×
Ad

ಕುರ್ಕಾಲು ನದಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಬಿಡಿ: ಜಿಲ್ಲಾ ಕೃಷಿಕ ಸಂಘ

Update: 2022-03-20 21:57 IST

ಉಡುಪಿ : ಪಾಪನಾಶಿನಿ ನದಿಗೆ ಕಾಪು ತಾಲೂಕು ಕುರ್ಕಾಲು ನಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಬರಲಿದ್ದು, ದೀರ್ಘಾವಧಿ ಬಾಳಿಕೆ ಬರಲು ಸಾಧ್ಯವಿಲ್ಲದ ಈ ಯೋಜನೆ ಯನ್ನು ಕೈಬಿಡುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘ ಜಿಲ್ಲಾಡಳಿತ, ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದೆ.

ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಡುವುದರಿಂದ ಜನರ ತೆರಿಗೆ ಹಣವನ್ನು ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ಪೋಲು ಮಾಡುವುದು ಬಿಟ್ಟು ಬೇರೇನೂ ಸಾಧನೆಯಾಗುವುದಿಲ್ಲ ಎಂದು ಹೇಳಿಕೆಯಲ್ಲಿ  ಜಿಲ್ಲಾ ಕೃಷಿಕ ಸಂಘ ತಿಳಿಸಿದೆ. ಕಾಪು ಪುರಸಭೆ, ಕಟಪಾಡಿ, ಏಣಗುಡ್ಡೆ, ಕುಂಜಾರು, ಸುಭಾಸ್ ನಗರ ಸೇರಿದಂತೆ  ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ.

ಬಹುಗ್ರಾಮ ಕುಡಿಯುವ ನೀರಿಗಾಗಿ ಆಯ್ಕೆ ಮಾಡಿರುವ ಸ್ಥಳವೇ ಸಂಪೂರ್ಣ ಅವೈಜ್ಞಾನಿಕ. ಹಿಂದಿನಿಂದಲೂ ನೀರಿನ ಒರತೆ ಹೊಂದಿಲ್ಲದ ಕಾರಣ ದಿಂದ ಮಾರ್ಚ್-ಮೇ ಅವಧಿಯಲ್ಲಿ ಈ ನದಿಯಲ್ಲಿ ಸ್ಥಳೀಯರ ಬಳಕೆಗೆ, ಕೃಷಿಗೆ ಬೇಕಾದಷ್ಟು ನೀರೇ ಇರುತ್ತಿರಲ್ಲಿಲ್ಲ. ನೀರಿಗಾಗಿ ಇಲ್ಲಿ ಹೆಚ್ಚು ಆಳ ಮಾಡಿದರೆ ಉಪ್ಪು ನೀರು ಬರಲಿದೆ.  ಇಲಾಖಾ ಇಂಜಿನಿಯರು/ಅಧಿಕಾರಿಗಳು ತೀರಾ ಅವೈಜ್ಞಾನಿಕವಾಗಿ ನೀರಿನ ಲೆಕ್ಕಾಚಾರ ಮಾಡಿಕೊಂಡು ಯೋಜನೆ ಜಾರಿಗೆ ಇಳಿಯುತ್ತಿದ್ದಾರೆ ಎಂದು ಕೃಷಿಕ ಸಂಘ ದೂರಿದೆ.

