ಜನರೇಕೆ ಈ ಅನ್ಯಾಯಗಳ ಬಗ್ಗೆ ಮಾತಾಡುವುದಿಲ್ಲ

Update: 2022-03-20 19:30 GMT

ಭಾರತ ಎಂಬುದು ಎಲ್ಲ ಸಮುದಾಯಗಳಿಗೆ ಸೇರಿದ ಭೂ ಪ್ರದೇಶ. ಎಲ್ಲರ ಮನಸ್ಸುಗಳು ಒಂದಾದರೆ ಈ ಒಕ್ಕೂಟ ರಾಷ್ಟ್ರ, ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತದೆ. ಆದರೆ ರಾಜಕೀಯ ಲಾಭಕ್ಕಾಗಿ, ತಮ್ಮ ಜಾತಿ ಶ್ರೇಷ್ಠತೆಯ ಹುನ್ನಾರಗಳಿಗಾಗಿ ಜನರನ್ನು ಜಾತಿ, ಮತ, ಧರ್ಮ, ಭಾಷೆಯ ಆಧಾರದಲ್ಲಿ ವಿಭಜಿಸುತ್ತ ಹೋದರೆ ಭಾರತ ಅವನತಿಯತ್ತ ಸಾಗುತ್ತದೆ.



ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತಿವೆ. ಬಡವರು ಮತ್ತು ಸಿರಿವಂತರ ನಡುವಿನ ಅಂತರ ಹೆಚ್ಚಾಗಿದೆ. ಇನ್ನೊಂದೆಡೆ ಆರೋಗ್ಯ, ಶಿಕ್ಷಣ, ಮತ್ತು ಸುರಕ್ಷತೆ ಮೇಲೆ ಸರಕಾರ ಮಾಡುತ್ತಿರುವ ವೆಚ್ಚ ಕಡಿತವಾಗುತ್ತಿದೆ. ಮತ್ತೊಂದೆಡೆ ದೇಶದ 10 ಬಂಡವಾಳಗಾರರ ಬಳಿ ಇರುವ ಸಂಪತ್ತು ಕರಗಲು ನೂರು ವರ್ಷಗಳಾದರೂ ಬೇಕು.
ಪ್ರಧಾನಿ ನರೇಂದ್ರ ಮೋದಿಯವರ ಅತ್ಯಾಪ್ತ ಸ್ನೇಹಿತ ಗೌತಮ್ ಅದಾನಿಯ ಸಂಪತ್ತಿನ ಒಟ್ಟು ಮೌಲ್ಯ 6.17 ಲಕ್ಷ ಕೋಟಿ ರೂ. 2021 ಈ ಒಂದೇ ವರ್ಷದಲ್ಲಿ ಅದಾನಿ ಸಂಪತ್ತು 3.73 ಲಕ್ಷ ಕೋಟಿ ರೂ.ಯಷ್ಟು ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪಟ್ಟಿಯ ಪ್ರಕಾರ, ರಿಲಯನ್ಸ್ ಉದ್ದಿಮೆ ಸಮೂಹದ ಮಾಲಕ ಮುಕೇಶ್ ಅಂಬಾನಿಯ ಸಂಪತ್ತಿನ ಮೌಲ್ಯ ಕೂಡ ಶೇ.24ರಷ್ಟು ಹೆಚ್ಚಳವಾಗಿ 7.84 ಲಕ್ಷ ಕೋಟಿ ರೂ.ಗೆ ಮುಟ್ಟಿದೆ.
