×
Ad

ರಶ್ಯ ದಾಳಿಯಲ್ಲಿ ಗಾಯಗೊಂಡಿದ್ದ ಉಕ್ರೇನ್‌ನ ಖ್ಯಾತ ಬ್ಯಾಲೆ ಡ್ಯಾನ್ಸರ್ ಮೃತ್ಯು

Update: 2022-03-19 22:25 IST

ಕೀವ್, ಮಾ.19: ಮೂರು ವಾರದ ಹಿಂದೆ ರಶ್ಯ ಸೇನೆಯ ಶೆಲ್ ದಾಳಿಯಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಕ್ರೇನ್‌ನ ಖ್ಯಾತ ಬ್ಯಾಲೆ ಡ್ಯಾನ್ಸರ್ ಆರ್ಟಿಯೊಮ್ ಡಟ್ಸಿಶಿನ್ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿರುವುದಾಗಿ ಮೂಲಗಳು ಹೇಳಿವೆ.

ಉಕ್ರೇನ್‌ನ ನ್ಯಾಷನಲ್ ಒಪೆರಾದ ಪ್ರಮುಖ ಬ್ಯಾಲೆ ಡ್ಯಾನ್ಸರ್ ಆಗಿದ್ದ 43 ವರ್ಷದ ಡಟ್ಸಿಶಿನ್ ಫೆಬ್ರವರಿ 26ರಂದು ಕೀವ್ ಮೇಲೆ ರಶ್ಯ ಸೇನೆ ನಡೆಸಿದ ಫಿರಂಗಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಮತ್ತು ನಮ್ಮೆಲ್ಲರ ಹಾರೈಕೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ ಎಂದು ಅವರ ನಿಕಟವರ್ತಿಗಳು ಟ್ವೀಟ್ ಮಾಡಿದ್ದಾರೆ. ಆರ್ಟಿಯೋವ್ ಡಟ್ಸಿಶಿನ್ ಓರ್ವ ಪ್ರತಿಭಾನ್ವಿತ ಮತ್ತು ಅದ್ಭುತ ಬ್ಯಾಲೆ ಡ್ಯಾನ್ಸರ್ ಆಗಿದ್ದರು. ಅವರ ಮರಣದಿಂದಾಗಿ ತೀವ್ರ ಆಘಾತ ಮತ್ತು ನೋವು ಉಂಟಾಗಿದೆ ಎಂದು ರಶ್ಯದ ನೃತ್ಯನಿರ್ದೇಶಕ ಅಲೆಕ್ಸಿ ರಟ್ಮನ್‌ಸ್ಕಿ ಸಂತಾಪ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಉಕ್ರೇನ್‌ನ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್ ರಶ್ಯದ ಕ್ಷಿಪಣಿ ದಾಳಿಗೆ ಬಲಿಯಾಗಿದ್ದರು. ಉಕ್ರೇನ್ ಯುದ್ಧ ಆರಂಭವಾದಂದಿನಿಂದ ಸುಮಾರು 600 ನಾಗರಿಕರು ಮೃತಪಟ್ಟಿದ್ದು 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News