ಅಸ್ಸಾಂ: 2016 ರಲ್ಲಿ ಮೃತಪಟ್ಟ ವ್ಯಕ್ತಿಗೆ ಪೌರತ್ವ ಸಾಬೀತುಪಡಿಸುವಂತೆ ನೋಟಿಸ್‌ ನೀಡಿದ ನ್ಯಾಯಮಂಡಳಿ!

Update: 2022-03-22 19:28 GMT

ಡಿಸ್ಪುರ್:‌ ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಯು, 2016 ರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಅವರು ಭಾರತದ ಪ್ರಜೆಯೇ ಎಂದು ಸಾಬೀತುಪಡಿಸಲು ನೋಟಿಸ್ ಕಳುಹಿಸಿದೆ. ಮಾರ್ಚ್ 15 ರಂದು, ನ್ಯಾಯಮಂಡಳಿ ಮೃತ ಶ್ಯಾಮ ಚರಣ್ ದಾಸ್ ಅವರನ್ನು ಮಾರ್ಚ್ 30 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ನೀಡಿದೆ ಎಂದು ವರದಿಯಾಗಿದೆ.

ವಿಶೇಷವೆಂದರೆ, ಅದೇ ನ್ಯಾಯಾಲಯವು ಸೆಪ್ಟೆಂಬರ್ 23, 2016 ರಲ್ಲಿ ಚರಣ್ ದಾಸ್ ಅವರ ಕುಟುಂಬವು ದಾಸ್‌ ರ ಮರಣ ಪ್ರಮಾಣ ಪತ್ರ ಸಲ್ಲಿಸಿದ ಮೇಲೆ ಅವರ ಪೌರತ್ವಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಅಸ್ಸಾಂ ಸರ್ಕಾರವು ನೀಡಿದ ಮರಣ ಪ್ರಮಾಣಪತ್ರದ ಪ್ರಕಾರ, 74 ವರ್ಷ ಪ್ರಾಯವಾಗಿದ್ದ ದಾಸ್ ಅವರು ಮೇ 6, 2016 ರಂದು ನಿಧನರಾಗಿದ್ದಾರೆ.

ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಅವರನ್ನು ದಾಖಲೆ ರಹಿತ ವಲಸಿಗ ಎಂದು ಶಂಕಿಸಿ ಗಡಿ ಪೊಲೀಸರು ದಾಸ್ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ, ಅದರ ನಂತರ ನ್ಯಾಯಾಲಯವು ನೋಟಿಸ್ ನೀಡಿದೆ ಎಂದು scroll.in ವರದಿ ಮಾಡಿದೆ.

ದಾಸ್ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಜನವರಿ 1, 1966 ಮತ್ತು ಮಾರ್ಚ್ 23, 1973 ರ ನಡುವೆ ಅಸ್ಸಾಂಗೆ ಪ್ರವೇಶಿಸಿ ಸಿಲ್ಚಾರ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ಆರೋಪಿಸಿರುವುದಾಗಿ ನ್ಯಾಯಮಂಡಳಿಯ ನೋಟಿಸ್‌ ನಲ್ಲಿ ಹೇಳಲಾಗಿದೆ.

ತನ್ನ ತಂದೆಯ ಪೌರತ್ವವನ್ನು ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ಹೊಂದಿದ್ದರೂ, ತಮ್ಮ ಕುಟುಂಬವು ನ್ಯಾಯಾಲಯದಲ್ಲಿ ಬಹಳ ವರ್ಷಗಳ ಕಾಲ ಹೋರಾಡಿದೆ ಎಂದು ದಾಸ್ ಅವರ ಪುತ್ರಿ ಬೇಬಿ ದಾಸ್ ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ ಎಂದು ನಾವು ಭಾವಿಸಿದ್ದೆವು‌, ಆದರೆ ಅವರು ಜೀವಂತವಾಗಿದ್ದಾರೆ ಎಂದು ನ್ಯಾಯಾಲಯ ಹೇಳುತ್ತದೆ. ಈಗ, ಅವರ ಮರಣದ ನಂತರ, ನಾವು ಅವರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿರುವುದಾಗಿ HindustanTimes ವರದಿ ಮಾಡಿದೆ.

ಈ ಘಟನೆಯು ವ್ಯವಸ್ಥೆಯ ಮೇಲೆ ಕಳಪೆಯಾಗಿ ಪ್ರತಿಫಲಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಕಮಲ್ ಚಕ್ರವರ್ತಿ ಹೇಳಿದ್ದಾರೆ. ಪೊಲೀಸರ ಕ್ಷೇತ್ರ ಪರಿಶೀಲನೆಯ ಆಧಾರದ ಮೇಲೆ ಮೃತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಇದರರ್ಥ, ಪೊಲೀಸರು ಆರೋಪಿಯ ಮನೆಗೆ ದಾಖಲೆಗಳನ್ನು ಪರಿಶೀಲಿಸಲು ಸಹ ಭೇಟಿ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News