ರಶ್ಯಾದಿಂದ ತೈಲ ಖರೀದಿಗೆ ಮುಂದಾದ ಭಾರತ: ವಿಚಾರವನ್ನು ʼರಾಜಕೀಯಗೊಳಿಸಬಾರದುʼ ಎಂದ ಸರಕಾರಿ ಮೂಲಗಳು

Update: 2022-03-18 16:03 GMT
photo courtesy:twitter

ಹೊಸದಿಲ್ಲಿ,ಮಾ.18: ಭಾರತದ ಕಾನೂನುಬದ್ಧ ಇಂಧನ ವಹಿವಾಟುಗಳನ್ನು ರಾಜಕೀಯಗೊಳಿಸಬಾರದು ಮತ್ತು ತೈಲದಲ್ಲಿ ಸ್ವಾವಲಂಬಿಯಾಗಿರುವ ಅಥವಾ ಖುದ್ದು ರಶ್ಯದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳು ನಿರ್ಬಂಧಿತ ವ್ಯಾಪಾರವನ್ನು ಪ್ರತಿಪಾದಿಸುವಂತಿಲ್ಲ ಎಂದು ಸರಕಾರದ ಮೂಲಗಳು ಹೇಳಿವೆ. 

ಭಾರತವು ರಶ್ಯದಿಂದ ತೈಲವನ್ನು ಆಮದು ಮಾಡಿಕೊಳ್ಳುವುದು ತನ್ನ ನಿರ್ಬಂಧಗಳನ್ನು ಉಲ್ಲಂಘಿಸುವುದಿಲ್ಲ, ಆದರೆ ಅದು ಉಕ್ರೇನ್ ಮೇಲೆ ರಶ್ಯದ ಆಕ್ರಮಣಕ್ಕೆ ಬೆಂಬಲವನ್ನು ಸೂಚಿಸುತ್ತದೆ ಎಂದು ಅಮೆರಿಕ ಹೇಳಿದೆ.
 
ರಶ್ಯ ಚಾಲ್ತಿಯಲ್ಲಿರುವ ಅಂತರರಾಷ್ಟ್ರೀಯ ಬೆಲೆಗಳಿಗಿಂತ ಭಾರೀ ರಿಯಾಯಿತಿ ದರದಲ್ಲಿ ತೈಲ ಮಾರಾಟದ ಕೊಡುಗೆಯನ್ನು ಮುಂದಿಟ್ಟ ಬಳಿಕ ದೇಶದ ಅಗ್ರ ತೈಲ ಸಂಸ್ಥೆಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈಗಾಗಲೇ ರಶ್ಯದಿಂದ 30 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿದವು.
 
ಭಾರತವು ರಶ್ಯದಿಂದ ತೈಲವನ್ನು ಖರೀದಿಸುವುದು ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು,ಆದರೆ ಅದು ರಶ್ಯದ ಆಕ್ರಮಣಕ್ಕೆ ಬೆಂಬಲವನ್ನು ಸೂಚಿಸುತ್ತದೆ ಎಂದು ಹೇಳಿದ್ದರು. ‘ಈ ಘಳಿಗೆಯನ್ನು ಚರಿತ್ರೆಯ ಪುಸ್ತಕಗಳನ್ನು ಬರೆಯುತ್ತಿರುವಾಗ ನಿಮ್ಮ ಸ್ಥಾನ ಎಲ್ಲಿರಬೇಕು ಎಂದು ನೀವು ಬಯಸುತ್ತೀರಿ ಎನ್ನುವುದನ್ನೂ ಯೋಚಿಸಿ. ರಶ್ಯದ ನಾಯಕತ್ವಕ್ಕೆ ಬೆಂಬಲವು ನಿಸ್ಸಂಶಯವಾಗಿ ವಿನಾಶಕಾರಿ ಪರಿಣಾಮಗಳನ್ನು ಹೊಂದಿರುವ ಆಕ್ರಮಣಕ್ಕೆ ಬೆಂಬಲವಾಗುತ್ತದೆ ’ಎಂದೂ ಅವರು ಹೇಳಿದ್ದರು.