ಭಾರತದ 10 ಮಂದಿ ಸಿರಿವಂತರ ಬಳಿ ಇರುವ ಸಂಪತ್ತಿನಿಂದ ಮುಂದಿನ 25 ವರ್ಷಗಳವರೆಗೆ ಭಾರತದ ಮಕ್ಕಳ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಹಣಕಾಸು ಒದಗಿಸಬಹುದು ಎಂದು ಆಕ್ಸ್ ಫ್ಯಾಮ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ಕೋವಿಡ್ ಹೊಡೆತದಿಂದ 2021ರಲ್ಲಿ ಭಾರತದ ಶೇ.84ರಷ್ಟು ಕುಟುಂಬಗಳು ಗಣನೀಯವಾಗಿ ಕುಸಿದು ಪಾತಾಳಕ್ಕೆ ತಲುಪಿದೆ. ಇದೇ ಸಮಯದಲ್ಲಿ ಕೋಟ್ಯಧಿಪತಿಗಳಲ್ಲಿ ಲಕ್ಷಾಂತರ ಕೋಟಿ ರೂ. ಸಂಗ್ರಹಣೆಯಾಗಿದೆ. ದೇಶದ ತಳಮಟ್ಟದ ಶೇ.55.2ರಷ್ಟು ಜನರಲ್ಲಿ ಇರುವಷ್ಟು ಸಂಪತ್ತು 98 ಮಂದಿ ಸಿರಿವಂತರಲ್ಲಿ ಶೇಖರಣೆಯಾಗಿದೆ. ದೇಶದ ಶೇ.10ರಷ್ಟು ಅತಿ ದೊಡ್ಡ ಬಂಡವಾಳಗಾರರಲ್ಲಿ ಶೇ.53ರಷ್ಟು ಸಂಪತ್ತು ಸಂಗ್ರಹವಾಗಿದೆ. ಕಡು ಬಡತನದಲ್ಲಿ ಇರುವ ಭಾರತೀಯರ ಒಟ್ಟು ಸಂಪತ್ತಿನ ಮೌಲ್ಯ ಶೇ.13ರಷ್ಟು ಮಾತ್ರ.

ಭಾರತದ ಹತ್ತು ಮಂದಿ ಬಂಡವಾಳಗಾರರ ಸಂಪತ್ತು ಎಷ್ಟಿದೆಯೆಂದರೆ ಅವರು ದಿನ 7 ಕೋಟಿ ರೂ. ಖರ್ಚು ಮಾಡಿದರೂ ಅವರ ಬಳಿ ಇರುವ ಸಂಪತ್ತು ಕರಗಲು 84 ವರ್ಷ ಬೇಕಾಗುತ್ತದೆ.
ಇವರ ಬಳಿ ಇರುವ ಸಂಪತ್ತಿನ ಮೇಲೆ ತೆರಿಗೆ ವಿಧಿಸಿ ಅದರಿಂದ ಬರುವ 5.79 ಲಕ್ಷ ಕೋಟಿ ರೂ. ಆದಾಯದಲ್ಲಿ ಸರಕಾರ ಮುಂಗಡಪತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆ ಮಾಡುವ ಹಣದ ಪ್ರಮಾಣವನ್ನು ಶೇ.271ರಷ್ಟು ಹೆಚ್ಚಿಸಬಹುದು.

ಶೇ.98ರಷ್ಟು ಸಿರಿವಂತರ ಮೇಲೆ ಹೆಚ್ಚುವರಿಯಾಗಿ ಶೇ.1ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಿದರೆ ಅದರಿಂದ ಬರುವ ವರಮಾನದಿಂದ ಆಯುಷ್ಮಾನ ಭಾರತ ಯೋಜನೆಗೆ ಸುಮಾರು ಹತ್ತು ವರ್ಷಗಳ ಕಾಲ ಹಣಕಾಸು ಒದಗಿಸಬಹುದು.
ಭಾರತದ 142 ಬಂಡವಾಳಗಾರರ ಬಳಿ ಇರುವ ಒಟ್ಟು ಸಂಪತ್ತಿನ ಮೌಲ್ಯ 53 ಲಕ್ಷ ಕೋಟಿ ರೂ. ಇವರ ಪೈಕಿ 98 ಮಂದಿ ಸಿರಿವಂತರ ಬಳಿ ಇರುವ ಸಂಪತ್ತಿನ ಮೌಲ್ಯ 50 ಲಕ್ಷ ಕೋಟಿ ರೂ. ಇವರ ಆದಾಯದ ಮೇಲೆ ಇನ್ನೊಂದಿಷ್ಟು ತೆರಿಗೆ ವಿಧಿಸಿದರೆ ಮಕ್ಕಳು ಮತ್ತು ಮಹಿಳೆಯರ ಕಲ್ಯಾಣದ ಯೋಜನೆಗಳಿಗಾಗಿ ವ್ಯಯಿಸುವ ಬಜೆಟ್ ಪ್ರಮಾಣವನ್ನು ಶೇ.121ರಷ್ಟು ಹೆಚ್ಚಿಸಬಹುದು.
