ಬರಹಗಾರರಿಗೆ ಛಂದಸ್ಸಿನ ಬಗ್ಗೆ ಆಳವಾದ ಜ್ಞಾನ ಅಗತ್ಯ: ಸುರೇಂದ್ರ ಅಡಿಗ
ಉಡುಪಿ : ಛಂದಸ್ಸಿನ ಬಗ್ಗೆ ಆಳವಾದ ಜ್ಞಾನ ಇದ್ದರೆ ಪದಗಳನ್ನು ಪೋಣಿಸಲು ಸಾಕಷ್ಟು ಸುಲಭ ಸಾಧ್ಯವಾಗು ತ್ತದೆ. ಆದುದರಿಂದ ಯುವ ಬರಹಗಾರರು ಛಂದಸ್ಸಿನ ಬಗ್ಗೆ ಅಧ್ಯಯನ ಮಾಡಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘ ಉಡುಪಿ ಜಿಲ್ಲಾ ಘಟಕದ ವತಿ ಯಿಂದ ಉಡುಪಿ ಹಿಂದಿ ಭವನದಲ್ಲಿ ರವಿವಾರ ಆಯೋಜಿಸಲಾದ ಕನ್ನಡ ನುಡಿ ವೈಭವ ಹಾಗೂ ಪದಗ್ರಹಣ ಮತ್ತು ಕವಿಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಇತರ ಕವನಗಳನ್ನು ತಮ್ಮದೇ ಕವನಗಳೆಂಬ ರೀತಿಯಲ್ಲಿ ಪೋಸ್ಟ್ ಮಾಡುವ ಹಾಗೂ ಲೈಕ್ ಆಧಾರದಲ್ಲಿ ಕವನಗಳ ಗುಣ ಮಟ್ಟವನ್ನು ಅಳೆಯುವ ಮನೋಭಾವ ಕೂಡ ಬೆಳೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರತಿಭೆ, ಸ್ಪೂರ್ತಿ ಹಾಗೂ ಸಮಯ ಇದ್ದರೆ ಉತ್ತಮ ಬರಹ ಗಳು ಸೃಷ್ಟಿಯಾಗುತ್ತವೆ ಎಂದು ಅವರು ತಿಳಿಸಿದರು.
ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಮತ್ತು ಇಂಗ್ಲಿಷನ್ನು ಹೇಳಿಕೊಡುವ ಕಾರ್ಯ ಆಗಬೇಕು ಎಂದ ಅವರು, ಯುವ ಬರಹಗಾರರು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಬರೆಯಬೇಕೆ ಹೊರತು ಇನ್ನೊಬ್ಬರ ಕೃತಿಗಳ ಚೌರ್ಯ ಮಾಡುವ ಕೆಲಸ ಮಾಡಬಾರದು. ಮುಂದಿನ ಪೀಳಿಗೆಗೆ ಹೊಸ ಉತ್ಸಾಹ ಮೂಡುವ ರೀತಿಯಲ್ಲಿ ನಮ್ಮ ಬರವಣಿಗೆ ಇರಬೇಕೆಂದರು.
ಅಧ್ಯಕ್ಷತೆಯನ್ನು ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಪುಷ್ಪ ಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಮಕಿ, ಸಾಹಿತಿ ಕೋಟ ಶ್ರೀಕೃಷ್ಣ ಅಹಿತಾನಳ, ಸಾಹಿತಿ ಚಂದ್ರಶೇಖರ ನಾವಡ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ನುಡಿವೈಭವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರಸ್ವತಿ ಕೋಟೇಶ್ವರ ಸ್ವಾಗತಿಸಿದರು. ದೀಪಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರಾ ಪ್ರಮೋದ್ ವಂದಿಸಿದರು. ಸುಮಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಮೃತ ಸಂದೀಪ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.