22 ಮಿಲಿಯ ಮೆಟ್ರಿಕ್ ಟನ್ ಮೀನು ಉತ್ಪಾದನೆ ಗುರಿ : ಡಾ. ರಾಜೀವ್ ರಂಜನ್
ಮಂಗಳೂರು, ಮಾ.19: ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ (ಪಿಎಂಎಂಎಸ್‌ವೈ) ೨೦೨೪-೨೫ ರ ವೇಳೆಗೆ ದೇಶದ ಮೀನು ಉತ್ಪಾದನೆಯನ್ನು 22 ಮಿಲಿಯನ್ ಮೆಟ್ರಿಕ್ ಟನ್ ಗುರಿ ಇರಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ( ಎನ್‌ಸಿಡಿಸಿ) ಹಿರಿಯ ಸಲಹೆಗಾರ ಡಾ. ರಾಜೀವ್ ರಂಜನ್ ಅವರು ಹೇಳಿದ್ದಾರೆ.
ಸಹಕಾರಿ ವಲಯ ರಫ್ತು ಉತ್ತೇಜನಾ ಕೌನ್ಸಿಲ್ , ಎನ್‌ಸಿಡಿಸಿ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಬಿ), ಕೇಂದ್ರ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ಮೀನು ರಫ್ತು ಉತ್ತೇಜನ ಕುರಿತು ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ಪ್ರತಿನಿಧಿಗಳ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ದೇಶದ ಮೀನು ಹಾಗೂ ಮೀನುಗಾರಿಕಾ ಉತ್ಪನ್ನಗಳ ರಫ್ತು ೨೦೧೯-೨೦ ರಲ್ಲಿ ರಫ್ತು ೧.೨೮ ಮಿಲಿಯನ್ ಟನ್ ಆಗಿದ್ದು ಜಾಗತಿಕ ಪ್ರಮಾಣದ ಶೇ.೪ ಆಗಿದೆ ಹಾಗೂ ದೇಶದ ಕೃಷಿ ರಫ್ತುವಿನ ಶೇ.೧೮ರಷ್ಟಿದೆ. ಸರಕಾರದ ವಿವಿಧ ಉತ್ತೇಜನ ಕ್ರಮಗಳ ಪರಿಣಾಮ ಕಳೆದ ಕೆಲವು ವರ್ಷಗಳಿಂದ ಮೀನುಗಾರಿಕಾ ಪ್ರತಿ ವರ್ಷ ಶೇ.೧೦ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಮೀನುಗಾರಿಕಾ ಕ್ಷೇತ್ರಕ್ಕೆ ಬಹುದೊಡ್ಡ ರಫ್ತು ಮಾರುಕಟ್ಟೆ ಇದ್ದು ಇದರ ಅವಕಾಶವನ್ನು ನಾವು ಬಳಸಿಕೊಳ್ಳಬೇಕು ಎಂದವರು ಹೇಳಿದರು.
೨೦೨೦-೨೧ ನೇ ಆರ್ಥಿಕ ಸಾಲಿನಲ್ಲಿ ಪ್ರಧಾನಿಯವರು ಘೋಷಿಸಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ ಐದು ವರ್ಷಗಳಲ್ಲಿ ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ೨೦೦೫೦ ಕೋ.ರೂ. ವಿನಿಯೋಗದೊಂದಿಗೆ ಹೆಚ್ಚುವರಿಯಾಗಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ೫೫ ಲಕ್ಷ ಉದ್ಯೋಗ ಸೃಷ್ಠಿ ಗುರಿಯನ್ನು ಇರಿಸಿಕೊಳ್ಳಲಾಗಿದೆ ಎಂದರು. ಪ್ರಸ್ತುತ ದೇಶದಲ್ಲಿ ೨.೮ ಕೋಟಿ ಜನರ ಜೀವನಕ್ಕೆ ಮೀನುಗಾರಿಕಾ ಕ್ಷೇತ್ರ ಆಧಾರವಾಗಿದೆ ಎಂದರು.
ಸಹಕಾರಿ ವಲಯ ರಫ್ತು ಉತ್ತೇಜನಾ ಕೌನ್ಸಿಲ್ ಅಧ್ಯಕ್ಷ ಹಾಗೂ ಎನ್‌ಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಕುಮಾರ್ ನಾಯಕ್, ಸಹಕಾರ ಭಾರತಿಯ ಮಾಜಿ ಅಧ್ಯಕ್ಷ ರಮೇಶ್ ವೈದ್ಯ ಮಾತನಾಡಿದರು.
ಎನ್‌ಎಫ್‌ಡಿಬಿ ರಾಜೇಂದ್ರ ನಾಕ್, ರಾಜ್ಯ ಮೀನುಗಾರಿಕಾ ಇಲಾಖಾ ನಿರ್ದೇಶಕ ಎಂ.ಎಲ್.ದೊಡ್ಡಮನಿ, ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಶಿವಕುಮಾರ್ ಮಗಧ, ಸಿಎಂಎಫ್‌ಆರ್‌ಐಯ ಡಾ. ಪ್ರತಿಭಾ ಅವರು ಉಪನ್ಯಾಸ ನೀಡಿದರು.
ಸಹಕಾರಿ ವಲಯ ರಫ್ತು ಉತ್ತೇಜನಾ ಕೌನ್ಸಿಲ್ , ಎನ್‌ಸಿಡಿಸಿ ನಿರ್ದೇಶಕ ಪ್ರಭು ಪೌಲ್‌ರಾಜ್ ಸ್ವಾಗತಿಸಿದರು. ಸಲಹೆಗಾರ ಡಾ. ಕೆ.ಟಿ.ಚನ್ನೇಶಪ್ಪ ಅವರು ನಿರೂಪಿಸಿದರು. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಮೀನುಗಾರಿಕಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಮೀನು ಸಂಸ್ಕರಣಾ ಪಾರ್ಕ್ ಸ್ಥಾಪನೆ ಅಗತ್ಯ
ಕರ್ನಾಟಕವು ೩೨೦ ಕಿ.ಮಿ. ಸಮುದ್ರತೀರವನ್ನು ಹೊಂದಿದೆ. ಗಣನೀಯ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಮೀನು ರಫ್ತಿಗೂ ವಿಪುಲ ಅವಕಾಶವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಾನದಂಡಕ್ಕೆ ಅನುಗುಣವಾಗಿ ಮೀನು ಸಂಸ್ಕರಣೆಗೆ ಪೂರಕವಾಗಿ ರಾಜ್ಯದ ಕರಾವಳಿಯಲ್ಲಿ ಮೀನು ಸಂಸ್ಕರಣಾ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾಗುವುದು ಅಗತ್ಯವಿದೆ.
- ಡಾ. ಶಿವಕುಮಾರ್ ಮಗದ, ಡೀನ್, ಮೀನುಗಾರಿಕಾ ಕಾಲೇಜು, ಮಂಗಳೂರು