ಭಾರತದ 98 ಅತಿ ದೊಡ್ಡ ಬಂಡವಾಳಗಾರರ ಮೇಲೆ ವಿಧಿಸುವ ತೆರಿಗೆಯ ಪ್ರಮಾಣವನ್ನು ಕೊಂಚ ಹೆಚ್ಚಿಸಿದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎರಡು ವರ್ಷಗಳ ಖರ್ಚು ವೆಚ್ಚಗಳನ್ನು ಸರಿದೂಗಿಸಬಹುದು.
ಭಾರತದ 98 ಮಂದಿ ಶತ ಕೋಟ್ಯಧಿಶರ ಸಂಪತ್ತಿನ ಮೇಲೆ ಶೇ.1ರಷ್ಟು ತೆರಿಗೆ ವಿಧಿಸಿದರೆ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯ ಒಂದು ವರ್ಷದ ಖರ್ಚು ವೆಚ್ಚ ನಿಭಾಯಿಸಬಹುದು.

ಇದು ಭಾರತದ ಚಿತ್ರ ಮಾತ್ರವಲ್ಲ ಜಗತ್ತಿನ ಬಹುತೇಕ ಬಂಡವಾಳಶಾಹಿ ದೇಶದಲ್ಲಿ ಸಂಪತ್ತಿನ ಅಸಮಾನತೆ ಮಿತಿ ಮೀರಿದೆ. ಕೋವಿಡ್ ಪರಿಣಾಮವಾಗಿ ಜನಸಾಮಾನ್ಯರ, ಚಿಕ್ಕ ಪುಟ್ಟ ವ್ಯಾಪಾರಸ್ಥರ ಮತ್ತು ಮಧ್ಯಮ ವರ್ಗದ ಜನರ ಆದಾಯ ಕುಸಿದಿದೆ. ಸುಮಾರು 16 ಕೋಟಿ ಮಂದಿ ಕಡು ಬಡತನದ ವಿಷ ವರ್ತುಳಕ್ಕೆ ಸಿಲುಕಿದ್ದಾರೆ. ಅಸಮಾನತೆ ಮತ್ತು ಹಸಿವು ಹಾಗೂ ನಿರುದ್ಯೋಗಗಳಿಂದ ಜಗತ್ತಿನಲ್ಲಿ ಪ್ರತಿ ದಿನ 21 ಸಾವಿರ ಜನರು ಸಾಯುತ್ತಿದ್ದಾರೆ.
ಹೆಚ್ಚುತ್ತಿರುವ ಈ ಅಸಮಾನತೆಯನ್ನು ಕಡಿಮೆ ಮಾಡಲು ದುಡಿಯುವ ಜನರಿಗೆ ಸುರಕ್ಷತೆ ಒದಗಿಸಲು ಲಕ್ಷಾಂತರ ಕೋಟಿ ಸಂಪತ್ತಿನ ಮಾಲಕರಾಗಿರುವ ಬಂಡವಾಳಗಾರರ ಸಂಪತ್ತಿನ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಆ ಹಣದಿಂದ ಕಡು ಬಡತನಕ್ಕೆ ಸಿಲುಕಿದ, ರೋಗ ರುಜಿನಗಳಿಂದ ನರಳುತ್ತಿರುವ ಜನರಿಗೆ ಸುರಕ್ಷಿತ ಮತ್ತು ನೆಮ್ಮದಿಯ ಬದುಕನ್ನು ನೀಡಬಹುದು.
ಆದರೆ ಜನರನ್ನು ದೋಚಿ ಸಿರಿವಂತರಾದ ಇಂಥವರ ಆದಾಯದ ಮೇಲೆ ಸೂಕ್ತವಾದ ತೆರಿಗೆ ವಿಧಿಸಲು ನಮ್ಮ ಸರಕಾರ ತಯಾರಿಲ್ಲ. ಯಾಕೆ ಇಲ್ಲ ಎಂಬುದು ಎಲ್ಲರಿಗೂ ಗೊತ್ತು.

