×
Ad

ಜಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಡಾ. ಕುಮಾರ್

Update: 2022-03-23 20:44 IST

ಮಂಗಳೂರು : ಮಳೆ ನೀರು ಕೊಯ್ಲಿಗೆ ಜಿಲ್ಲೆಯ ನಾಗರಿಕರು ಗಮನ ಹರಿಸುವ ಅಗತ್ಯವಿದೆ ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ಹೇಳಿದರು.

ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ಪಚ್ಛ ಭಾರತ್ ಮಿಷನ್ (ಗ್ರಾ), ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದ.ಕ.ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಜಲ ದಿನದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯ ಪ್ರತಿಯೊಬ್ಬ ನಾಗರಿಕನು ವೈಜ್ಞಾನಿಕ ವಿಧಾನದ ಮೂಲಕ ಪ್ರತಿ ವರ್ಷ ನಾಲ್ಕು ಸಾವಿರ ಮಿಲಿ ಮೀಟರ್ ನೀರನ್ನು ಮಳೆ ಕೊಯ್ಲು ಮೂಲಕ ಸಂಗ್ರಹಿಸಬಹುದು. ಜೊತೆಗೆ ಕೊಳವೆ ಬಾವಿಯ ಅಕ್ಕ-ಪಕ್ಕ ಅಂರ್ತಜಲ ಮರು ಪೂರಣ ಘಟಕ ಸ್ಥಾಪಿಸಿಕೊಂಡರೆ ಜಲಸಂರಕ್ಷಣೆ ಸಾಧ್ಯ. ಮುಖ್ಯವಾಗಿ ಸರಕಾರದ ಯೋಜನೆಗಳನ್ನು ಬಳಸಿ ಕೊಂಡು ಕೆರೆ, ಬಾವಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಡಾ.ಕುಮಾರ್ ಸಲಹೆ ನೀಡಿದರು.

ದ.ಕ. ಜಿಲ್ಲೆಯಲ್ಲಿ ಇದೀಗ ನೀರಿನ ಅಭಾವ ಇಲ್ಲದಿದ್ದರೂ ಮುಂದೊಂದು ನೀರಿನ ಸಮಸ್ಯೆ ಉದ್ಬವಿಸಬಹುದು. ಅದಕ್ಕಾಗಿ ಮಳೆ ನೀರು ಕೊಯ್ಲು ಪರಿಣಾಮಕಾರಿ ವಿಧಾನವಾಗಿದೆ. ನೀರಿನ ಮಹತ್ವ ಅರಿಯುವುದಕ್ಕಾಗಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಪ್ರಪಂಚದಾದ್ಯಂತ ಇಂದು ವಿಶ್ವಜಲ ದಿನ ಆಚರಿಸಲಾಗುತ್ತಿದೆ ಎಂದ ಕುಮಾರ್  ಪ್ರತಿಯೊಂದು ಜೀವಿಗೂ ನೀರು ಜೀವ ಜಲವಾಗಿದೆ, ಇದೀಗ ಕೈಗಾರಿಕರಣ, ನಗರೀಕರಣಗಳಿಂದಾಗಿ ನೀರು ಮಲಿನಗೊಳ್ಳುತ್ತಿದೆ. ಈ ದಿಸೆಯಲ್ಲಿ ನಾಗರೀಕರು ಜಲ ಜಾಗೃತಿಯ ಬಗ್ಗೆ ಗಮನ ಹರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ವರ್ಣೇಕರ್ ಮಾತನಾಡಿದರು.

ದ.ಕ.ಜಿಪಂ ಉಪ ಕಾರ್ಯದರ್ಶಿ ಹಾಗೂ ಸ್ವಚ್ಚ ಭಾರತ್ ಮಿಷನ್‌ನ ನೋಡಲ್ ಅಧಿಕಾರಿ ಕೆ.ಆನಂದ್ ಕುಮಾರ್, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಜಿ. ನರೇಂದ್ರ ಬಾಬು, ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಂಧ್ಯಾ ಕೆ.ಎಸ್., ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೇಣುಗೋಪಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News