ಅಭಿವ್ಯಕ್ತಿಯ ಮಾಧ್ಯಮವಾಗಿ ಕೊಂಕಣಿಗೆ ಉತ್ತಮ ಭವಿಷ್ಯವಿದೆ: ಸಾಹಿತಿ ದಾಮೋದರ ಮೌಜೊ
ಮಂಗಳೂರು : ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕೊಂಕಣಿಯಲ್ಲಿ ಅತ್ಯುತ್ತಮ ಕೃತಿಗಳಿವೆ. ಆದರೆ ಕೊಂಕಣಿಯು ವಿಶ್ವ ಮನ್ನಣೆ ಪಡೆಯಬೇಕಾದರೆ ಇಂಗ್ಲಿಷ್ ಸಹಿತ ಇತರ ಭಾಷೆಗಳಿಗೂ ಅನುವಾದಗೊಳ್ಳಬೇಕು. ಅಲ್ಲದೆ ಅಭಿವ್ಯಕ್ತಿಯ ಮಾಧ್ಯಮವಾಗಿ ಕೊಂಕಣಿಗೆ ಉತ್ತಮ ಭವಿಷ್ಯವಿದೆ ಎಂದು ಜ್ಞಾನಪೀಠ ಸನ್ಮಾನಿತ ಕೊಂಕಣಿ ಸಾಹಿತಿ ದಾಮೋದರ ಮೌಜೊ ಅಭಿಪ್ರಾಯಪಟ್ಟರು.
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ, ಕೇಂದ್ರ ಸಾಹಿತ್ಯ ಅಕಾಡಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಮಂಗಳೂರು ವಿಶ್ವ ವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ, ಕವಿತಾ ಟ್ರಸ್ಟ್‌ಗಳ ಸಹಭಾಗಿತ್ವ ದಲ್ಲಿ ನಗರದ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶನಿವಾರ ಆರಂಭಗೊಂಡ ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮದ ಱವಿಶ್ವ ಕೊಂಕಣಿ ಸಮಾರೋಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜ್ಞಾನಪೀಠ ಪುರಸ್ಕಾರವು ಕೊಂಕಣಿ ಭಾಷೆಗೆ ಸಿಕ್ಕಿರುವ ಮನ್ನಣೆಯಾಗಿದೆ. ನಾನು ಬರೀ ನಿಮಿತ್ತ ಮಾತ್ರ. ಬಹಳಷ್ಟು ಲೇಖಕರು ಸಾಹಿತ್ಯ ಅಕಾಡಮಿಯ ಪುರಸ್ಕಾರ ಸಿಕ್ಕಿದ ಬಳಿಕ ಮುಗಿಯಿತು ಎಂದು ಸುಮ್ಮನಾಗುತ್ತಾರೆ. ಇದು ಸರಿಯಲ್ಲ. ಒಬ್ಬ ಲೇಖಕನಿಗೆ ನಿರಂತರ ಓದುವಿನ ಜೊತೆಗೆ ಬರಹವೂ ಮುಖ್ಯವಾಗಿದೆ. ಓದು ಇಲ್ಲದಿದ್ದರೆ ಉತ್ತಮ ಸಾಹಿತ್ಯ ಕತಿಯನ್ನು ರಚಿಸಲು ಸಾಧ್ಯವಿಲ್ಲ ಎಂದು ದಾಮೋದರ ಮೌಜೋ ಹೇಳಿದರು.
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಭೂಷಣ ಭಾವೆ, ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ. ಕೆ. ಜಗದೀಶ್ ಪೈ, ಮಂಗಳೂರು ವಿ.ವಿ. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ್, ವಿಶ್ವ ಕೊಂಕಣಿ ಕೇಂದ್ರದ ಬಿ.ಆರ್.ಭಟ್, ಗಿಲ್ಬರ್ಟ್ ಡಿಸೋಜಾ, ಗಿರಿಧರ್ ಕಾಮತ್, ಸಿಇಒ ಗುರುದತ್ ಬಂಟ್ವಾಳ್‌ಕಾರ್ ಉಪಸ್ಥಿತರಿದ್ದರು.
’ಬಸ್ತಿ ವಾಮನ ಶೆಣೈ - ಬದುಕು ಮತ್ತು ಕೆಲಸ’ ವಿಚಾರ ಗೊಷ್ಠಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಸಲಹಾ ಸಮಿತಿ ಸದಸ್ಯ ಪಯ್ಯನೂರು ರಮೇಶ ಪೈ ಸಮನ್ವಯಕಾರರಾಗಿದ್ದು, ಗೋವಾ ವಿ.ವಿ. ನಿವೃತ್ತ ಡೀನ್ ಡಾ. ಕಿರಣ್ ಬುಡ್ಕುಳೆ, ಕೊಂಕಣಿ ರಂಗಕರ್ಮಿ ಎಡ್ವರ್ಡ್ ಸಿಕ್ವೇರಾ, ಕೊಂಕಣಿ ಕವಯತ್ರಿ ಶಕುಂತಲಾ ಆರ್. ಕಿಣಿ ವಿಚಾರ ಮಂಡಿಸಿದರು.
ಕೊಂಕಣಿ ಲಿಟ್ ಫೆಸ್ಟ್‌ನಲ್ಲಿ ’ಕೊಂಕಣಿ ಸಾಹಿತ್ಯ: ಜ್ಞಾನಪೀಠದ ಗರಿಮೆ ಮತ್ತು ಮುಂದಿನ ಹಾದಿ’ ಕುರಿತು ಜ್ಞಾನಪೀಠ ಪುಸ್ಕೃತ ದಾಮೋದರ ಮೌಜೊ ಅವರೊಂದಿಗೆ ಕೊಂಕಣಿ ಸಾಹಿತಿ ಎಚ್ಚೆಮ್ ಪೆರ್ನಾಲ್ ಸಂವಾದ ನಡೆಸಿಕೊಟ್ಟರು. ’ಶಾಲಾ ಶಿಕ್ಷಣದಲ್ಲಿ ಕೊಂಕಣಿ : ಸ್ಥಿತಿಗತಿ ಮತ್ತು ಭವಿಷ್ಯ’, ’ಡಿಜಿಟಲ್ ಮಾಧ್ಯಮದಲ್ಲಿ ಕೊಂಕಣಿ ’, ’ಕೊಂಕಣಿ ಅಡುಗೆಮನೆ: ಜಾಗತೀಕರಣದ ಸವಾಲುಗಳು’, ’ಕೊಂಕಣಿ ರಂಗಭೂಮಿ ಮತ್ತು ಸಿನೆಮಾ: ಸ್ಥಿತ್ಯಂತರಗಳು’, ’ಕೊಂಕಣಿ ಜನಪದ ಕುಲಕಸುಬುಗಳು ಎದುರಿಸುತ್ತಿರುವ ಸವಾಲುಗಳು’ ವಿಷಯಗಳ ಕುರಿತಾಗಿ ವಿಚಾರ ಸಂಕಿರಣ ನಡೆಯಿತು.