಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ವಿರುದ್ಧ ಜಾಗೃತಗೊಳ್ಳಬೇಕು ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಫೇಸ್‌ಬುಕ್ ಸಂಸ್ಥೆಯ ಮೇಲೆ ಒತ್ತಡಗಳನ್ನು ಹೇರಬೇಕಾದ ಅಗತ್ಯವಿದೆ. ಇಲ್ಲ ವಾದರೆ ಜನರನ್ನು ತಲುಪುವ ಅಳಿದುಳಿದ ದಾರಿಗಳು ನಮಗೆ ಇಲ್ಲವಾಗಿ ಬಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News