ಆಹಾರ ಭದ್ರತೆ ಸಾರ್ವತ್ರಿಕಗೊಳಿಸಲು ಪ್ರಧಾನಿಗೆ ‘ದಿ ರೈಟ್ ಟು ಫುಡ್ ಕ್ಯಾಂಪೇನ್’ ಆಗ್ರಹ

Update: 2022-03-17 18:08 GMT

ಹೊಸದಿಲ್ಲಿ, ಮಾ. 17: ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಮಾಜದಲ್ಲಿ ಮುಖ್ಯವಾಗಿ ಆರ್ಥಿಕ ದುರ್ಬಲರು ಹಾಗೂ ಅವಗಣನೆಗೆ ಒಳಗಾದವರಲ್ಲಿ ಆದಾಯ ಇಳಿಕೆ ಹಾಗೂ ತೀವ್ರ ಆಹಾರ ಅಭದ್ರತೆಯ ಬಿಕ್ಕಟ್ಟು ಉಂಟಾಗಿರುವ ಕುರಿತು ‘ದಿ ರೈಟ್ ಟು ಫುಡ್ ಕ್ಯಾಂಪೇನ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. 

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅನ್ನು ಈ ತಿಂಗಳ ನಂತರವೂ ವಿಸ್ತರಿಸಬೇಕು ಎಂದು ಅದು ಮನವಿ ಮಾಡಿದೆ. 

ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ ಹಾಗೂ ಇತರ ಹಲವು ನೆಟ್ವರ್ಕ್, ಸಂಘಟನೆಗಳ ಸಹಯೋಗದೊಂದಿಗೆ 2021 ಡಿಸೆಂಬರ್‌ ನಿಂದ 2022 ಜನವರಿ ವರೆಗೆ 14 ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಈ ಅಚ್ಚರಿ ಹುಟ್ಟಿಸುವ ವಾಸ್ತವ ಬಹಿರಂಗಗೊಂಡಿದೆ ಎಂದು ‘ದಿ ರೈಟ್ ಟು ಫುಡ್ ಕ್ಯಾಂಪೇನ್’ ತಿಳಿಸಿದೆ. 
ಕೊರೋನ ಸಾಂಕ್ರಾಮಿಕ ರೋಗದ ಪೂರ್ವದ ಅವಧಿಗೆ ಹೋಲಿಸಿದರೆ ತಮ್ಮ ಆದಾಯ ಇಳಿಕೆಯಾಗಿದೆ ಎಂದು ಸುಮಾರು ಶೇ. 66 ಜನರು ಹೇಳಿದ್ದಾರೆ. ಕೆಲವು ರೀತಿಯ ಆಹಾರದ ಅಭದ್ರತೆ ಉಂಟಾಗಿದೆ ಎಂದು ಶೇ. 80 ಜನರು ತಿಳಿಸಿದ್ದಾರೆ. ಶೇ. 25 ಜನರು ಹಣ ಅಥವಾ ಇತರ ಸಂಪನ್ಮೂಲಗಳ ಕೊರತೆಯಿಂದ ಊಟ ಬಿಟ್ಟುಬಿಡುವುದು, ಸಾಮಾನ್ಯಕ್ಕಿಂತ ಕಡಿಮೆ ತಿನ್ನುವುದು, ಹಸಿವಿನಿಂದಲೇ ಮಲಗುವುದು ಮೊದಲಾದ ರೀತಿಯಲ್ಲಿ ಗಂಭೀರ ಆಹಾರದ ಅಭದ್ರತೆ ಎದುರಿಸಿದ್ದೇವೆ ಎಂದು ಹೇಳಿದ್ದಾರೆ. 

ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಹಾಗೂ ಪಿಎಂಜಿಕೆವೈ ಅಡಿಯಲ್ಲಿ ಹೆಚ್ಚುವರಿ ಧಾನ್ಯ ಪೂರೈಕೆ ಜೀವಾಧಾರವಾಗಿತ್ತು ಹಾಗೂ ಕೆಲವೊಮ್ಮೆ ಆಹಾರದ ಏಕೈಕ ಮೂಲವಾಗಿತ್ತು ಎಂದು ಹೇಳಿರುವುದಾಗಿ ಅದು ತಿಳಿಸಿದೆ.

 ‘‘2022 ಮಾರ್ಚ್ ಬಳಿಕ ಪಿಎಂಜಿಕೆಎವೈ ಅಡಿಯ ಹೆಚ್ಚುವರಿ ಧಾನ್ಯ ಪೂರೈಕೆ ಕೂಡ ಸ್ಥಗಿತಗೊಳ್ಳುವುದರೊಂದಿಗೆ ದೇಶದಲ್ಲಿ ಹಸಿವು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹೊಸ ಕೋವಿಡ್ ಅಲೆ ಕಂಡುಬಂದಿಲ್ಲ. ನಿರ್ಬಂಧ, ಲಾಕ್ಡೌನ್ ಅನ್ನು ಹಿಂಪಡೆಯಲಾಗಿದೆ. ಇದರಿಂದ ಆರ್ಥಿಕತೆ, ಜನರ ಆದಾಯ ಹಾಗೂ ಅನುಭೋಗ ಕೋವಿಡ್ ಸಾಕ್ರಾಮಿಕ ರೋಗ ಪೂರ್ವ ಮಟ್ಟದ ಸಮೀಪಕ್ಕೆ ಬಂದಿದೆ’’ ಎಂದು ‘ರೈಟ್ ಟು ಫುಡ್ ಕ್ಯಾಂಪೇನ್’ ತನ್ನ ಪತ್ರದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News