ಯೋಜನೆ ಜಾರಿಗೆ ತರುತ್ತಿರುವಲ್ಲಿ ಸ್ಥಳೀಯವಾಗಿ ಮಣಿಪುರ, ಕುರ್ಕಾಲು, ಕುಂಜಾರು ಗ್ರಾಮಗಳ ಕನಿಷ್ಠ ೪೦೦ ಕುಟುಂಬಗಳು ಕುಡಿಯಲು ಮತ್ತು ಕೃಷಿಗೆ ತಮ್ಮ ಸ್ವಂತ ನೀರಿನ ಮೂಲಗಳನ್ನು ಹೊಂದಿವೆ. ಈ ಯೋಜನೆಯಿಂದಾಗಿ ಅವರ ನೀರಿನ ಮೂಲಗಳ ಸೆಲೆಗಳು ಬತ್ತಿಹೋಗಲಿವೆ. ಹಾಗೆ ಈ ಯೋಜನೆಯಿಂದಾಗಿ ಸ್ಥಳೀಯ ಜನತೆಗೆ ಎದುರಾಗಬಹುದಾದ ಸಮಸ್ಯೆಗಳಿಗೆ ಯಾವ ಪರಿಹಾರ ಕ್ರಮಗಳನ್ನು ಇವರು ಹೊಂದಿದ್ದಾರೆ ಎಂದು ಸಂಘ ಪ್ರಶ್ನಿಸಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರನ್ನು ದೂರಕ್ಕೆ ಸಾಗಿಸುವುದರಿಂದ ಅದು ಮರಳಿ ನದಿಗೆ ಅಂತರ್ಜಲವಾಗಿ ಮರುಪೂರಣ ವಾಗುವ ಯಾವ ಸಾಧ್ಯತೆಯೂ ಇಲ್ಲ. ಇದು ನೀರು ಬಹುಬೇಗ ಕಡಿಮೆ ಯಾಗಲು ಕಾರಣವಾಗಬಲ್ಲದು. ಹೀಗೆ ಕುಡಿಯುವ ನೀರಿಗೇ ಅಭಾವ ಉಂಟಾದಾಗ ಕೃಷಿ ಪಂಪುಗಳಿಗೆ ನಿರ್ಬಂಧ ಹೇರಲಾಗುತ್ತದೆ. ಇದರಿಂದ ತೋಟಗಾರಿಕೆ, ಕೃಷಿ ಬೆಳೆಗಳನ್ನು ನಂಬಿಕೊಂಡು ಬದುಕುತ್ತಿರುವ ಕೃಷಿಕರಿಗೆ ತೊಂದರೆಯಾಗಲಿದೆ.

ನೀರಿನ ಅಭಾವವೆಂದು ಮುಂದಿನ ದಿನಗಳಲ್ಲಿ ಅಣೆಕಟ್ಟಿನ ಎತ್ತರವನ್ನು ಏರಿಸಲು ಹೊರಟರೆ ನದಿಯ ಇಕ್ಕೆಲಗಳಲ್ಲಿರುವ ಜನವಸತಿ ಮತ್ತು  ಕೃಷಿ ಭೂಮಿ ಮುಳುಗಡೆಯಾಗುವ ಸಾಧ್ಯತೆ ಇದೆ.ಆಳ ಮಾಡಲು ಹೊರಟರೆ ಉಪ್ಪು ನೀರು ಬರಲಿದೆ. ಹೀಗೆ ಉಂಟಾಗುವ ಸಮಸ್ಯೆಗಳಿಗೆ  ಹೊಣೆಗಾರರು ಯಾರು ಹಾಗೂ ಪರಿಹಾರ ಏನು? ಎಂದು ಕೇಳಿದರೆ ಯೋಜನೆ ಜಾರಿಗೆ ಹೊರಟಿರುವ ಅಧಿಕಾರಿಗಳ ಬಳಿ ಯಾವ ಉತ್ತರವೂ ಇಲ್ಲ ಎಂದು ಸಂಘ ಹೇಳಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಇರುವ ಪರಿಸರ ಹಾಗೂ ಸ್ಥಿತಿಯನ್ನು ಹಾಳು ಮಾಡುವ ಬದಲು ಸ್ಥಳೀಯಾಡಳಿತ, ಸ್ಥಳೀಯರು ಮತ್ತು ಕೃಷಿಕರೊಂದಿಗೆ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿರುವ ಸಂಘ, ಯೋಜನೆಯ ವ್ಯಾಪ್ತಿಯೊಳಗೆ ಬರುವ ಗ್ರಾಮಗಳ ಜನರ ತೆರಿಗೆ ಹಣವನ್ನು ಪೋಲು ಮಾಡುವ ಈ ಯೋಜನೆಯನ್ನು ನಿಲ್ಲಿಸುವಂತೆ ಹೇಳಿಕೆಯಲ್ಲಿ ಒತ್ತಾಯಿಸಿರುವ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News