ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಆಗಿ ಕಾರ್ಕಳ ಉತ್ಸವ: ಸುನಿಲ್ ಕುಮಾರ್
ಕಾರ್ಕಳ : ಹತ್ತು ದಿನಗಳ ಕಾಲ ವೈಭವೋಪೇತವಾಗಿ ನಡೆದ ‘ಕಾರ್ಕಳ ಉತ್ಸವ’ ಈಗ ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಆಗಿ ಪರಿವರ್ತನೆಗೊಂ ಡಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮಾ.೧೦ರಿಂದ ೨೦ರವರೆಗೆ ಮೊದಲ ಬಾರಿ ಆಯೋಜನೆಗೊಂಡ ಕಾರ್ಕಳ ಉತ್ಸವ ಈಗ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಾತ್ರವಲ್ಲ ಇಂದು ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲೂ ಜನಪ್ರಿಯಗೊಂಡಿದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೋನ ಎರಡು ಅಲೆಗಳಿಂದ ರಾಜ್ಯದ ಆರ್ಥಿಕತೆ ಮಾತ್ರವಲ್ಲ, ಜನರ ಮೈಮನಸ್ಸುಗಳೂ ಜಡ್ಡುಗಟ್ಟಿದ್ದು, ಯಾವುದೇ ಸಾಹಸಕ್ಕೆ ಕೈ ಹಾಕಬೇಕಿದ್ದರೂ ಹತ್ತಾರು ಬಾರಿ ಯೋಚಿಸಬೇಕಾದ ಸ್ಥಿತಿ ಇತ್ತು. ಇಂಥ ಸಂದರ್ಭದಲ್ಲಿ ಕೈಗೆತ್ತಿ ಕೊಂಡ ಈ ಕಾರ್ಯ ಈಗ ಸಾಫಲ್ಯಗೊಂಡಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಹತ್ತು ದಿನಗಳ ಕಾರ್ಯಕ್ರಮದಲ್ಲಿ ಉತ್ಸವ ಮೆರವಣಿಗೆ ದಾಖಲೆ ಬರೆಯಿತು. ಕರಾವಳಿಯೂ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಹತ್ತು ಸಾವಿರ ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಮಾ.೧೯ರಂದು ಏಕಕಾಲದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಕರಾವಳಿ ಇತಿಹಾಸದಲ್ಲೇ ಮೈಲಿಗಲ್ಲು. ಸುಮಾರು ೭೫ ಸಾವಿರದಷ್ಟು ಜನರು ಉತ್ಸವದಲ್ಲಿ ಭೋಜನ ಸವಿದಿದ್ದು, ೧೧೦ ಫುಡ್‌ಪಾರ್ಕ್‌ಗಳು ತುಳುನಾಡಿನ ಖಾದ್ಯವನ್ನು ಉಣಬಡಿ ಸಿದವು. ಉತ್ಸವ ಕೇವಲ ಸಾಂಸ್ಕೃತಿಕ ವೈಭವ ಮಾತ್ರವಾಗಿರದೇ, ಕಾರ್ಕಳ ಸೇರಿದಂತೆ ಕರಾವಳಿಯ ಆರ್ಥಿಕ ಚಟುವಟಿಕೆಗೂ ಹೊಸ ಚೈತನ್ಯ ನೀಡಿದ್ದು, ರಾಜ್ಯದ ಬ್ರ್ಯಾಂಡ್ ಆಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.