ರಶ್ಯವು ಅತ್ಯಲ್ಪ ಪ್ರಮಾಣದಲ್ಲಿ ಭಾರತಕ್ಕೆ ಕಚ್ಚಾತೈಲವನ್ನು ಪೂರೈಸುತ್ತದೆ. ಅದು ನಮ್ಮ ಅಗತ್ಯದ ಶೇ.1ಕ್ಕೂ ಕಡಿಮೆಯಿದೆ ಮತ್ತು ಅದು ಅಗ್ರ 10 ಪೂರೈಕೆ ದೇಶಗಳಲ್ಲಿಯೂ ಇಲ್ಲ ಎಂದು ತಿಳಿಸಿದ ಮೂಲಗಳು,ಉಕ್ರೇನ್ ಸಂಘರ್ಷದ ಬಳಿಕ ತೈಲಬೆಲೆಗಳಲ್ಲಿ ಏರಿಕೆಯು ನಮ್ಮೆದುರಿನ ಸವಾಲುಗಳನ್ನು ಹೆಚ್ಚಿಸಿದೆ ಮತ್ತು ಸ್ಪರ್ಧಾತ್ಮಕ ಬೆಲೆಗಳಲ್ಲಿ ಖರೀದಿಗಾಗಿ ಒತ್ತಡವನ್ನು ಸಹಜವಾಗಿಯೇ ಹೆಚ್ಚಿಸಿದೆ. ರಶ್ಯದಿಂದ ತೈಲ ಆಮದಿಗೆ ಸರಕಾರಗಳ ನಡುವೆ ಯಾವುದೇ ವ್ಯವಸ್ಥೆಯಿಲ್ಲ ಎಂದು ಹೇಳಿದವು.

ಅಮೆರಿಕ ಮತ್ತು ಇತರ ಪಾಶ್ಚಾತ್ಯ ದೇಶಗಳು ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ರಶ್ಯ ಕಚ್ಚಾತೈಲ ಮತ್ತು ಇತರ ಸರಕುಗಳನ್ನು ಭಾರೀ ರಿಯಾಯಿತಿ ದರಗಳಲ್ಲಿ ಪೂರೈಸುವ ಕೊಡುಗೆಯನ್ನು ಭಾರತ ಮತ್ತು ಇತರ ಬೃಹತ್ದಾರರಿಗೆ ನೀಡಲು ಆರಂಭಿಸಿದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ರಿಯಾಯಿತಿ ದರಗಳಲ್ಲಿ ರಶ್ಯದಿಂದ ಕಚ್ಚಾತೈಲ ಖರೀದಿಯ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ. ಕಚ್ಚಾತೈಲದ ಬೃಹತ್ ಆಮದು ದೇಶವಾಗಿ ಭಾರತವು ಎಲ್ಲ ಸಮಯಗಳಲ್ಲಿ ಎಲ್ಲ ಆಯ್ಕೆಗಳನ್ನು ಪರಿಶೀಲಿಸುತ್ತದೆ ಎಂದು ಹೇಳಿದರು.
 
ಭಾರತವು ಸ್ಪರ್ಧಾತ್ಮಕ ಇಂಧನ ಮೂಲಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಿದೆ. ನಾವು ಎಲ್ಲ ಉತ್ಪಾದಕರಿಂದ ಇಂತಹ ಕೊಡುಗೆಗಳನ್ನು ಸ್ವಾಗತಿಸುತ್ತೇವೆ. ಭಾರತೀಯ ವ್ಯಾಪಾರಿಗಳೂ ಅತ್ಯುತ್ತಮ ಆಯ್ಕೆಗಳನ್ನು ಅನ್ವೇಷಿಸಲು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಕಾರ್ಯಾಚರಿಸುತ್ತಾರೆ ಎಂದು ಮೂಲಗಳು ಹೇಳಿದವು.

ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಆಮದುಗಳನ್ನು ಹೆಚ್ಚಾಗಿ ಅವಲಂಬಿಸಿದೆ. ಅದು ಸುಮಾರು ಶೇ.85ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ಭಾರತವು ಉಕ್ರೇನ್ ಮೇಲಿನ ರಶ್ಯ ಆಕ್ರಮಣವನ್ನು ಬೆಂಬಲಿಸಿಲ್ಲ. ಮಾತುಕತೆಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಭಾರತ ಸರಕಾರವು ಸಂಬಂಧಿಸಿದ ಎಲ್ಲರಿಗೂ ನಿರಂತರವಾಗಿ ಹೇಳುತ್ತಲೇ ಬಂದಿದೆ. ಆದಾಗ್ಯೂ ರಶ್ಯದ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯದ ಮೇಲಿನ ಮತದಾನದಿಂದ ಅದು ದೂರವುಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News