400 ಮಂದಿ ಆಶ್ರಯ ಪಡೆದಿದ್ದ ಶಾಲೆಯನ್ನು ಗುರಿಯಾಗಿಸಿ ರಶ್ಯಾದಿಂದ ಬಾಂಬ್‌ ದಾಳಿ: ಉಕ್ರೇನ್

Update: 2022-03-20 15:48 GMT
photo courtesy:twitter/@GReportIndia

ಕೀವ್,ಮಾ.20: ಮುತ್ತಿಗೆಗೆ ಒಳಗಾಗಿರುವ ಉಕ್ರೇನ್‌ನ ಬಂದರು ನಗರ ಮರಿಯುಪೋಲ್‌ನಲ್ಲಿ ಸುಮಾರು 400 ಮಂದಿ ಆಶ್ರಯ ಪಡೆದಿದ್ದ ಶಾಲೆಯೊಂದರ ಮೇಲೆ ರಶ್ಯ ಸೇನೆ ಬಾಂಬ್ ದಾಳಿ ನಡೆಸಿದೆ ಎಂದು ನಗರಾಡಳಿತ ಸಮಿತಿ ರವಿವಾರ ಹೇಳಿದೆ. 

ದಾಳಿಯಿಂದ ಶಾಲೆಯ ಕಟ್ಟಡಕ್ಕೆ ಹಾನಿಯಾಗಿದ್ದು ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿ ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ಸಮಿತಿಯ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್- ರಶ್ಯ ನಡುವಿನ ಯುದ್ಧಕ್ಕೆ ಸಂಬಂಧಿಸಿದ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ:

ಮರಿಯುಪೋಲ್‌ನಲ್ಲಿ ಸುಮಾರು 400 ಮಂದಿ ಆಶ್ರಯ ಪಡೆದಿದ್ದ ಕಲಾಶಾಲೆಯ ಮೇಲೆ ರಶ್ಯ ಸೇನೆಯ ಬಾಂಬ್‌ದಾಳಿ. ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿ ಹಲವು ಸಂತ್ರಸ್ತರು ಸಿಲುಕಿದ್ದಾರೆ ಎಂದು ಮರಿಯುಪೋಲ್ ನಗರ ಸಮಿತಿ ಹೇಳಿಕೆ. ಬಾಂಬ್ ದಾಳಿಯಿಂದ ಪ್ರಾಣಹಾನಿ ಅಥವಾ ಗಾಯಗೊಂಡವರ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ಮೇಲೆ ರವಿವಾರ ಮತ್ತೊಮ್ಮೆ ಅತ್ಯಾಧುನಿಕ ಸೂಪರ್‌ಸಾನಿಕ್ ಕ್ಷಿಪಣಿ ಪ್ರಯೋಗಿಸಿರುವುದಾಗಿ ರಶ್ಯ ಹೇಳಿಕೆ. ಮಿಕೊಲೈವ್ ಪ್ರಾಂತದ ಕೊಸ್ಟ್ಯಾಂಟಿನಿವ್ಕ ನಗರದಲ್ಲಿ ಉಕ್ರೇನ್ ಶಸಸ್ತ್ರ ಪಡೆಗಳ ಉಪಯೋಗಿಸುತ್ತಿದ್ದ ತೈಲ ಮತ್ತು ಲ್ಯೂಬ್ರಿಕೆಂಟ್ಸ್ ಸಂಗ್ರಹಾಗಾರ ಕ್ಷಿಪಣಿಯಿಂದ ನಾಶವಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

ಬಂದರು ನಗರ ಮರಿಯುಪೋಲ್‌ಗೆ ರಶ್ಯ ಸೇನೆಯ ಮುತ್ತಿಗೆಯು ಮುಂದಿನ ಹಲವು ಶತಮಾನಗಳಲ್ಲೂ ನೆನಪಿಸಿಕೊಳ್ಳುವ ಭಯೋತ್ಪಾದನೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಈ ನಗರದಲ್ಲಿನ ಸಾವಿರಾರು ನಿವಾಸಿಗಳನ್ನು ಬಲವಂತವಾಗಿ ಗಡಿ ದಾಟಿಸಲಾಗಿದೆ ಎಂದು ಸ್ಥಳೀಯಾಡಳಿತ ಹೇಳಿದೆ.

ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಚೀನಾವು ಇತಿಹಾಸದ ನ್ಯಾಯೋಚಿತ ಭಾಗದಲ್ಲಿ ನಿಂತಿದೆ ಎಂಬುದನ್ನು ಸಮಯವೇ ಹೇಳಲಿದೆ ಮತ್ತು ಈ ವಿಷಯದಲ್ಲಿ ಚೀನಾದ ನಿಲುವು ಬಹುತೇಕ ದೇಶಗಳ ಆಶಯದಂತಿದೆ ಎಂದು ಚೀನಾದ ವಿದೇಶ ವ್ಯವಹಾರ ಸಚಿವ ವಾಂಗ್ ಯಿ ಹೇಳಿದ್ದಾರೆ. ಚೀನಾವು ಬಾಹ್ಯ ದಬ್ಬಾಳಿಕೆ ಅಥವಾ ಒತ್ತಡವನ್ನು ಎಂದಿಗೂ ಸಮ್ಮತಿಸುವುದಿಲ್ಲ ಮತ್ತು ಚೀನಾ ವಿರುದ್ಧ ಆಧಾರರಹಿತ ಮತ್ತು ಶಂಕೆಯನ್ನು ಆಧರಿಸಿದ ಆರೋಪಗಳನ್ನು ಯಾವತ್ತೂ ವಿರೋಧಿಸುತ್ತದೆ ಎಂದು ಅವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಉಕ್ರೇನ್ ಯುದ್ಧದಿಂದಾಗಿ ಇಂಧನ, ಆಹಾರದ ಬಿಕ್ಕಟ್ಟು, ಹಣದುಬ್ಬರ, ಬಡತನ ಮುಂತಾದ ಹಲವು ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಯುರೋಪಿಯನ್ ಬ್ಯಾಂಕ್ ಫಾರ್ ರಿಕನ್‌ಸ್ಟ್ರಕ್ಷನ್ ಆ್ಯಂಡ್ ಡೆವಲಪ್‌ಮೆಂಟ್ ಹೇಳಿದೆ.

ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ವಿನಾಶಕಾರಿ ಹುಚ್ಚುತನ ಆಧಾರವಾಗಿದೆ ಮತ್ತು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಬೆಲೆ ತೆರಲು ಸ್ವಿಝರ್ಲ್ಯಾಂಡ್ ಸನ್ನದ್ಧವಾಗಿದೆ ಎಂದು ಸ್ವಿಝರ್ಲ್ಯಾಂಡ್ ಅಧ್ಯಕ್ಷ ಇಗಾಂಝಿಯೊ ಕ್ರಾಸಿಸ್ ಹೇಳಿದ್ದಾರೆ.

ಉಕ್ರೇನ್ ವಿರುದ್ಧದ ರಶ್ಯದ ಆಕ್ರಮಣದ ಬಳಿಕ ಅಧ್ಯಕ್ಷ ಪುಟಿನ್ ರೊಂದಿಗೆ ಸಂಬಂಧವನ್ನು ಮತ್ತೆ ಸಹಜತೆಗೆ ಮರಳಿಸಲು ಪ್ರಯತ್ನಿಸುವುದು ನಾವು ಈ ಹಿಂದೆ 2014ರಲ್ಲಿ ಮಾಡಿದ ರೀತಿಯ ಬಹುದೊಡ್ಡ ಪ್ರಮಾದವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಜಾವೆಲಿನ್, ಸ್ಟ್ರಿಂಜರ್ ಕ್ಷಿಪಣಿ ಸೇರಿದಂತೆ ಅಮೆರಿಕದಿಂದ ಮತ್ತೊಂದು ಕಂತಿನ ಶಸ್ತ್ರಾಸ್ತ್ರ ಶೀಘ್ರ ಉಕ್ರೇನ್ ಕೈಸೇರಲಿದೆ ಎಂದು ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಸಮಿತಿಯ ಕಾರ್ಯದರ್ಶಿ ಒಲೆಕ್ಸಿಯ್ ಡ್ಯಾನಿಲೋವ್  ಹೇಳಿದ್ದಾರೆ.

ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣವು ಅಂತರಾಷ್ಟ್ರೀಯ ಕಾನೂನಿನ ಬುಡವನ್ನು ಅಲುಗಿಸುತ್ತಿರುವ ಗಂಭೀರ ವಿಷಯವಾಗಿದೆ ಎಂದು ಜಪಾನ್‌ನ ಪ್ರಧಾನಿ ಫುಮಿಯೊ ಕಿಷಿಡಾ ಶನಿವಾರ ಹೊಸದಿಲ್ಲಿಯಲ್ಲಿ ಹೇಳಿದ್ದಾರೆ.

ರಶ್ಯಾ ಆಕ್ರಮಣದ ಬಳಿಕ ಉಕ್ರೇನ್‌ನಿಂದ 3.3 ಮಿಲಿಯನ್‌ಗೂ ಅಧಿಕ ಜನತೆ ಪಲಾಯನ ಮಾಡಿದ್ದರೆ, ಸುಮಾರು 6.5 ಮಿಲಿಯನ್ ಜನತೆ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News