×
Ad

ಮಂಗಳೂರು, ಉಡುಪಿ ಜಿಲ್ಲೆಗಳು ಆರೆಸೆಸ್ಸ್ ಪ್ರಯೋಗಶಾಲೆ‌ : ಸಿದ್ದರಾಮಯ್ಯ

Update: 2022-03-19 23:09 IST

ಪುತ್ತೂರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯು ಬಿಜೆಪಿ ಕೋಮು ಹುಟ್ಟು ಹಾಕಿ ಬೆಳೆಸಲು ಫಲವತ್ತಾದ ಜಿಲ್ಲೆಯಾಗಿದ್ದು, ಆರೆಸೆಸ್ಸ್ ನ ಪ್ರಯೋಗ‌ ಶಾಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಶನಿವಾರ ಸಂಜೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ಬಿಜೆಪಿಯು ಸುಳ್ಳು ಹಾಗೂ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಎಲ್ಲಾ ಮುಖಂಡರು ಮಾಡುತ್ತಿದ್ದು, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮೋದಿ ಯಾವತ್ತೂ ಮಾತನಾಡಿಲ್ಲ. ದೇಶದಲ್ಲಿ 40% ಪದವೀಧರ ಹೆಣ್ಮಕ್ಕಳು ಹಾಗೂ 22% ಪುರುಷರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ದಿನನಿತ್ಯ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಅದರೊಂದಿಗೆ ಪೆಟ್ರೋಲ್ ಡಿಸೇಲ್, ಆಹಾರ ವಸ್ತುಗಳು ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಇದೀಗ ರಾಜ್ಯದ ಜನತೆ ನಮ್ಮ ಸರ್ಕಾರದ ಕೆಲಸ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಬಡವರಿಗಾಗಿ ಮಾಡಿರುವ ಬಹಳಷ್ಟು ಯೋಜನೆಗಳನ್ನು ಈಗಿನ ಸರ್ಕಾರ ನಿಲ್ಲಿಸುತ್ತಿದೆ. ಅಂದು ಬಿಜೆಪಿಯವರು ನಮ್ಮ ಉಚಿತ ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಕೃಷಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡಿದ್ದರು. ಈಗ ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. 

ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಮಂಡಿಸಿದ ಕಾರ್ಯಕ್ರಮಗಳ ಪೈಕಿ 55 ಕಾರ್ಯಕ್ರಮಗಳಿಗೆ ಇನ್ನೂ ಆದೇಶ ಪತ್ರ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಈ ಬಗ್ಗೆ ಜನರಿಗೆ ತಿಳಿಸಿ ಬಡ ಜನರ ಸೇವೆಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸಬೇಕು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಬಿ. ರಮಾನಾಥ ರೈ, ಮುಖಂಡರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ ಸೇರಿದಂತೆ ಹಲವು ಮಂದಿ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News