ಭಾರತದಲ್ಲಿ ಮತ್ತು ಜಗತ್ತಿನಲ್ಲಿ ಮೂರು ದಶಕಗಳ ಹಿಂದೆ ಇಂಥ ಜ್ವಲಂತ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರು ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಚರ್ಚಿಸುತ್ತಿದ್ದರು. ಹೋರಾಟಗಾರರು ಆ ಕಾಲದ ಕೋಟ್ಯಧಿಶರಾದ ಟಾಟಾ, ಬಿರ್ಲಾ ಮುಂತಾದವರ ಹೆಸರುಗಳ ಸುತ್ತ ಸಂವಾದ ಮಾಡುತ್ತಿದ್ದರು. ಆದರೆ ಈಗ ಜನರ ಮಾತಾಡುವ, ಹೋರಾಡುವ ಆದ್ಯತೆಯ ವಿಷಯಗಳು ಬದಲಾಗಿವೆ.
ಇಂದಿನ ಹೊಸ ಪೀಳಿಗೆಯ ತರುಣರಂತೂ ಸಂಪತ್ತಿನ ಅಸಮಾನತೆ ಬಗ್ಗೆ ಮಾತಾಡುವುದಿಲ್ಲ. ಅದರ ಬದಲಾಗಿ ಲವ್ ಜಿಹಾದ್, ದನ ಹತ್ಯೆ, ಮತಾಂತರ, ಹಿಜಾಬ್, ಕಾಶ್ಮೀರ ಫೈಲ್, ಮೀಸಲಾತಿ ರದ್ದತಿ ಬಗ್ಗೆ ಮಾತಾಡುತ್ತ ಅದಕ್ಕಾಗಿ ರಸ್ತೆಗೆ ಇಳಿದು ಹೊಡೆದಾಡಿ ಹೆಣವಾಗಿ ಬೀಳುತ್ತಿದ್ದಾರೆ.
ಇವರು ಹೀಗೆ ತಮ್ಮ ಬದುಕಿಗೆ ಸಂಬಂಧಪಡದ ವಿಷಯಗಳ ಬಗ್ಗೆ ಮಾತನಾಡಿ ಹೊಡೆದಾಡಿ ಸಾಯಲೆಂದು ಕೋಟ್ಯಧಿಶರು ಕೋಮುವಾದಿ ಸಂಘಟನೆಗಳಿಗೆ ಸಾವಿರಾರು ಕೋಟಿ ಹಣವನ್ನು ನೀಡುತ್ತಾರೆ. ಇದಕ್ಕಾಗಿ ಸಂಘಟನೆಗಳನ್ನು ಹುಟ್ಟು ಹಾಕಿದ್ದಾರೆ. ಒಂದು ವಿಷಯ ಮುಗಿದರೆ ಮತ್ತೊಂದು ವಿಷಯವನ್ನು ಆಡಳಿತ ವರ್ಗ ಅತ್ಯಂತ ವ್ಯವಸ್ಥಿತವಾಗಿ ಮುಂದೆ ಮಾಡುತ್ತದೆ.

ಕರ್ನಾಟಕದಲ್ಲಿ ಹಿಜಾಬ್ ವಿಷಯ ಕೋರ್ಟಿನಲ್ಲಿ ಮುಗಿಯಿತೆಂಬುದರಲ್ಲಿ ಶಾಲೆ ಕಾಲೇಜುಗಳಲ್ಲಿ ಭಗವದ್ಗೀತೆ ಬೋಧನೆಯ ಹೊಸ ಹುಸಿ ವಿಷಯವನ್ನು ಪ್ರಭುತ್ವ ಮುಂದೆ ಬಿಟ್ಟಿದೆ. ನಾವು ಕೂಡ ಅಂಬಾನಿ, ಅದಾನಿಗಳನ್ನು ಮರೆತು ಇದರ ಸುತ್ತ ಚರ್ಚೆಗೆ ಇಳಿಯುತ್ತೇವೆ. ಅಲ್ಲಿಗೆ ಭಾರತವನ್ನು ಬಾಧಿಸುತ್ತಿರುವ ಅಸಲಿ ವಿಷಯಗಳು ಮರೆ ಮಾಚಲ್ಪಡುತ್ತವೆ.
