×
Ad

ತಲಪಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ: ನಾಗರಿಕ ಸಮಿತಿಯಿಂದ ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ

Update: 2022-03-21 12:38 IST

ಉಳ್ಳಾಲ, ಮಾ.21: ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಪಂಚಾಯತ್ ಗಮನಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ತಲಪಾಡಿ ನಾಗರಿಕ ಸಮಿತಿಯು ಸೋಮವಾರ ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ನಮಗೆ ನೀರು ಕೊಡಿ, ಇಲ್ಲದಿದ್ದರೆ ಗ್ರಾಪಂ ಕಚೇರಿ ಮುಚ್ಚಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ತೆರಿಗೆ ಸಮಯಕ್ಕೆ ವಸೂಲಿ ಮಾಡುತ್ತೀರಿ. ಆದರೆ ನೀರು ಸೇರಿದಂತೆ ಯಾವುದೇ ಸಮಸ್ಯೆ ಪರಿಹಾರ ಆಗುತ್ತಿಲ್ಲ. ಪಂಚಾಯತ್ ವ್ಯಾಪ್ತಿಯ ಹಲವಡೆ  ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂಬುದು ತಿಳಿದಿದ್ದರೂ ಪಂಚಾಯತ್ ಆಡಳಿತ ಮೌನ ವಾಗಿದೆ ಎಂದು ಆರೋಪಿಸಿ ಪಂಚಾಯತ್ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, 11 ಗಂಟೆಗೆ ತಲಪಾಡಿ ಪಂಚಾಯತ್ ಗೆ ಬಂದರೆ ಅಧ್ಯಕ್ಷರು, ಸಿಬ್ಬಂದಿ, ಅಧಿಕಾರಿಗಳು ಇರುವುದಿಲ್ಲ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಂದು ಜನರ ಸಮಸ್ಯೆಗಳಿಗೆ ಪರಿಹಾರ ನೀಡದ ಪಂಚಾಯತ್ ಕಚೇರಿ ನಮಗೆ ಬೇಕಾಗಿಲ್ಲ. ಈ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

 ಈ ವೇಳೆ ಒಂದು ವಾರದೊಳಗೆ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಸಿಬ್ಬಂದಿಯೊಬ್ಬರು ಹೇಳಿದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ವಾರದ ಹಿಂದೆ ಪಿಡಿಒಗೆ ಮನವಿ ನೀಡಿದ್ದೇವೆ. ಈ ಸಂದರ್ಭದಲ್ಲಿ ಇದೇ ಭರವಸೆ ಸಿಕ್ಕಿತ್ತು. ಇನ್ನು ಭರವಸೆ ಬೇಡ. ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು.

ಬಳಿಕ ನೀರಿನ ಗುತ್ತಿಗೆದಾರರಿಗೆ ದೂರವಾಣಿ ಕರೆ ಮಾಡಿದ ಸಿದ್ದೀಕ್ ತಲಪಾಡಿ ಎರಡು ದಿನಗಳೊಳಗೆ ನೀರಿನ ವ್ಯವಸ್ಥೆ ಮಾಡಬೇಕು. ಪಂಚಾಯತ್ ಹಣ ನೀಡದಿದ್ದರೆ ನಾನು ನೀಡುತ್ತೇನೆ ಎಂದರು. ಇದಕ್ಕೆ ಅವರು ಒಪ್ಪಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಎಸ್ ಡಿಪಿಐ ತಲಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಇಮ್ರಾನ್, ರಶೀದ್ ಇಂಜಿನಿಯರ್, ಯು.ಪಿ.ಹನೀಫ್, ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್, ಮೊಯ್ದಿನ್ ತಲಪಾಡಿ, ಅಬ್ದುಲ್ ಹಕೀಂ ಕೆ.ಸಿ.ನಗರ ಸಹಿತ ಹಲವು ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News