×
Ad

ಗೋವಾ ಮಾದರಿಯಲ್ಲಿ ರಾಜ್ಯದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು: ಸಚಿವ ಆನಂದ ಸಿಂಗ್

Update: 2022-03-19 15:55 IST

ಮಂಗಳೂರು‌ : ಗೋವಾ ಮಾದರಿಯಲ್ಲಿ ರಾಜ್ಯದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಆ ನಿಟ್ಟಿನಲ್ಲಿ ತಡೆಯಾಗಿರುವ ಸಿಆರ್‌ಝೆಡ್ ನಿಯಮ ಸಡಿಲಿಕೆ ಪ್ರಕ್ರಿಯೆ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ಭರವಸೆ ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ  ಜಿಲ್ಲೆಯ ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

೨೦೧೯ರ ಅಧಿಸೂಚನೆಯಂತೆ ಸಿಆರ್‌ಝೆಡ್ ಸಡಿಲಿಕೆ ಮ್ಯಾಪಿಂಗ್ (ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ ಪ್ಲಾನ್) ಮಾಡಲಾಗಿದ್ದು, ಅದನ್ನು ಚೆನ್ನೈಗೆ ಕ್ಲಿಯರೆನ್ಸ್‌ಗಾಗಿ ಕಳುಹಿಸಿ, ಬಳಿಕ ಕೇಂದ್ರದ ಎನ್‌ಸಿಎಸ್‌ಸಿಎಂನಿಂದ ೨ ತಿಂಗಳಲ್ಲಿ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಪ್ರಸ್ತುತ ೨೦೧೧ರ ಸಿಆರ್‌ಝೆಡ್ ನಿಯಮದಂತೆ ಸಮುದ್ರದ ಹೈಡ್‌ನಿಂದ ೫೦೦ ಮೀಟರ್ ಹೊರಗಡೆ ಶಾಶ್ವತ ಕಟ್ಟಡ ಕಟ್ಟಲು ಅವಕಾಶವಿದೆ. ೨೦೧೯ರ ಸಿಆರ್‌ಝೆಡ್ ಅಧಿಸೂಚನೆಯಲ್ಲಿ ಸಮುದ್ರದ ಹೈ ಟೈಡ್‌ನಿಂದ ೧೦ ಮೀಟರ್‌ನಲ್ಲಿ ಹಾಗೂ ನದಿಗಳಿಂದ ೫೦ ಮೀಟರ್ ದೂರದಲ್ಲಿ, ಹಾಗೂ ದ್ವೀಪ ಪ್ರದೇಶಗಳಲ್ಲಿ ೨೦ ಮೀಟರ್ ದೂರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ತಾತ್ಕಾಲಿಕ ಕಟ್ಟಡಗಳ ರಚನೆಗೆ ಅವಕಾಶ ಒದಗಿಸಲಾಗಿದೆ. ಇದೀಗ ಈ ಕುರಿತಂತೆ ತಯಾರಿಸಲಾದ ಮ್ಯಾಪಿಂಗ್‌ಗೆ ಅನುಮತಿ ದೊರೆತಾಕ್ಷಣ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.

ಕರಾವಳಿಯಲ್ಲಿ ಯಾವುದೇ ಯೋಜನೆ ಮಾಡಬೇಕಾದರೆ ಸಿಆರ್‌ಝೆಡ್ ಅನುಮತಿಗಾಗಿ ಚೆನ್ನೈನ ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಆ ಕಾರ್ಯಕ್ಕಾಗಿ ಎನ್‌ಐಟಿಕೆಯಲ್ಲಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲಾಗುವುದು. ಪ್ರವಾಸೋದ್ಯಮಕ್ಕೆ ಪೂರಕವಾದ ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು ಬೀಚ್‌ಗಳಿಗೆ ಆದ್ಯತೆ ನೆಲೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಇಲ್ಲಿ ಹೂಡಿಕೆದಾರರ ಸಮಾವೇಶವನ್ನು ಮಾಡುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವ ಆನಂದ ಸಿಂಗ್ ತಿಳಿಸಿದರು.

ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನುರಿತ ಗೈಡ್‌ಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸ್ಥಳೀಯ ಐತಿಹಾಸಿಕ ಸ್ಥಳಗಳು ಪ್ರವಾಸಿ ತಾಣಗಳ ಬಗ್ಗೆ ತರಬೇತಿ ನೀಡುವ ಕಾರ್ಯದ ಬಗ್ಗೆಯೂ ಚಿಂತನೆ ಮಾಡಲಾಗಿದೆ. ಪಿಲಿಕುಳದಲ್ಲಿ ಆಗಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸಚಿವ ಆನಂದ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News