ಜನಸಾಮಾನ್ಯರನ್ನು, ವಿಶೇಷವಾಗಿ ದುಡಿಯುವ ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಚರ್ಚೆಯ ಕೇಂದ್ರ ಬಿಂದುವಾಗಿಸಲು ಎಡಪಂಥೀಯ ಪಕ್ಷಗಳು ಹೆಣಗಾಡುತ್ತಿವೆ. ಆದರೆ ಅವರ ಜೊತೆಗಿರುವ ಸಂಘಟಿತ ಕಾರ್ಮಿಕ, ನೌಕರ ವರ್ಗವೇ ಮೆದುಳಿನ ತುಂಬಾ ಜನಾಂಗೀಯ ದ್ವೇಷದ ವಿಷವನ್ನು ತುಂಬಿಕೊಂಡಿದೆ. ಹೀಗಾಗಿ ಚುನಾವಣೆಗಳಲ್ಲಿ ಮತ್ತೆ ಮತ್ತೆ ಅವರೇ ಗೆಲ್ಲುತ್ತಿದ್ದಾರೆ.
ಭಾರತ ಎಂಬುದು ಎಲ್ಲ ಸಮುದಾಯಗಳಿಗೆ ಸೇರಿದ ಭೂ ಪ್ರದೇಶ. ಎಲ್ಲರ ಮನಸ್ಸುಗಳು ಒಂದಾದರೆ ಈ ಒಕ್ಕೂಟ ರಾಷ್ಟ್ರ, ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತದೆ. ಆದರೆ ರಾಜಕೀಯ ಲಾಭಕ್ಕಾಗಿ, ತಮ್ಮ ಜಾತಿ ಶ್ರೇಷ್ಠತೆಯ ಹುನ್ನಾರಗಳಿಗಾಗಿ ಜನರನ್ನು ಜಾತಿ, ಮತ, ಧರ್ಮ, ಭಾಷೆಯ ಆಧಾರದಲ್ಲಿ ವಿಭಜಿಸುತ್ತ ಹೋದರೆ ಭಾರತ ಅವನತಿಯತ್ತ ಸಾಗುತ್ತದೆ. ಆದರೆ ಜನರ ನಡುವಿನ ಏಕತೆ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಬೇಕಾಗಿಲ್ಲ. ಅದಕ್ಕಾಗಿ ಜನರನ್ನು ವಿಭಜಿಸಿ ದ್ವೇಷದ ದಳ್ಳುರಿ ಎಬ್ಬಿಸುವ ಮಸಲತ್ತುಗಳನ್ನು ಮಾಡುತ್ತಲೇ ಇರುತ್ತಾರೆ.
ನಾವೀಗ ಮಾತಾಡಬೇಕಾಗಿರುವುದು ಸಂಪತ್ತಿನ ಅಸಮಾನ ಹಂಚಿಕೆಯ ಬಗ್ಗೆ. ಭಾರತದ 135 ಕೋಟಿ ಜನರಿಗೆ ಸೇರಿದ ಸಂಪತ್ತನ್ನು ದೋಚಿದ ಅಂಬಾನಿ, ಅದಾನಿಯಂಥ ದಗಾಕೋರ, ಕಾರ್ಪೊರೇಟ್ ಖದೀಮರ ಬಗ್ಗೆ. ಆದರೆ ತಮ್ಮ ಬಗ್ಗೆ ಜನ ಮಾತಾಡಬಾರದೆಂದು ಕೋಟ್ಯಂತರ ಹಣ ಚೆಲ್ಲಿ ಕೋಮುವಾದಿ ಸಂಘಟನೆಗಳನ್ನು ಅವರು ಸಾಕುತ್ತಾರೆ. ಅಧಿಕಾರದಲ್ಲಿ ತಮ್ಮವರನ್ನು ತಂದು ಕೂರಿಸುತ್ತಾರೆ.
ಜನಸಾಮಾನ್ಯರು ಕೋಮು, ಜಾತಿ, ಬೇಲಿಗಳನ್ನು ದಾಟಿ, ಅಸಮಾನತೆ, ಅನ್ಯಾಯಗಳ ವಿರುದ್ಧ, ಅಸ್ಪಶ್ಯತೆ, ಕಂದಾಚಾರಗಳ ವಿರುದ್ಧ ಧ್ವನಿಯೆತ್ತುವ ದಿನಗಳಿಗಾಗಿ ಕಾಯಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News