×
Ad

ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿಯಪಡಿಸಬೇಕು: ಹರೇಕಳ ಹಾಜಬ್ಬ

Update: 2022-03-20 18:14 IST

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹರೇಕಳ ಶ್ರೀರಾಮಕೃಷ್ಣ ಪೌಢಶಾಲೆಯ ಸಹಯೋಗ ದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಂತರ್ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಮತ್ತು ಕಿರುನಾಟಕ ಸ್ಪರ್ಧೆ ಹರೇಕಳ ಶ್ರೀ ರಾಮಕೃಷ್ಣಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಇಂದಿನ ಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಷ್ಟಕಾರ್ಪಣ್ಯಗಳನ್ನು ತಿಳಿಸಿ ಕೊಡುವಂತದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಮುಖ್ಯ ಅತಿಥಿಯಾಗಿ ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬದ್ರುದ್ದೀನ್ ಫರೀದ್ ನಗರ ಅವರು ಮಾತನಾಡಿ ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ಸೌಹಾರ್ದತೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ವಿದ್ಯಾರ್ಥಿ ದೆಸೆಯಿಂದಲೇ ಪ್ರೀತಿ,ವಿಶ್ವಾಸ, ಸಹಕಾರ, ಮಾನವೀಯತೆ ಮುಂತಾದ ಗುಣಗಳನ್ನು ಅಳವಡಿಸಿಕೊಂಡು ಭವ್ಯ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ಜಯರಾಜ್ ಅಮೀನ್ ಅವರು ವಹಿಸಿ ನವ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿಕೊಟ್ಟ ಭಾರತದ ತತ್ವ ಮತ್ತು ಅನನ್ಯತೆಯನ್ನು ರೂಪಿಸುವಲ್ಲಿ ಕಾರಣೀಭೂತವಾದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಿ ಸದೃಢವಾದ ಭಾರತವನ್ನು ಕಟ್ಟಲು ಸಂಕಲ್ಪ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು.

ಸ್ವಾತಂತ್ರ್ಯ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಅಮೂಲ್ಯ ಕಾಣಿಕೆಯಾಗಿದ್ದು, ಭಾರತದ ಬಗ್ಗೆ ಅರಿವು ಮತ್ತು ಆಸಕ್ತಿಯನ್ನು ನವೋಲ್ಲಾಸದಿಂದ ಪಡೆದುಕೊಂಡು ಭಾರತದ ಭವ್ಯ ಪರಂಪರೆ, ಚರಿತ್ರೆ, ಸಾಧನೆ ಮತ್ತು ಬಳುವಳಿಯನ್ನು  ಅರ್ಥೈಸಿಕೊಂಡು, ಸಂಭ್ರಮಿಸಿ,ಅದರಿಂದ ಪ್ರೇರಣೆ ಪಡೆದುಕೊಂಡು   ಭವ್ಯವಾದ ರಾಷ್ಟ್ರ ವನ್ನು ರೂಪಿಸಬೇಕು ಎಂದು ಕರೆಕೊಟ್ಟರು.

ಅತಿಥಿಗಳಾಗಿ ತ್ರೀ ಶಕ್ತಿ  ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ  ಕಡೆಂಜ ಸೋಮಶೇಖರ್ ಚೌಟ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ  ಉಷಾಲತಾ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ವಿಭಾಗದ ಸಹಪ್ರಾಧ್ಯಾಪಕರಾದ ಡಾ. ದಯಾನಂದ ನಾಯ್ಕ್ ಅವರು ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕರಾದ ಡಾ. ರಾಜ್ ಪ್ರವೀನ್ ಸಿ ಎಂ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News